ಮೂಲಸೌಕರ್ಯ ಅಭಿವೃದ್ಧಿಗೆ ಜಿಲ್ಲೆಯ 29 ಗ್ರಾಮ ಆಯ್ಕೆ

KannadaprabhaNewsNetwork | Published : Sep 26, 2024 9:49 AM

ಸಾರಾಂಶ

ತುಮಕೂರು: ಪ್ರಧಾನ ಮಂತ್ರಿ ಜನಜಾತಿಯ ಉನ್ನತ ಗ್ರಾಮ ಅಭಿಯಾನದಡಿ ಅಭಿವೃದ್ಧಿಪಡಿಸಲು ಪರಿಶಿಷ್ಟ ಪಂಗಡದ ಜನಾಂಗದವರು ಹೆಚ್ಚಾಗಿರುವ ಜಿಲ್ಲೆಯ ತುಮಕೂರು, ಕೊರಟಗೆರೆ, ಶಿರಾ, ಪಾವಗಡ, ಮಧುಗಿರಿ, ಗುಬ್ಬಿ, ಚಿಕ್ಕನಾಯಕನಹಳ್ಳಿ ತಾಲೂಕು ವ್ಯಾಪ್ತಿಯ 29 ಗ್ರಾಮಗಳನ್ನು ಆಯ್ಕೆ ಮಾಡಿದ್ದು, ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ.

ತುಮಕೂರು: ಪ್ರಧಾನ ಮಂತ್ರಿ ಜನಜಾತಿಯ ಉನ್ನತ ಗ್ರಾಮ ಅಭಿಯಾನದಡಿ ಅಭಿವೃದ್ಧಿಪಡಿಸಲು ಪರಿಶಿಷ್ಟ ಪಂಗಡದ ಜನಾಂಗದವರು ಹೆಚ್ಚಾಗಿರುವ ಜಿಲ್ಲೆಯ ತುಮಕೂರು, ಕೊರಟಗೆರೆ, ಶಿರಾ, ಪಾವಗಡ, ಮಧುಗಿರಿ, ಗುಬ್ಬಿ, ಚಿಕ್ಕನಾಯಕನಹಳ್ಳಿ ತಾಲೂಕು ವ್ಯಾಪ್ತಿಯ 29 ಗ್ರಾಮಗಳನ್ನು ಆಯ್ಕೆ ಮಾಡಿದ್ದು, ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ.ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮೀಸಲಿರಿಸಿದ 79.156 ಕೋಟಿ ರು. ಗಳ ಅನುದಾನದಲ್ಲಿ ಬುಡಕಟ್ಟು ಸಮುದಾಯಗಳು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ದೇಶದ 63 ಸಾವಿರ ಗ್ರಾಮಗಳನ್ನು ಅಭಿವೃದ್ಧಿ ಪಡಿಸಲು ಈ ಕ್ರಿಯಾಯೋಜನೆಯನ್ನು ರೂಪಿಸಲಾಗಿದೆ. ಕೇಂದ್ರ ಬುಡಕಟ್ಟು ಮಂತ್ರಾಲಯ ಈ ಯೋಜನೆಯನ್ನು ಅನುಷ್ಠಾನಗೊಳಿಸುವ ಜವಾಬ್ದಾರಿ ಹೊತ್ತಿದೆ. ದೇಶದ ಸುಮಾರು 5 ಕೋಟಿ ಜನರಿಗೆ ಯೋಜನೆಯಿಂದ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.

2024-25 ರಿಂದ 2028-29ನೇ ಸಾಲಿನವರೆಗೆ 5 ವರ್ಷಗಳಲ್ಲಿ ಯೋಜನೆಯನ್ನು ಪೂರ್ಣಗೊಳಿಸಲಾಗುವುದು. 2024-25 ರಿಂದ 2025-26ನೇ ಸಾಲಿಗೆ ಮೊದಲ ಹಂತದಲ್ಲಿ 4 ಸಾವಿರ ಕೋಟಿ ರು.ಗಳ ಅನುದಾನವನ್ನು ಪ್ರಧಾನ ಮಂತ್ರಿ ಜನಜಾತಿಯ ಉನ್ನತ ಗ್ರಾಮ ಅಭಿಯಾನದಡಿ ನಿಗದಿ ಮಾಡಲಾಗಿದ್ದು, ಈ ಅಭಿಯಾನದಡಿ ತುಮಕೂರು ಜಿಲ್ಲೆಯಲ್ಲಿ ಪರಿಶಿಷ್ಟ ವರ್ಗದ ಜನಾಂಗದವರು ಹೆಚ್ಚಾಗಿರುವ 29 ಗ್ರಾಮಗಳನ್ನು ಆಯ್ಕೆ ಮಾಡಿ ಭೌತಿಕ ಗುರಿ ನಿಗದಿ ಪಡಿಸಲಾಗಿದ್ದು, ವಿವಿಧ 17 ಇಲಾಖೆಗಳು ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಿವೆ ಎಂದು ಮಾಹಿತಿ ನೀಡಿದ್ದಾರೆ.

ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಪಕ್ಕಾ ಮನೆ, ಸಂಪರ್ಕ ರಸ್ತೆಗಳು, ಗ್ರಾಮೀಣ ನೀರು ಸರಬರಾಜು ಇಲಾಖೆಯಿಂದ ನೀರು ಸರಬರಾಜು(ಜೆಜೆಎಂ), ವಿದ್ಯುತ್ ಇಲಾಖೆಯಿಂದ ಮನೆಗಳ ವಿದ್ಯುದೀಕರಣ (ಆರ್‌ಡಿಎಸ್‌ಎಸ್), ಹೊಸ ಮತ್ತು ನವೀಕರಿಸಬಹುದಾದ ಇಂಧನ ಇಲಾಖೆಯಿಂದ ಆಫ್-ಗ್ರಿಡ್ ಸೌರ, ಹೊಸ ಸೌರ ವಿದ್ಯುತ್ ಯೋಜನೆ, ಆರೋಗ್ಯ ಇಲಾಖೆಯಿಂದ ಸಂಚಾರಿ ವೈದ್ಯಕೀಯ ಘಟಕಗಳು, ರಾಷ್ಟ್ರೀಯ ಆರೋಗ್ಯ ಮಿಷನ್, ಆಯುಷ್ಮಾನ್ ಕಾರ್ಡ್, ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಲಾಖೆಯಿಂದ ಎಲ್‌ಪಿಜಿ ಪಿಎಂ ಉಜ್ಜಲ ಯೋಜನೆಯಡಿ ಸಂಪರ್ಕಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅಂಗನವಾಡಿ ಕೇಂದ್ರಗಳ ಅಭಿವೃದ್ಧಿ ಪೋಷಣ್ ಅಭಿಯಾನ್, ಶಿಕ್ಷಣ ಇಲಾಖೆಯಿಂದ ವಿದ್ಯಾರ್ಥಿನಿಲಯಗಳ ನಿರ್ಮಾಣ, ಆಯುಷ್ ಇಲಾಖೆಯಿಂದ ಪೋಷಣ್ ವಾಟಿಕಾಸ್, ಟೆಲಿಕಾಂ ಇಲಾಖೆಯಿಂದ ಯುನಿವರ್ಸಲ್ ಸೇವೆ, ಕೌಶಾಲ್ಯಾಭಿವೃದ್ಧಿ ಇಲಾಖೆಯಿಂದ ಸ್ಕಿಲ್ ಇಂಡಿಯಾ, ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್ ಇಲಾಖೆಯಿಂದ ಡಿಜಿಟಲ್ ಇನಿಶೀಯೇಟಿವ್ಸ್, ಕೃಷಿ ಇಲಾಖೆಯಿಂದ ಸುಸ್ಥಿರ ಕೃಷಿ ಉತ್ತೇಜನ, ಮೀನುಗಾರಿಕೆ ಇಲಾಖೆಯಿಂದ ಮೀನು ಸಂಸ್ಕೃತಿ ಬೆಂಬಲ, ಪಶುಸಂಗೋಪನೆ ಇಲಾಖೆಯಿಂದ ಜಾನುವಾರು ಪಾಲನೆ, ಪಂಚಾಯತ್ ರಾಜ್ ಇಲಾಖೆಯಿಂದ ಸಾಮರ್ಥ್ಯ ಕಟ್ಟಡ, ಪ್ರವಾಸೋದ್ಯಮ ಇಲಾಖೆಯಿಂದ ಟ್ರೈಬಲ್ ಹೋಂ ಸ್ಟೇಸ್, ಸ್ವದೇಶ ದರ್ಶನ ಬುಡಕಟ್ಟು ವ್ಯವಹಾರಗಳ ಸಚಿವಾಲಯದಿಂದ ಪ್ರಧಾನಮಂತ್ರಿ ಆದಿ ಆದರ್ಶ ಗ್ರಾಮ ಯೋಜನೆ ಅನುಷ್ಠಾನಗೊಳ್ಳಲಿವೆ ಎಂದು ತಿಳಿಸಿದ್ದಾರೆ. ಅಭಿಯಾನದಡಿ ಜಿಲ್ಲೆಯಲ್ಲಿ 100 ಬುಡಕಟ್ಟು ಬಹು ಉಪಯೋಗಿ ಮಾರ್ಕೆಟಿಂಗ್ ಕೇಂದ್ರಗಳು, ಆಶ್ರಮ ಶಾಲೆಗಳು, ವಿದ್ಯಾರ್ಥಿನಿಲಯಗಳು, ಸರ್ಕಾರಿ ಅಥವಾ ರಾಜ್ಯ ಬುಡಕಟ್ಟು ವಸತಿ ಶಾಲೆಗಳ ಮೂಲಭೂತ ಸೌಕರ್ಯಗಳನ್ನು ಸುಧಾರಿಸುವುದು, ಕೌನ್ಸಿಲಿಂಗ್ ಬೆಂಬಲ, ಅರಣ್ಯ ಹಕ್ಕು ಕಾಯ್ದೆ-೨೦೦೬ ಮತ್ತು ಸಮುದಾಯ ಅರಣ್ಯ ಹಕ್ಕು ನಿರ್ವಹಣೆ ಮಧ್ಯಸ್ಥಿಕೆಗಳಿಗೆ ಬೆಂಬಲ, ಯೋಜನಾ ನಿರ್ವಹಣಾ ನಿಧಿಗಳು, ಉತ್ಪನ್ನ ಪ್ರದರ್ಶನ ನೀಡುವ ಬುಡಕಟ್ಟು ಜಿಲ್ಲೆಗಳಿಗೆ ಪ್ರೋತ್ಸಾಹ ನೀಡಲು ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ. ತುಮಕೂರು ಜಿಲ್ಲೆಯ, ತುಮಕೂರು, ಕೊರಟಗೆರೆ, ಸಿರಾ, ಪಾವಗಡ, ಮಧುಗಿರಿ, ಗುಬ್ಬಿ, ಚಿಕ್ಕನಾಯಕನಹಳ್ಳಿ ತಾಲೂಕುಗಳ ವ್ಯಾಪ್ತಿಗೆ ಒಳಪಟ್ಟ 29 ಗ್ರಾಮಗಳ ಎಲ್ಲಾ ಬುಡಕಟ್ಟು ಜನಾಂಗದವರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.

Share this article