ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ಮಾನವನ ಬದುಕು ಒತ್ತಡಗಳಿಂದ ಬಳಲಿ ಹೋಗಿದೆ. ಯಂತ್ರದಂತೆ ದುಡಿದರೂ ಸಂಪತ್ತು ಗಳಿಸಿದರೂ ಶಾಂತಿ ಕಾಣುತ್ತಿಲ್ಲ. ಬಾಳಿನ ವಿಕಾಸಕ್ಕೆ ಆಧ್ಯಾತ್ಮದ ಅರಿವು ಬೇಕು. ಆತ್ಮ ಸಂಯಮ ಆಧ್ಯಾತ್ಮ ಜೀವನದ ಅಡಿಪಾಯ ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಅಭಿಪ್ರಾಯಪಟ್ಟರು.ರಂಭಾಪುರಿ ಪೀಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರ ಸ್ವಾಮಿ ಮಹಾರಥೋತ್ಸವದ ಅಂಗವಾಗಿ ಸೋಮವಾರ ವೀರಗಾಸೆ-ಪುರವಂತರ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ವಿಜ್ಞಾನ ತಂತ್ರಜ್ಞಾನದಿಂದ ಮನುಷ್ಯನ ಪ್ರಗತಿ ಅದ್ಭುತವಾಗಿದೆ. ಭೌತಿಕ ಸಿರಿ ಸಂಪತ್ತು ಅಧಿಕಾರ ನೆಮ್ಮದಿ ತರಲಾರದು. ಸತ್ಯ ಧರ್ಮದ ವಿಷಯದಲ್ಲಿ ಒಂದಿಷ್ಟಾದರೂ ಆಧ್ಯಾತ್ಮ ಜ್ಞಾನದ ಅರಿವು ಇರಬೇಕಾದುದು ಅವಶ್ಯಕ. ಬಡವನಿಗೆ ನೆಮ್ಮದಿ ಇರುತ್ತೆ ಹಣ ಇರಲ್ಲ. ಶ್ರೀಮಂತನಿಗೆ ಹಣ ಇರುತ್ತೆ ನೆಮ್ಮದಿ ಇರಲ್ಲ. ಹಣ ನೆಮ್ಮದಿ ಇದ್ದವರಿಗೆ ಒಳ್ಳೆಯ ಗುಣ ಇರಲ್ಲ. ಹಣ ಗುಣ ಮತ್ತು ನೆಮ್ಮದಿ ಇದ್ದವರು ಈ ಭೂಮಿ ಮೇಲೆ ಜಾಸ್ತಿ ದಿನ ಇರಲ್ಲ ಎಂದು ಶ್ರೀಗಳು ಎಚ್ಚರಿಸಿದ್ದಾರೆ.ಇಂದಿನ ವಿಜ್ಞಾನ ಯುಗದಲ್ಲಿಯೂ ಶ್ರೀ ವೀರಭದ್ರಸ್ವಾಮಿ ಲೀಲೆ ಪವಾಡಗಳು ಅದ್ಭುತವಾಗಿವೆ. ದುಷ್ಟಶಕ್ತಿಗಳ ನಿರ್ಮೂಲನೆಗೆ ಮತ್ತು ಶಿವಶಕ್ತಿ ಸಂವರ್ಧನೆ ಶ್ರೀ ವೀರಭದ್ರಸ್ವಾಮಿ ಅವತಾರವಾಗಿದೆ. ಜಗದ ಕತ್ತಲೆ ಕಳೆದು ಜ್ಞಾನದ ಬೆಳಗು ಬೀರಲು ಗುರು ಬಹಳಷ್ಟು ಮುಖ್ಯ. ವೀರಶೈವ ಸಂಸ್ಕೃತಿ ಬೆಳವಣಿಗೆಗೆ ವೀರಗಾಸೆ ಮತ್ತು ಪುರವಂತರ ಕೊಡುಗೆ ಅಪೂರ್ವವಾದುದು. ಪ್ರಾಚೀನ ಸಂಸ್ಕೃತಿ ಅರಿವು ಮೂಡಿಸುವುದೇ ಈ ಸಮಾರಂಭದ ಮೂಲ ಉದ್ದೇಶವೆಂದರು.
ಸಮಾರಂಭ ಉದ್ಘಾಟಿಸಿದ ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿ ಮಾತನಾಡಿ, ಶಿವ ಧರ್ಮದ ತಂಗಾಳಿ ಜೀವನ ಉನ್ನತಿಗೆ ಸಹಕಾರಿ. ನಿರ್ಭಯವಾಗಿ ಬಾಳುವುದೇ ನಿಜವಾದ ಬದುಕು. ಬದುಕು ಕಲಿಸುವ ಪಾಠಗಳು ಚಿತ್ರ ವಿಚಿತ್ರ. ಸಹನೆ ತಾಳ್ಮೆ ಜೊತೆಗಿಲ್ಲದಿದ್ದರೆ ಉನ್ನತಿ ಸಾಧ್ಯವಿಲ್ಲ. ವೀರಶೈವ ಧರ್ಮದಲ್ಲಿ ವೀರ ಗಾಸೆ ಮತ್ತು ಪುರವಂತರಿಗೆ ವಿಶೇಷ ಗೌರವವಿದೆ. ವೀರಭದ್ರನ ಪರಾಕ್ರಮ ಧರ್ಮ ಸಂರಕ್ಷಣೆಗೆ ಮೂಲವಾಗಿದೆ ಎಂದರು.ಧರ್ಮ ಧ್ವಜಾರೋಹಣ ನೆರವೇರಿಸಿದ ಚಿಕ್ಕಮಗಳೂರು ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ ಮಾನವೀಯ ಸಂಬಂಧ ಗಳು ಶಿಥಿಲಗೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಧರ್ಮ ಪ್ರಜ್ಞೆ, ರಾಷ್ಟ್ರ ಪ್ರಜ್ಞೆ ಹಾಗೂ ಸಾಮಾಜಿಕ ಪ್ರಜ್ಞೆ ಅವಶ್ಯಕ. ಮಾನವ ಧರ್ಮಕ್ಕೆ ಜಯವಾಗಲಿ ಎನ್ನುವ ಶ್ರೀ ರಂಭಾಪುರಿ ಪೀಠದ ಸಂದೇಶ ಭಾವೈಕ್ಯತೆಗೆ ಸಾಕ್ಷಿ. ಶ್ರೀ ಜಗದ್ಗುರು ರೇಣುಕಾ ಚಾರ್ಯರು ಸಕಲ ಜೀವಾತ್ಮರಿಗೆ ಶುಭ ಹಾರೈಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.
ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮಿ ನೇತೃತ್ವ ವಹಿಸಿದ್ದರು. ಕವಲೇದುರ್ಗ ಭುವನಗಿರಿ ಸಂಸ್ಥಾನ ಮಠದ ಮರುಳಸಿದ್ಧ ಶಿವಾಚಾರ್ಯ ಸ್ವಾಮಿ, ಮಳಲಿ ಸಂಸ್ಥಾನ ಮಠದ ಡಾ. ನಾಗಭೂಷಣ ಶ್ರೀಗಳು, ಕಡೇನಂದಿ ಹಳ್ಳಿ ರೇವಣಸಿದ್ದೇಶ್ವರ ಶ್ರೀಗಳು, ಕಾರ್ಜುವಳ್ಳಿ ಸದಾಶಿವ ಶ್ರೀಗಳು ಶ್ರೀ ರಂಭಾಪುರಿ ಜಗದ್ಗುರು ಗುರುರಕ್ಷೆ ನೀಡಿ ಆಶಿರ್ವದಿ ಸಿದರು. ತೆಂಡೆಕೆರೆ, ಧನಗೂರು, ಸಂಗೊಳ್ಳಿ, ಬೇರುಗಂಡಿ, ದೋರನಹಳ್ಳಿ, ಅಚಲೇರಿ, ದೊಡ್ಡಸಗರ, ಸಿದ್ಧರಬೆಟ್ಟ, ನಂದಿತಾವರೆ ಶ್ರೀಗಳು ಉಪಸ್ಥಿತರಿದ್ದರು.ಬೆಳಿಗ್ಗೆ ಧರ್ಮ ಧ್ವಜಾರೋಹಣ, ಹರಿದ್ರಾಲೇಪನ ಅಂಗವಾಗಿ ಬೋಜಪ್ಪ ನಾಗರಾಜ ಹೊಸಮನೆ, ಶ್ರೀ ವೀರಭದ್ರೇಶ್ವರ ಪುರವಂತಿಕೆ ಕಲಾತಂಡ ನ್ಯಾಮತಿ, ಶ್ರೀ ವೀರಭದ್ರೇಶ್ವರ ತರುಣ ಸಂಘ ಯಲವಿಗಿ ಇವರಿಂದ ಬಸವರಾಜ ಹೊಸಕಟ್ಟಿ ನ್ಯಾಮತಿ ಇವರ ಮೇಲ್ವಿಚಾರಣೆಯಲ್ಲಿ ಗುಗ್ಗುಳ ಕಾರ್ಯ ವೈಭವದಿಂದ ನಡೆಯಿತು.
ದಾವಣಗೆರೆ ಶುಭಾ ಈಶ್ವರಪ್ಪ ಶೆಟ್ಟರ್, ಲಲಿತಾ ಶಿವಯೋಗಿ, ಮಲ್ಲಮ್ಮ-ಪ್ರಭುಶಾಸ್ತ್ರಿ ಮತ್ತು ಗಿರಿಜಾ ಕೆ.ವಿ.ಮಲ್ಲಿಕಾರ್ಜುನ ಇವರು ಗುಗ್ಗುಳ ಕಾರ್ಯದ ಸೇವೆ ಸಲ್ಲಿಸಿ ಶ್ರೀ ರಂಭಾಪುರಿ ಜಗದ್ಗುರುಗಳಿಂದ ಗುರುರಕ್ಷೆ ಪಡೆದರು.೧೦ಬಿಹೆಚ್‌ಆರ್ ೧:
ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವದ ಅಂಗವಾಗಿ ಶ್ರೀ ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ವೀರಗಾಸೆ-ಪುರವಂತರ ಸಮಾರಂಭವನ್ನು ಎಡೆಯೂರು ಶ್ರೀಗಳು ಉದ್ಘಾಟಿಸಿದರು.