ಹೊಸಪೇಟೆ: ಮಹಿಳೆ ಅಬಲೆಯಲ್ಲ ಸಬಲೆ. ಆತ್ಮರಕ್ಷಣೆ ಎಂಬುದು ಕೇವಲ ದೈಹಿಕ ಶಕ್ತಿಯ ಪ್ರದರ್ಶನವಲ್ಲ, ಅದು ಆತ್ಮವಿಶ್ವಾಸದ ಸಂಕೇತ. ಪ್ರತಿಯೊಬ್ಬ ಹೆಣ್ಣು ಸಂಕಷ್ಟದ ಸಮಯದಲ್ಲಿ ತನ್ನನ್ನು ತಾನು ರಕ್ಷಿಸಿಕೊಳ್ಳುವ ಕೌಶಲ್ಯ ಹೊಂದಿರಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ತಿಳಿಸಿದರು.
ಪ್ರಸ್ತುತ ಸಮಾಜದಲ್ಲಿ ಮಹಿಳೆಯರು ವೈದ್ಯಕೀಯ, ಕಲೆ, ವಾಸ್ತುಶಿಲ್ಪ, ಉದ್ಯಮ, ವಿಜ್ಞಾನ ಮತ್ತು ತಂತ್ರಜ್ಞಾನ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಬಾಹ್ಯಾಕಾಶ ಸಂಶೋಧನೆಯಂತಹ ಉನ್ನತ ಕ್ಷೇತ್ರಗಳಲ್ಲೂ ಮಹಿಳೆಯರು ಮುನ್ನುಗ್ಗುತ್ತಿರುವುದು ಹೆಮ್ಮೆಯ ಸಂಗತಿ. ಇಷ್ಟೆಲ್ಲ ಸಬಲೀಕರಣಗೊಳ್ಳುತ್ತಿದ್ದರೂ ಇಂದಿಗೂ ಮಹಿಳೆಯರ ಮೇಲಿನ ಶೋಷಣೆ, ದೌರ್ಜನ್ಯ ಪ್ರಕರಣ ಮಾತ್ರ ಕಡಿಮೆಯಾಗಿಲ್ಲ. ಪ್ರತಿಯೊಬ್ಬ ಮಹಿಳೆಯೂ ದೈಹಿಕವಾಗಿ ಮತ್ತು ಮಾನಸಿಕವಾಗಿ ಸಬಲರಾಗಬೇಕಿದೆ. ಈ ನಿಟ್ಟಿನಲ್ಲಿ ಪೋಷಕರು ಸಹ ಕೇವಲ ಹೆಣ್ಣು ಮಕ್ಕಳಿಗೆ ಸುರಕ್ಷಿತವಾಗಿರು ಎಂದು ಹೇಳುವುದಕ್ಕಿಂತ ಹೆಚ್ಚಾಗಿ, ಗಂಡು ಮಕ್ಕಳಿಗೆ ಹೆಣ್ಣು ಮಕ್ಕಳನ್ನು, ಗುರು ಹಿರಿಯರನ್ನು ಗೌರವಿಸುವ ಉತ್ತಮ ಸಂಸ್ಕಾರ ಕಲಿಸಬೇಕು. ಆಗದಾಗ ಸಮಾಜದಲ್ಲಿ ನಡೆಯುವ ಶೇ.99ರಷ್ಟು ಕೃತ್ಯಗಳನ್ನು ತಡೆಯಬಹುದು ಎಂದರು.
ಇಂದಿನ ಬದಲಾಗುತ್ತಿರುವ ಸಾಮಾಜಿಕ ಸನ್ನಿವೇಶದಲ್ಲಿ ಮಹಿಳೆಯರ ಸುರಕ್ಷತೆ ಮುಖ್ಯ. ಎಲ್ಲ ಸಂದರ್ಭದಲ್ಲೂ ಕೇವಲ ಕಾನೂನು ಮತ್ತು ಪೊಲೀಸ್ ವ್ಯವಸ್ಥೆಯಿಂದ ಮಾತ್ರ ಸುರಕ್ಷತೆ ಸಾಧ್ಯವಿಲ್ಲ. ಪ್ರತಿ ಮಹಿಳೆಯೂ ಸಮಾಜದಲ್ಲಿ ಉಂಟಾಗುವ ಸಂಕಷ್ಟದ ಸಂದರ್ಭಗಳನ್ನು ಎದುರಿಸಲು ಆತ್ಮರಕ್ಷಣಾ ತಂತ್ರಗಳನ್ನು ಕಲಿಯುವ ಅನಿವಾರ್ಯತೆ ಇದೆ. ಮಹಿಳಾ ಹಕ್ಕುಗಳು ಮತ್ತು ತುರ್ತು ಸಂದರ್ಭದಲ್ಲಿ ಪೊಲೀಸ್ ಸಹಾಯವಾಣಿ ಸಂಖ್ಯೆ 112ಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದರು.ಎಸ್ಪಿ ಎಸ್.ಜಾಹ್ನವಿ ಮಾತನಾಡಿ, ಮಹಿಳಾ ಸಬಲೀಕರಣ ಎಂದರೆ ಸ್ವೇಚ್ಛಾಚಾರವಲ್ಲ. ಬದಲಿಗೆ ಸರಿ ತಪ್ಪು ವಿಮರ್ಶಿಸಿ ಯಾವುದು ಸರಿ ಇದೆ ಎಂಬುದನ್ನರಿತು ಮಾಡುವುದು ತಮ್ಮ ಜವಾಬ್ದಾರಿ. ವಿದ್ಯಾರ್ಥಿಗಳು ಪೋಷಕರು ನೀಡಿದ ಶಿಕ್ಷಣ ಮತ್ತು ಅವಕಾಶಗಳನ್ನು ಬಳಸಿಕೊಂಡು ಸಮಾಜದಲ್ಲಿ ಘನತೆಯ ವ್ಯಕ್ತಿಗಳಾಗಿ ಬಾಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ವಿಜಯನಗರ ಮಹಾವಿದ್ಯಾಲಯ ಆಡಳಿತ ಮಂಡಳಿ ಅಧ್ಯಕ್ಷ ಎನ್. ಮಲ್ಲಿಕಾರ್ಜುನ ಮೆಟ್ರಿ, ಪ್ರಾಂಶುಪಾಲ ಮಹಾಂತೇಶ್ ಎನ್.ಆರಾಧ್ಯಮಠ, ಕಿರ್ಲೋಸ್ಕರ್ ಎವಿ ಕ್ಲಬ್ ನ ಜಂಟಿ ಕಾರ್ಯದರ್ಶಿ ಭಾಗ್ಯ, ವಕೀಲೆ ಅನಿತಾ ಇದ್ದರು.