ಬ್ರಹ್ಮಾವರ: ಇಲ್ಲಿನ ಗ್ರಾಮಾಭಿವೃದ್ಧಿ ಮತ್ತು ಸ್ವಉದ್ಯೋಗ ತರಬೇತಿ (ರುಡ್ ಸೆಟ್) ಸಂಸ್ಥೆಯಲ್ಲಿ ವಸ್ತ್ರ ಕಲಾ (ಎಂಬ್ರಾಯ್ಡರಿ) ಲಘು ಉದ್ಯಮಿ ತರಬೇತಿಯಯನ್ನು ರಾಜ್ಯ ಟೈಲರಿಂಗ್ ಅಸೋಸಿಯೇಶನ್ ಇದರ ಉಡುಪಿ ಜಿಲ್ಲಾಧ್ಯಕ್ಷ ದಯಾನಂದ ಕೋಟ್ಯಾನ್ ಅವರು ಉದ್ಘಾಟಿಸಿದರು.ನಂತರ ಮಾತನಾಡಿದ ಅವರು, ಮಹಿಳೆಯರು ತಮ್ಮ ಆಸಕ್ತಿಯ ಕ್ಷೇತ್ರವಾಗಿರುವ ಟೈಲರಿಂಗ್ ಹಾಗೂ ಎಂಬ್ರಾಯ್ಡರಿ ಉದ್ಯಮವು ಅತ್ಯಂತ ಲಾಭದಾಯಕ ಹಾಗೂ ಬಹಳ ಬೇಡಿಕೆಯಿರುವ ಕ್ಷೇತ್ರವಾಗಿದೆ. ಇದರಿಂದ ಮಹಿಳೆಯರಿಗೆ ಸ್ವ ಉದ್ಯೋಗವನ್ನು ಕೈಗೊಂಡು ಆರ್ಥಿಕವಾಗಿ ಸಬಲತೆಯನ್ನು ಹೊಂದಲು ಸಾಧ್ಯವಾಗುತ್ತದೆ. ಸ್ವಾಭಿಮಾನದಿಂದ ಬದುಕಲು ಪ್ರೇರಣೆ ನೀಡುತ್ತದೆ. ಇನ್ನೊಬ್ಬರ ಮುಂದೆ ನಿಂತು ಕೈ ಚಾಚುವ ಪ್ರಮೇಯ ತಪ್ಪುತ್ತದೆ. ಹಾಗಾಗಿ ಸ್ವಉದ್ಯೋಗವು ಆರ್ಥಿಕ ಭದ್ರತೆ ಜೊತೆಗೆ ಆತ್ಮವಿಶ್ವಾಸದ ಕೊಂಡಿಯಾಗಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಹಿರಿಯ ಉಪನ್ಯಾಸಕ ಸಂತೋಷ್ ಶೆಟ್ಟಿ ಮಾತನಾಡಿ, ಸಂಸ್ಥೆಯಲ್ಲಿ ಸಿಗುವ ತರಬೇತಿಯನ್ನು ಶ್ರದ್ಧೆಯಿಂದ ಪಡೆದುಕೊಂಡು, ಇಲ್ಲಿನ ಸವಲತ್ತುಗಳನ್ನು ನಿಮ್ಮ ಪ್ರೀತಿಪಾತ್ರರಲಿ ಹಂಚಿಕೊಂಡು ದೇಶದ ಆರ್ಥಿಕ ವ್ಯವಸ್ಥೆಯನ್ನು ಸುಧಾರಿಸೋಣ ಎಂದು ಶಿಬಿರಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮವನ್ನು ಉಪನ್ಯಾಸಕಿ ಚೈತ್ರ ಕೆ. ನಿರೂಪಿಸಿ, ಸ್ವಾಗತಿಸಿದರು. ಹಿರಿಯ ಕಚೇರಿ ಸಹಾಯಕ ರವಿ ವಂದಿಸಿದರು.