ಸುಸ್ಥಿರ ಅಭಿವೃದ್ಧಿ, ದೂರದೃಷ್ಟಿಗೆ ಆದ್ಯತೆ: ಡಾ.ಮಂತರ್ ಗೌಡ

KannadaprabhaNewsNetwork |  
Published : Jun 28, 2026, 03:45 AM IST
 | Kannada Prabha

ಸಾರಾಂಶ

ಆದರ್ಶ ಆಡಳಿತಗಾರ, ನಾಡಪ್ರಭು ಕೆಂಪೇಗೌಡರು ಬೆಂಗಳೂರನ್ನು ಮಾದರಿ ನಗರವನ್ನಾಗಿ ನಿರ್ಮಿಸಿದ್ದರು, ಆದರೆ ಇಂದು ಆ ನಗರ ಮಿತಿಮೀರಿ ಬೆಳೆದಿದ್ದು, ಸುಸ್ಥಿರ ಅಭಿವೃದ್ಧಿಗೆ ಮತ್ತಷ್ಟು ಒತ್ತು ನೀಡಬೇಕಿದೆ ಎಂದು ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಆದರ್ಶ ಆಡಳಿತಗಾರ, ನಾಡಪ್ರಭು ಕೆಂಪೇಗೌಡರು ಬೆಂಗಳೂರನ್ನು ಮಾದರಿ ನಗರವನ್ನಾಗಿ ನಿರ್ಮಿಸಿದ್ದರು, ಆದರೆ ಇಂದು ಆ ನಗರ ಮಿತಿಮೀರಿ ಬೆಳೆದಿದ್ದು, ಸುಸ್ಥಿರ ಅಭಿವೃದ್ಧಿಗೆ ಮತ್ತಷ್ಟು ಒತ್ತು ನೀಡಬೇಕಿದೆ ಎಂದು ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಗಾಂಧಿ ಭವನದಲ್ಲಿ ಶನಿವಾರ ನಡೆದ ಕೆಂಪೇಗೌಡರ ಜಯಂತಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೆಂಪೇಗೌಡರು ಅಂದಿನ ಆಡಳಿತ ಅವಧಿಯಲ್ಲಿ ಬೆಂಗಳೂರು ಪ್ರಾಂತ್ಯದಲ್ಲಿ ನೂರಾರು ಕೆರೆ-ಕಟ್ಟೆಗಳನ್ನು ನಿರ್ಮಿಸಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ನೋಡಿಕೊಂಡಿದ್ದರು ಎಂದರು.

ಎಲ್ ನಿನೋ ಪರಿಣಾಮದಿಂದ ಮಳೆಯಾಗುತ್ತಿಲ್ಲ, ಜಿಲ್ಲೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಮಳೆ ಕೊರತೆ ತೀವ್ರವಾಗಿದೆ. ಈ ನಿಟ್ಟಿನಲ್ಲಿ ಕೆಂಪೇಗೌಡರ ದೂರದೃಷ್ಟಿಯಂತೆ ಸುಸ್ಥಿರ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಡಾ.ಮಂತರ್ ಗೌಡ ಸಲಹೆ ನೀಡಿದರು.

ಜಿಲ್ಲಾ ಕೇಂದ್ರ ಮಡಿಕೇರಿ ಹಾಗೂ ತಾಲ್ಲೂಕು ಕೇಂದ್ರ ಕುಶಾಲನಗರದಲ್ಲಿ ಒಕ್ಕಲಿಗರ ಸಂಘಕ್ಕೆ ಜಾಗ ಒದಗಿಸುವುದು ಮತ್ತು ಭವನ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು, ಜತೆಗೆ ಸೋಮವಾರಪೇಟೆಯ ಒಕ್ಕಲಿಗರ ಸಂಘಕ್ಕೆ 50 ಲಕ್ಷ ರು. ಅನುದಾನ, ಕುವೆಂಪು‌ ಶಾಲೆ ಅಭಿವೃದ್ಧಿಗೆ ಅಗತ್ಯ ಸಹಕಾರ ನೀಡಲಾಗುವುದು, ಜತೆಗೆ ಕೊಡಗು ಗೌಡ ವಿದ್ಯಾ ಸಂಘಕ್ಕೆ 25 ಲಕ್ಷ ರು. ಬಿಡುಗಡೆ ಮಾಡಿಸಲಾಗುವುದು, ಗುಡ್ಡೆಮನೆ ಅಪ್ಪಯ್ಯ ಗೌಡರ ಪ್ರತಿಮೆ ಬಳಿ ಉದ್ಯಾನವನ‌ ಅಭಿವೃದ್ಧಿಗೆ ಅನುದಾನ ನೀಡಲಾಗುವುದು ಎಂದು ಡಾ.ಮಂತರ್ ಗೌಡ ತಿಳಿಸಿದರು.

ಕೊಡಗು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಎಸ್.ಎಂ.ಚಂಗಪ್ಪ ಮಾತನಾಡಿ ಆದರ್ಶ ಆಡಳಿತಗಾರ ಕೆಂಪೇಗೌಡರಂತೆ ಪ್ರತಿಯೊಬ್ಬರಲ್ಲಿಯೂ ದೂರದೃಷ್ಟಿ ಇರಬೇಕು ಎಂದರು.

ಕೊಡಗು ಜಿಲ್ಲಾ ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಆನಂದ್ ಕರಂದ್ಲಾಜೆ ಮಾತನಾಡಿ ಮಡಿಕೇರಿ ಅಥವಾ ಕುಶಾಲನಗರದಲ್ಲಿ ಕೆಂಪೇಗೌಡ ನಿರ್ಮಿಸುವಂತಾಗಬೇಕು ಎಂದು ಕೋರಿದರು.

ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಹರಪಳ್ಳಿ ರವೀಂದ್ರ ಮಾತನಾಡಿ ನಾಡಪ್ರಭು ಕೆಂಪೇಗೌಡರು ಬೆಂಗಳೂರು ಅಭಿವೃದ್ಧಿಗೆ ತಮ್ಮದೇ ಕೊಡಗೆ ನೀಡಿದ್ದು, 63 ಪೇಟೆಗಳು, 300 ಕ್ಕೂ ಹೆಚ್ಚು ಕೆರೆಗಳನ್ನು ನಿರ್ಮಿಸಿದ್ದರು ಎಂದು ತಿಳಿಸಿದರು.

ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ ಅವರು ಮಾತನಾಡಿ ಕೆಂಪೇಗೌಡರು 500 ವರ್ಷಗಳ ಹಿಂದೆ ಬೆಂಗಳೂರು ನಗರವನ್ನು ದೂರದೃಷ್ಟಿಯ ಕಲ್ಪನೆ ಇಟ್ಟುಕೊಂಡು ನಿರ್ಮಿಸಿದ್ದರೆಂದರು.

ನಿವೃತ್ತ ಪ್ರಾಂಶುಪಾಲ ಸಿ.ಬಿ.ರಾಮಚಂದ್ರ ಮಾತನಾಡಿ ಕೆಂಪೇಗೌಡರ ಶಿಸ್ತು, ಸಮಯ ಪ್ರಜ್ಞೆ ಮತ್ತು ದೂರದೃಷ್ಟಿಯಿಂದ ಬೆಂಗಳೂರು ನಗರ ವಿಶ್ವ ಮಟ್ಟದಲ್ಲಿ ಅಭಿವೃದ್ಧಿ ಕಂಡಿದೆ ಎಂದರು.

ಕೊಡಗು ಗೌಡ ಸಮಾಜದ ಮಡಿಕೇರಿ ತಾಲೂಕು ಅಧ್ಯಕ್ಷ ಡಿ.ಎಸ್.ಆನಂದ ಅವರು ಮಾತನಾಡಿ ಕೆಂಪೇಗೌಡರಂತೆ ಮುಂದಾಲೋಚನೆ ಇರಬೇಕು. ಕೆರೆಕಟ್ಟೆಗಳನ್ನು ಉಳಿಸಬೇಕು, ಗಿಡ ಮರಗಳನ್ನು ಬೆಳೆಸಬೇಕು ಎಂದು ಸಲಹೆ ಮಾಡಿದರು.

ಮಡಿಕೇರಿ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷರಾದ ವಿ.ಜಿ.ಮೋಹನ್ ಅವರು ಮಾತನಾಡಿ ಆದರ್ಶ ಆಡಳಿತಗಾರ ಕೆಂಪೇಗೌಡರು ಕನ್ನಡ ಭಾಷೆ ಬೆಳವಣಿಗೆಗೆ ಶ್ರಮಿಸಿದ್ದಾರೆ ಎಂದರು. ಕೊಡಗು ಗೌಡ ವಿದ್ಯಾ ಸಂಘದ ಅಧ್ಯಕ್ಷರಾದ ಅಂಬೆಕಲ್ಲು ನವೀನ್ ಅವರು ಮಾತನಾಡಿದರು.

ನಾಡಪ್ರಭು ಕೆಂಪೇಗೌಡರ ಜೀವನ ಚರಿತ್ರೆ ಕುರಿತು ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರವನ್ನು ಶಾಸಕರು ವಿತರಿಸಿದರು.

ಸರ್ವೋದಯ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷರಾದ ಅಂಬೆಕಲ್ಲು ಕುಶಾಲಪ್ಪ, ಪ್ರಮುಖರಾದ ಶಾಂತಳ್ಳಿ ಲೋಕೇಶ್, ಸೂರ್ತಲೆ ಸೋಮಣ್ಣ, ಗಣಿ ಪ್ರಸಾದ್, ವಿ.ಪಿ.ಸುರೇಶ್, ಅನಿಲ್ ಎಚ್.ಟಿ, ಶಿರಸ್ತೆದಾರ ದೇವರಾಜು ಇತರರು ಇದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಸ್ವಾಗತಿಸಿದರು, ಬ್ಲಾಸಂ ಶಾಲೆಯ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು, ಮಣಜೂರು ಮಂಜುನಾಥ್ ನಿರೂಪಿಸಿ, ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯುವ ಜನತೆಯಲ್ಲಿ ಯೋಗದ ಬಗ್ಗೆ ರೆಡ್‌ಕ್ರಾಸ್‌ ಅರಿವು: ಸಿಎ ಶಾಂತಾರಾಮ ಶೆಟ್ಟಿ
ಸ್ತ್ರೀ ಪರಿಪೂರ್ಣತೆಯ ಸಂಕೇತ: ಡಾ. ಮೋಹನ್ ಆಳ್ವ