ಸ್ವಸಹಾಯ ಉತ್ಪನ್ನ ಇ ಕಾಮರ್ಸ್‌ ಪ್ರವೇಶ ಅವಶ್ಯ: ರಾಜ್ಯಪಾಲ ಗೆಹ್ಲೋಟ್ ಇಂಗಿತ

KannadaprabhaNewsNetwork |  
Published : May 11, 2025, 01:18 AM IST
ಡಾ.ಎಂ.ಎನ್.ಆರ್‌.ದಂಪತಿಗೆ ಸನ್ಮಾನ  | Kannada Prabha

ಸಾರಾಂಶ

ಮಂಗಳೂರು ಹೊರವಲಯ ಬಂಗ್ರಕೂಳೂರಿನ ಗೋಲ್ಡ್‌ಫಿಂಚ್‌ ಸಿಟಿಯಲ್ಲಿ ಶನಿವಾರ ನವೋದಯ ಗ್ರಾಮ ವಿಕಾಸ ಚಾರಿಟೇಬಲ್‌ ಟ್ರಸ್ಟ್‌ ಆಶ್ರಯದಲ್ಲಿ ನವೋದಯ ಸ್ವಸಹಾಯ ಗುಂಪುಗಳ ‘ರಜತ ಸಂಭ್ರಮ-2025’ ಸಮಾವೇಶ ನಡೆಯಿತು. ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಸಹಕಾರಿ ಧ್ವಜಾರೋಹಣ ನೆರವೇರಿಸಿದರು.

ಮಂಗಳೂರಲ್ಲಿ ನವೋದಯ ಸ್ವಸಹಾಯ ಗುಂಪುಗಳ ‘ರಜತ ಸಂಭ್ರಮ-2025’ ಸಮಾವೇಶ

ಕನ್ನಡಪ್ರಭ ವಾರ್ತೆ ಮಂಗಳೂರು

ಸ್ವಸಹಾಯ ಸಂಘಗಳ(ಎಸ್‌ಎಚ್‌ಜಿ) ಉತ್ಪನ್ನಗಳು ಇ ಕಾಮರ್ಸ್‌ ಪ್ರವೇಶಿಸಬೇಕು. ಆಗ ಮಹಿಳೆಯರು ಆರ್ಥಿಕವಾಗಿ ಮತ್ತಷ್ಟು ಸದೃಢವಾಗಲು ಸಾಧ್ಯವಿದೆ ಎಂದು ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಹೇಳಿದರು.

ಮಂಗಳೂರು ಹೊರವಲಯ ಬಂಗ್ರಕೂಳೂರಿನ ಗೋಲ್ಡ್‌ಫಿಂಚ್‌ ಸಿಟಿಯಲ್ಲಿ ಶನಿವಾರ ನವೋದಯ ಗ್ರಾಮ ವಿಕಾಸ ಚಾರಿಟೇಬಲ್‌ ಟ್ರಸ್ಟ್‌ ಆಶ್ರಯದಲ್ಲಿ ನವೋದಯ ಸ್ವಸಹಾಯ ಗುಂಪುಗಳ ‘ರಜತ ಸಂಭ್ರಮ-2025’ ಸಮಾವೇಶದಲ್ಲಿ ಸಹಕಾರಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಸ್ವಸಹಾಯ ಗುಂಪುಗಳು ಸಮಾಜದ ಉನ್ನತಿಗೆ ಪ್ರೇರಣೆಯಾಗಿವೆ. ಮಹಿಳಾ ಶಕ್ತಿಯ ದೃಢತೆಯ ಜೊತೆಗೆ ಆರ್ಥಿಕ ಸ್ವಾವಲಂಬನೆ, ಸಾಮಾಜಿಕ ಮತ್ತು ಮಹಿಳಾ ಪರಿವಾರದ ಅಭಿವೃದ್ಧಿಗೆ ಪೂರಕವಾಗಿದೆ. ಮಹಾರಾಷ್ಟ್ರ, ಕರ್ನಾಟಕ ಹಾಗೂ ಮಧ್ಯಪ್ರದೇಶಗಳಲ್ಲಿ ಸ್ವಸಹಾಯ ಗುಂಪುಗಳು ಅಭಿವೃದ್ಧಿಗೆ ತಮ್ಮದೇ ಕೊಡುಗೆ ನೀಡುತ್ತಿವೆ ಎಂದು ರಾಜ್ಯಪಾಲರು ಶ್ಲಾಘಿಸಿದರು. ಕಳೆದ 25 ವರ್ಷಗಳಲ್ಲಿ ನವೋದಯ ಸ್ವಸಹಾಯ ಗುಂಪುಗಳ ಕಾರ್ಯವೈಖರಿಯನ್ನು ಪ್ರಶಂಸಿದ ರಾಜ್ಯಪಾಲರು, ಸಹಕಾರ ತತ್ವ ಎಂದರೆ, ಸಹಕಾರದ ನೆರವು ಎಂದರ್ಥ. ಮಹಿಳಾ ಸಬಲೀಕರಣ ಹಾಗೂ ಜಾಗೃತಿಗೆ ಇದು ಕಾರಣವಾಗಿದೆ. ಮಹಿಳೆಯರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿ ಆರ್ಥಿಕ ಕ್ಷಮತೆಯನ್ನು ಮೂಡಿಸುತ್ತಿದೆ. ನವೋದಯ ಎಂಬುದು ಅಭಿವೃದ್ಧಿ ಪಥದಲ್ಲಿ ಹೊಸ ಉಗಮಕ್ಕೆ ನಾಂದಿಯಾಗಲಿದೆ ಎಂದು ರಾಜ್ಯಪಾಲರು ಹಾರೈಸಿದರು.

ಮಹಿಳಾ ಸಬಲೀಕರಣದಿಂದ ಶಕ್ತಿ:

ರಜತ ಸಂಭ್ರಮಕ್ಕೆ ಚಾಲನೆ ನೀಡಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಹಕಾರಿ ತತ್ವಕ್ಕೆ ಮಹಿಳೆಯರು ಶಕ್ತಿ ತುಂಬುತ್ತಿದ್ದು, ಇದು ರಾಜ್ಯ ಹಾಗೂ ದೇಶದ ಅಭಿವೃದ್ಧಿಗೆ ಇನ್ನಷ್ಟು ಸಹಕಾರಿಯಾಗಲಿದೆ ಎಂದರು.

ನನಗೆ ಹೆಣ್ಣುಮಕ್ಕಳು ಮತ್ತು ಯುವಕರ ಮೇಲೆ ನಂಬಿಕೆ ಹೆಚ್ಚು. ಅವರಿಗಾಗಿಯೇ ಗ್ಯಾರಂಟಿ ಯೋಜನೆಗಳನ್ನು ರೂಪಿಸಿದ್ದೇವೆ. ಕೊಟ್ಟ ಅವಕಾಶದಲ್ಲಿ ನಿಮ್ಮ ಋಣ ತೀರಿಸುವ ಕೆಲಸ ಮಾಡುತ್ತಿದ್ದೇವೆ. ದುಡ್ಡು- ಬ್ಲಡ್‌ ಎರಡೂ ಸರ್ಕ್ಯುಲೆಟ್‌ ಆದಾಗ ಆರೋಗ್ಯ ಚೆನ್ನಾಗಿರುತ್ತದೆ. ಇದೇ ಸಹಕಾರಿ ತತ್ವದ ಮೂಲ ಎಂದರು.ಹೆಣ್ಣುಮಕ್ಕಳ ತ್ಯಾಗ ಅರಿತವನು ಆ ಕುಟುಂಬದ ಶಕ್ತಿ ಬಲ್ಲ. ಲಕ್ಷಾಂತರ ತಾಯಂದಿರು ಮನೆಯ ಜ್ಯೋತಿ ಬೆಳಗಿ ದೇಶದ ಆಸ್ತಿಯಾಗಿ ಉಳಿದುಕೊಂಡಿದ್ದಾರೆ. ಇದೇ ನಾರಿಯ ಶಕ್ತಿ. ನಾವೆಲ್ಲಿಯೂ ತಂದೆ ಭಾಷೆ ಎನ್ನುವುದಿಲ್ಲ, ಮಾತೃಭಾಷೆ, ಮಾತೃಭೂಮಿ ಎನ್ನುತ್ತೇವೆ. ಅದು ಈ ನಾಡು ಸ್ತ್ರೀಯರನ್ನು ಕಾಣುವ ರೀತಿ ಎಂದು ನಾರಿ ಶಕ್ತಿಯನ್ನು ಡಿಕೆಶಿ ಶ್ಲಾಘಿಸಿದರು.

ಡಾ. ರಾಜೇಂದ್ರ ಕುಮಾರ್‌ ಅಂದಿನಿಂದ ಇವತ್ತಿನವರೆಗೂ ಕರಾವಳಿ ಕ್ಷೇತ್ರದಲ್ಲಿ ಸಹಕಾರಿ ಧುರೀಣರಾಗಿ, ಯಾವುದೇ ಸ್ಥಾನ ಅಪೇಕ್ಷಿಸದೆ, ಜನರ- ತಾಯಂದಿರ ಸೇವೆ ಮಾಡುತ್ತಿದ್ದಾರೆ. ಆರ್ಥಿಕವಾಗಿ ಎಲ್ಲರಿಗೂ ಶಕ್ತಿ ಕೊಡಬೇಕೆಂದು ನವೋದಯ ಚಾರಿಟೇಬಲ್‌ ಟ್ರಸ್ಟ್‌ ರೂಪಿಸಿ ಕಾರ್ಯನಿರ್ವಹಿಸುತ್ತಿರುವುದಕ್ಕೆ ಅವರಿಗೆ ಅಭಿನಂದನೆ ಹೇಳುತ್ತೇನೆ ಎಂದರು.

ಮಹಿಳಾ ಸಬಲೀಕರಣ ಉದ್ದೇಶ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಮಾತನಾಡಿ, ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣ ಮಾಡುವುದೇ ನಮ್ಮ ಸರ್ಕಾರದ ಮೂಲ ಉದ್ದೇಶ. ಇದಕ್ಕಾಗಿಯೇ ಗೃಹಲಕ್ಷ್ಮೀ ಯೋಜನೆಗೆ ವಾರ್ಷಿಕ 28 ಸಾವಿರ ಕೋಟಿ ರುಪಾಯಿಗಳನ್ನು ನೀಡಲಾಗುತ್ತಿದೆ. ನೇರವಾಗಿ ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಹಾಕಲಾಗುತ್ತಿದೆ. ಮಹಿಳೆ ಸದೃಢವಾಗಿ ಬೆಳೆಯಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಕರೆ ನೀಡಿದರು.

ನವೋದಯ ಗ್ರಾಮೀಣ ವಿಕಾಸ ಸಂಸ್ಥೆ ಇವತ್ತು ಹೆಮ್ಮರವಾಗಿ ಬೆಳೆದಿದೆ. 8 ಜಿಲ್ಲೆಗಳಿಗೆ ಕಾರ್ಯಚಟುವಟಿಕೆ ವಿಸ್ತರಣೆ ಮಾಡಿಕೊಂಡು ಈಗ ರಾಜ್ಯ ಮಟ್ಟದ ಸಂಸ್ಥೆಯಾಗಿ ಬೆಳೆಸುತ್ತಿರುವುದು ನಿಜಕ್ಕೂ ಪ್ರಶಂಸಾರ್ಹವಾಗಿದೆ. ಡಾ.ರಾಜೇಂದ್ರ ಕುಮಾರ್ ಅವರು ಈ ಎರಡೂ ಕ್ಷೇತ್ರಗಳನ್ನು ಅತ್ಯಂತ ಜಾಣ್ಮೆಯಿಂದ ಸುಮಾರು 3 ದಶಕಗಳಿಂದ ಸ್ವಲ್ಪವೂ ವಿಶ್ವಾಸ ಕಳೆದುಕೊಳ್ಳದೆ ಮುನ್ನಡೆಸುವ ಮೂಲಕ ಸಹಕಾರಿ ಕ್ಷೇತ್ರದ ಭೀಷ್ಮ ಎನಿಸಿಕೊಂಡಿದ್ದಾರೆ ಎಂದು ಹೆಬ್ಬಾಳ್ಕರ್‌ ಹೇಳಿದರು

ಪ್ರಗತಿಗೆ ಪೂರಕ ಎಸ್‌ಎಚ್‌ಜಿ: ‘ಸಂತೃಪ್ತಿ’ ಸ್ಮರಣ ಸಂಚಿಕೆ ಲೋಕಾರ್ಪಣೆಗೊಳಿಸಿ ಮಾತನಾಡಿದ ರಾಜ್ಯಸಭಾ ಸದಸ್ಯ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲೂ ಸ್ವಸಹಾಯ ಸಂಘಗಳು ಇದ್ದು, ಸಮಾಜದ ಪ್ರಗತಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿವೆ. ಸ್ವಸಹಾಯ ಸಂಘಗಳ ಮೂಲಕ ಸಂಘಟನೆ ಕಷ್ಟದ ಅರಿವು ಇದ್ದು, ದೇಶದ ಅಭಿವೃದ್ಧಿಯ ಜವಾಬ್ದಾರಿಯನ್ನು ನಿಭಾಯಿಸಬೇಕಿದೆ. ಈ ನಿಟ್ಟಿನಲ್ಲಿ ಎಸ್‌ಎಚ್‌ಜಿಯನ್ನು ರೂಪಿಸುತ್ತಿರುವ ಡಾ.ಎಂ.ಎನ್‌.ಆರ್‌. ಸಾಧನೆ ಶ್ಲಾಘನೀಯ ಎಂದರು. 25 ವರ್ಷದ ಅಭಿವೃದ್ಧಿ ಗುರಿ: ಸ್ಪೀಕರ್‌ ಯು.ಟಿ. ಖಾದರ್‌ ಮಾತನಾಡಿ, ಕರಾವಳಿ ಕರ್ನಾಟಕದ ಮಹಿಳಾ ಸಹಕಾರಿಗಳು ಸ್ವಾಭಿಮಾನದ ಬದುಕು ಕಟ್ಟುವುದನ್ನು ತೋರಿಸಿಕೊಟ್ಟಿದ್ದಾರೆ. ಮೀನುಗಾರಿಕೆ, ಹಂಚಿನ ಉದ್ಯಮ, ಗೇರು ಕಾರ್ಖಾನೆ, ಬೀಡಿ ಉದ್ಯಮ ಹೀಗೆ ಪ್ರತಿ ಹಂತಗಳಲ್ಲೂ ಕುಟುಂಬದ ಉದ್ಧಾರಕ್ಕೆ ಹಿರಿಯ ಕೊಡುಗೆ ಇದೆ. ಇನ್ನೂ 25 ವರ್ಷಕ್ಕೆ ಅವಶ್ಯವಾದ ಯೋಜನೆಯ ರೂಪುರೇಷೆ ಹಾಕಿಕೊಂಡಿದ್ದಾರೆ ಎಂದರು.

ದ್ವೇಷಮುಕ್ತ ಸಮಾಜವೇ ನಮ್ಮ ಗುರಿಯಾಗಬೇಕಿದ್ದು, ಸಮಾಜ ಕಂಟಕರ ವಿರುದ್ಧ ತಾಯಂದಿರು ಎದ್ದು ನಿಲ್ಲಬೇಕು. ಸಮಾಜದಲ್ಲಿ ಸೌಹಾರ್ದತೆಯನ್ನು ಸರ್ಕಾರ, ರಾಜಕಾರಣಿಗಳು ಮೂಡಿಸುವ ಬದಲು ಮಹಿಳೆಯರು ಪ್ರತಿ ಮನೆಗಳಿಂದ ಆರಂಭಿಸಬೇಕು. ಮಕ್ಕಳ ಮೇಲೆ ವಿಶ್ವಾಸ ಇರಿಸಬೇಕು. ನನಗಿಂತ ದೊಡ್ಡ ಸ್ಥಾನಕ್ಕೆ ಮಕ್ಕಳು ಏರಬೇಕು ಎಂಬ ತುಡಿತ ಹೆತ್ತವರಲ್ಲಿ ಇರಬೇಕು ಎಂದರು. ಮಹಿಳಾ ಶಕ್ತಿ ಅನಾವರಣಗೊಳ್ಳಲಿ: ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್‌ ಮಾತನಾಡಿ, ಸಮಾಜದ ಬದಲಾವಣೆ ಕಾರ್ಯ ಮಹಿಳೆಯರಿಂದಲೇ ಆಗಬೇಕಾಗಿದೆ. ಮಹಿಳೆಗೆ ಶಕ್ತಿ ತುಂಬಿಸಿದರೆ, ಸ್ವಾವಲಂಬನೆಗೆ ದಾರಿಯಾಗುತ್ತದೆ. ಪ್ರಸಕ್ತ ಶಿಕ್ಷಣ, ಉದ್ಯೋಗ, ಸ್ವಾವಲಂಬನೆ, ಆರ್ಥಿಕ ಶಕ್ತಿ ನಿರ್ಮಾಣದಿಂದ ಮಹಿಳೆಯರ ಸಬಲೀಕರಣ ಸಾಧ್ಯವಾಗಿದೆ. ಲೋಕಸಭೆ ಹಾಗೂ ವಿಧಾನಸಭೆಗಳಲ್ಲೂ ಮಹಿಳಾ ಮೀಸಲು ಬಿಲ್‌ನಿಂದ ಹೆಚ್ಚಿನ ಮಹಿಳಾ ಪ್ರಾತಿನಿಧ್ಯ ಸಾಧ್ಯವಾಗಲಿದೆ. ಸಾಮಾಜಿಕ ನ್ಯಾಯ ಹಾಗೂ ಸಾಮರಸ್ಯಕ್ಕೆ ಮಹಿಳಾ ಶಕ್ತಿ ಕಾರಣವಾಗಲಿ, ರಾಷ್ಟ್ರಕ್ಕೆ ಮಾದರಿಯಾಗಲಿ ಎಂದರು. ಈ ಸಂದರ್ಭ ಟ್ರಸ್ಟ್‌ ಸಂಸ್ಥಾಪಕ ಡಾ.ಎಂ.ಎನ್‌. ರಾಜೇಂದ್ರ ಕುಮಾರ್‌ ಮತ್ತು ಪತ್ನಿ ಅರುಣಾ ರಾಜೇಂದ್ರ ಕುಮಾರ್‌ ದಂಪತಿಯನ್ನು ನವೋದಯದ ಸ್ವಸಹಾಯ ಗುಂಪುಗಳ ನವ ಮಹಿಳೆಯರು ಸನ್ಮಾನಿಸಿ ಗೌರವಿಸಿದರು.

ಪೇಜಾವರ ಮಠಾಧೀಶ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ವೇದಿಕೆಯಲ್ಲಿ ಸಹಕಾರ ಸಚಿವ ರಾಜಣ್ಣ, ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪುರ, ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಮುರುಗೇಶ್‌ ನಿರಾಣಿ, ರಮಾನಾಥ ರೈ, ಅಭಯಚಂದ್ರ ಜೈನ್‌, ವಿನಯ ಕುಮಾರ್‌ ಸೊರಕೆ, ಶಾಸಕರಾದ ಸುನಿಲ್‌ ಕುಮಾರ್‌, ವೇದವ್ಯಾಸ್‌ ಕಾಮತ್‌, ಡಾ.ಭರತ್‌ ಶೆಟ್ಟಿ, ರಾಜೇಶ್‌ ನಾಯ್ಕ್‌, ಉಮಾನಾಥ ಕೋಟ್ಯಾನ್‌, ಯಶ್‌ಪಾಲ್‌ ಸುವರ್ಣ, ಅಶೋಕ್‌ ಕುಮಾರ್‌ ರೈ, ಕಿರಣ್‌ ಕುಮಾರ್‌ ಕೊಡ್ಗಿ, ಗುರ್ಮೆ ಸುರೇಶ್‌ ಶೆಟ್ಟಿ, ಭಗೀರಥಿ ಮುರುಳ್ಯ, ಎಸ್‌.ಎಲ್‌.ಭೋಜೇ ಗೌಡ, ಐವನ್ ಡಿಸೋಜಾ, ಮಂಜುನಾಥ ಭಂಡಾರಿ, ಮಾಜಿ ಶಾಸಕ ಸಂಜೀವ ಮಠಂದೂರು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್‌ ರೈ, ಗುರು ಬೆಳದಿಂಗಳು ಫೌಂಡೇಷನ್‌ ಅಧ್ಯಕ್ಷ ಪದ್ಮರಾಜ್‌ ಆರ್‌, ಉದ್ಯಮಿಗಳಾದ ಉದಯ ಕುಮಾರ್‌ ಶೆಟ್ಟಿ, ಪ್ರಸಾದ್‌ ಕಾಂಚನ್‌, ರಕ್ಷಿತ್‌ ಶಿವರಾಮ್‌, ಇನಾಯತ್‌ ಆಲಿ, ಅದಾನಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಕಿಶೋರ್‌ ಆಳ್ವ, ಜಾಗತಿಕ ಬಂಟರ ಸಂಘ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ, ರಾಜ್ ಅಲೈಡ್‌ ಅಂಡ್‌ ಹೆಲ್ತ್‌ ಕೇರ್ ಕೌನ್ಸಿಲ್‌ ಅಧ್ಯಕ್ಷ ಡಾ.ಯು.ಟಿ.ಇಫ್ತಿಕಾರ್‌, ರಾಜ್ಯ ಸಹಕಾರ ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷ ಬೆಳ್ಳಿ ಪ್ರಕಾಶ್‌, ಬಲ್ಲಾಳ್‌ ಗ್ರೂಪ್‌ ಆಫ್‌ ಹೊಟೇಲ್ಸ್‌ ವ್ಯವಸ್ಥಾಪಕ ನಿರ್ದೇಶಕ ಕೆ.ಜಯವರ್ಮ ಬಲ್ಲಾಳ್‌, ದೆಹಲಿಯ ಇಫ್ಕೋ ವ್ಯವಸ್ಥಾಪಕ ನಿರ್ದೇಶಕ ಡಾ.ಉದಯ ಶಂಕರ್ ಅವಸ್ಥಿ, ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್‌.ಧರ್ಮ, ರಜತ ಸಂಭ್ರಮ ಸಮಿತಿ ಪ್ರಧಾನ ಕಾರ್ಯದರ್ಶಿ ಭಾಸ್ಕರ್‌ ಎಸ್‌.ಕೋಟ್ಯಾನ್‌, ಟ್ರಸ್ಟಿಗಳಾದ ಮೇಘರಾಜ್‌ ಆರ್‌.ಜೈನ್‌, ಹೇಮಲತಾ ಹೆಗ್ಡೆ, ಸುನಿಲ್‌ ಕುಮಾರ್‌ ಬಜಗೋಳಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರ್ಣಿಮಾ ಶೆಟ್ಟಿ, ಎಸ್‌ಸಿಡಿಸಿಸಿ ಬ್ಯಾಂಕ್‌ ಹಾಗೂ ಟ್ರಸ್ಚಿನ ನಿರ್ದೇಶಕರು, ಅಧಿಕಾರಿಗಳು ಇದ್ದರು. ರಜತಸಂಭ್ರಮದ ಕಾರ್ಯಾಧ್ಯಕ್ಷ ಐಕಳಬಾವ ದೇವಿಪ್ರಸಾದ್‌ ಶೆಟ್ಟಿ ಬೆಳಪು ಸ್ವಾಗತಿಸಿದರು. ಕಾರ್ಯಾಧ್ಯಕ್ಷ ಶಶಿಕುಮಾರ್‌ ಬಾಲ್ಯೊಟ್ಟು ವಂದಿಸಿದರು. ಹಿತೇಶ್‌ ಶೆಟ್ಟಿ ಎಕ್ಕಾರು ನಿರೂಪಿಸಿದರು.------------------ದೇಶರಕ್ಷಣಾ ನಿಧಿಗೆ 3 ಕೋಟಿ ರು.: ಡಾ.ಎಂ.ಎನ್‌.ಆರ್‌.

ನವೋದಯ ಗ್ರಾಮ ವಿಕಾಸ ಚಾರಿಟೇಬಲ್‌ ಟ್ರಸ್ಟ್‌ ಸಂಸ್ಥಾಪಕ ಡಾ.ಎಂ.ಎನ್‌.ರಾಜೇಂದ್ರ ಕುಮಾರ್‌ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಸಕ್ತ ಯುದ್ಧ ಸನ್ನಿವೇಶ ನಿರ್ಮಾಣವಾಗಿದ್ದು, ಸೈನಿಕರ ನೆರವಿಗಾಗಿ ದೇಶ ರಕ್ಷಣಾ ನಿಧಿಗೆ 3 ಕೋಟಿ ರು. ನಿಧಿಯನ್ನು ಸಮರ್ಪಿಸುವುದಾಗಿ ಘೋಷಿಸಿದರು.

ಪ್ರಸಕ್ತ 9 ಜಿಲ್ಲೆಗಳಲ್ಲಿ ನವೋದಯ ಸ್ವಸಹಾಯ ಗುಂಪುಗಳ ಕಾರ್ಯಚಟುವಟಿಕೆ ಇದ್ದು, ಇದನ್ನು ವಿಸ್ತರಿಸುವಂತೆ ಬೇಡಿಕೆ ಬಂದಿದೆ. ಈ ಬಗ್ಗೆ ವಿಚಾರ ಮಾಡಲಾಗುವುದು. 25 ವರ್ಷಗಳ ಹಿಂದೆ ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷನಾಗಿದ್ದಾಗ ನವೋದಯ ಸ್ವಸಹಾಯ ಗುಂಪು ಆರಂಭಕ್ಕೆ ಆಸಕ್ತಿ ಬಂತು. ಆಗಿನ ಸಚಿವ ಎಸ್‌.ಎಸ್‌.ಪಾಟೀಲ್‌ ಪ್ರೇರಣೆಯಿಂದ ಮಹಿಳೆಯರ ಒಗ್ಗೂಡುವಿಕೆಯಲ್ಲಿ ಪುರುಷರಿಗೆ ಸರಿಸಮಾನಾಗಿ ಬೆಳೆಯಬೇಕು ಎಂಬ ದಿಶೆಯಲ್ಲಿ ಈ ಗುಂಪು ರಚಿಸಲಾಯಿತು. ಈಗ ಮಹಿಳಾ ಶಕ್ತಿಯಾಗಿ ಹೊರಹೊಮ್ಮಿದ್ದು, ಸ್ವಾವಲಂಬನೆ ಜೊತೆಗೆ ಅಭಿವೃದ್ಧಿಗೂ ಕಾರಣವಾಗಿದೆ ಎಂದರು.

ಸಮಾವೇಶದಲ್ಲಿ ಡಾ.ಎಂ.ಎನ್‌.ರಾಜೇಂದ್ರ ಕುಮಾರ್‌ ಮತ್ತು ಪತ್ನಿ ಅರುಣಾ ರಾಜೇಂದ್ರ ಕುಮಾರ್‌ನ್ನು ನವೋದಯ ಸ್ವಸಹಾಯ ಗುಂಪಿನ ನವ ಮಹಿಳೆಯರು ಸನ್ಮಾನಿಸಿ ಗೌರವಿಸಿದರು.

-----------

ಸಾಲ ಮರುಪಾವತಿಯಲ್ಲಿ ದ.ಕ. ಶಿಸ್ತು: ಡಿಕೆಶಿ

ನನ್ನ ರಾಜಕೀಯ ಜೀವನ ಆರಂಭವಾಗಿದ್ದೂ ಸಹಕಾರಿ ರಂಗದಿಂದ. ಈಗ ಉಪಮುಖ್ಯಮಂತ್ರಿಯಾಗಿ ಸಹಕಾರಿಯ ದೀಪ ಬೆಳಗಿದ್ದೇನೆ. ಕಟೀಲು, ಧರ್ಮಸ್ಥಳ, ಸುಬ್ರಹ್ಮಣ್ಯದಂಥ ಶಕ್ತಿ ಕ್ಷೇತ್ರ ಹೊಂದಿರುವ ಕರಾವಳಿ, ಧರ್ಮ ಮತ್ತು ಶಕ್ತಿ ಸಮ್ಮಿಳಿತದ ಪವಿತ್ರ ಭೂಮಿ. ಶೈಕ್ಷಣಿಕ- ಧಾರ್ಮಿಕ ಸ್ಥಳಗಳಿಗೆ ಇಲ್ಲಿ ಯಾವುದೇ ಕೊರತೆ ಇಲ್ಲ. ರಾಜ್ಯದಲ್ಲಿ ಅತಿ ಹೆಚ್ಚು ಶಿಸ್ತಿನಿಂದ ಬ್ಯಾಂಕು, ಸಹಕಾರಿ ಸಂಘಗಳಲ್ಲಿ ಸಾಲಗಳು ಮರುಪಾವತಿಯಾಗುತ್ತಿದೆ ಎಂದರೆ ಅದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂದು ಅವರು ಶ್ಲಾಘಿಸಿದರು.

------------------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಣ ಹಂಚಿ ಗೆದ್ದವರಿಂದ ಜನಪರ ಆಡಳಿತ ಸಾಧ್ಯವಿಲ್ಲ
ಬಾಲ್ಯವಿವಾಹಕ್ಕೆ ಅವಕಾಶ ನೀಡಿದರೆ ಕಠಿಣ ಶಿಕ್ಷೆ