ಕನ್ನಡಪ್ರಭ ವಾರ್ತೆ ಹೊನ್ನಾಳಿ
ಭಾರತವನ್ನು ಜಗತ್ತಿನಲ್ಲಿಯೇ ಸ್ವಾವಲಂಭಿ ದೇಶವನ್ನಾಗಿಸುವ ನಿಟ್ಟಿನಲ್ಲಿ ದೇಶ ಭಕ್ತ ದಿ.ಪಂಡಿತ ದೀನ್ ದಯಾಳ್ ಉಪಾಧ್ಯಾಯ ಜನ್ಮದಿನವಾದ ಸೆ.25ರಿಂದ ದೇಶ ಕಂಡ ಅಪ್ರತಿಮ ಹಾಗೂ ಆಜಾತ ಶತ್ರು ಮಾಜಿ ಪ್ರಧಾನಿ ದಿವಂಗತ ಎ.ಬಿ.ವಾಜಪೇಯಿ ಅವರ ಜನ್ಮ ದಿನ ಡಿ.25ರವರೆಗೆ ಭಿಜೆಪಿ ವತಿಯಿಂದ ಆತ್ಮನಿರ್ಭರ ಭಾರತ ಸಂಕಲ್ಪ ಅಭಿಯಾನವನ್ನು ಹಮ್ಮಿಕೊಂಡಿದ್ದು, ಇದರ ಯಶಸ್ವಿಗೆ ಪಕ್ಷದ ಎಲ್ಲಾ ಮುಖಂಡರು, ಕಾರ್ಯಕರ್ತರು ಶ್ರಮಿಸಬೇಕು ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಕರೆ ನೀಡಿದರು.ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ಸಮುದಾಯ ಭವದಲ್ಲಿ ಶನಿವಾರ ಆಯೋಜಿಸಲಾಗಿದ್ದ ಆತ್ಮನಿರ್ಭರ ಭಾರತ ಸಂಕಲ್ಪ ಅಭಿಯಾನದ ತಾಲೂಕು ಮಟ್ಟದ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.
ಪಕ್ಷದ ಸಂಘಟನೆ ಮಾತ್ರವಲ್ಲ ಈಗಾಗಲೇ ಬಿಜೆಪಿ ಪಕ್ಷ ಸುಮಾರು 14 ಕೋಟಿ ಸದಸ್ಯರನ್ನು ಮಾಡುವ ಮೂಲಕ ದೇಶದಲ್ಲೇ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಏಕೈಕ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದೆ ಎಂದರು.ಭಾರತವನ್ನು ಸ್ವಾವಲಂಭಿ ದೇಶವನ್ನಾಗಿಸುವ ಪ್ರಧಾನಿ ನರೇಂದ್ರ ಮೋದಿ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಬಿಜೆಪಿ ಪಕ್ಷದ ಪ್ರತಿಯೋಬ್ಬ ಮುಖಂಡರು ಮತ್ತು ಕಾರ್ಯಕರ್ತರು ಶ್ರಮವಹಿಸಿ ಕೆಲಸ ಮಾಡಬೇಕಾಗಿದೆ. ಜಗತ್ತಿನ ಹಿರಿಯಣ್ಣ ಅಮೆರಿಕ ಇಂದು ನಮ್ಮ ದೇಶದ ಮೇಲೆ ತೆರಿಗೆ ಪ್ರಹಾರ ಮಾಡುತ್ತಿದ್ದು, ಇದನ್ನು ಮೆಟ್ಟಿ ನಿಲ್ಲುವ ಸಂದರ್ಭ ನಮಗೆ ಬಂದಿದೆ, ಈ ಹಿನ್ನೆಲೆ ಭಾರತೀಯರಾದ ನಾವು ಸ್ವದೇಶಿಯ ವಸ್ತುಗಳನ್ನು ಮಾತ್ರ ಉಪಯೋಗಿಸುವ ರೂಢಿ ಮಾಡಿಕೊಳ್ಳಬೇಕಾಗಿದೆ ಎಂದರು.
ಆತ್ಮನಿರ್ಭರ ಬಾರತ ರೋಜ್‌ಗಾರ್ ಯೋಜನೆಯಲ್ಲಿ ದೇಶದ ಸಣ್ಣ ಸಣ್ಣ ಉದ್ಯೋಗ ಮಾಡಲು ಮುಂದೆ ಬರುವವರಿಗೆ ಸಾಲ ಸೌಲಭ್ಯವಿದ್ದು, ಸಾಲದ ಮೇಲೆ ಸಬ್ಸಿಡಿ ಕೂಡ ಸಿಗಲಿದೆ ಎಂದರು.ಪಕ್ಷದ ಎಲ್ಲಾ ಮುಖಂಡರು, ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿಯವರು ಈ ಅಭಿಯಾನ ಮತ್ತು ಯೋಜನೆಯ ಕುರಿತಂತೆ ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕುಗಳ ಪ್ರತಿ ಮನೆ ಮನೆಗೆ ಭೇಟಿ ನೀಡಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಆತ್ಮನಿರ್ಭರ ಭಾರತ ಸಂಕಲ್ಪ ಆಭಿಯಾನದ ಜಿಲ್ಲಾ ಸಹಸಂಚಾಲಕ ಚಂದ್ರಶೇಖರ ಪೂಜಾರ್, ಮತ್ತು ಕೃಷ್ಣಕುಮಾರ್ ಮಾತನಾಡಿದರು.ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಆರಕೆರೆ ನಾಗರಾಜ್, ಮಾಜಿ ಅಧ್ಯಕ್ಷ ಜೆ.ಕೆ.ಸುರೇಶ್, ಮಾರುತಿ ನಾಯ್ಕ, ಕೆ.ಪಿ.ಕುಬೇರಪ್ಪ, ತರಗನಹಳ್ಳಿ ರಮೇಶ್ ಗೌಡ, ಕೆ. ರಂಗಪ್ಪ, ಕುಮಾರ ಸ್ವಾಮಿ, ಬಡಾವಣೆ ರಂಗಪ್ಪ ಮುಂತಾದವರು ಇದ್ದರು.
ಇಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಜಿಲ್ಲೆಗೆ ಭೇಟಿ:ದಾವಣಗೆರೆಯಲ್ಲಿ ಫ್ಲೆಕ್ಸ್ ವಿಚಾರವಾಗಿ ಕೆಲ ದಿನಗಳ ಹಿಂದೆ ನಡೆದ ಗಲಾಟೆಯ ಹಿನ್ನೆಲೆಯಲ್ಲಿ ದೂರು ಕೊಟ್ಟ ರಂಗಪ್ಪ ಎನ್ನುವವರನ್ನೇ ಬಂಧಿಸಲಾಗಿದ್ದು, ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭಾನುವಾರ ಸಂಜೆ ದಾವಣಗೆರೆಗೆ ಭೇಟಿ ನೀಡಲಿದ್ದಾರೆ ಎಂದು ತಿಳಿಸಿದರು.