ಕನ್ನಡಪ್ರಭ ವಾರ್ತೆ ಉಡುಪಿಸ್ಥಳೀಯವಾಗಿ ತಯಾರಿಸಲಾಗುವ ಉತ್ಪನ್ನಗಳಿಗೆ ಜಾಗತಿಕ ಮಾನ್ಯತೆ ಪಡೆಯಲು ಸಾಧ್ಯವಾದರೇ ಸುಸ್ಥಿರ ಆರ್ಥಿಕತೆ, ವಿಕಸಿತ ಭಾರತ ಮತ್ತು ಆತ್ಮನಿರ್ಭರ್ ಭಾರತದ ನಿರ್ಮಾಣ ಸಾಧ್ಯವಾಗುತ್ತದೆ ಎಂದು ತೆಲಂಗಾಣ ರಾಜ್ಯ ಬಿಜೆಪಿ ಅಧ್ಯಕ್ಷ ಎನ್.ರಾಮಚಂದ್ರ ರಾವ್ ಹೇಳಿದ್ದಾರೆ.
ಅವರು ಗುರುವಾರ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಪಂಡಿತ್ ದೀನ ದಯಾಳ್ ಉಪಾಧ್ಯಾಯ ಜನ್ಮದಿನಾಚರಣೆ ಹಾಗೂ ಆತ್ಮನಿರ್ಭರ ಭಾರತ ಸಂಕಲ್ಪ ಅಭಿಯಾನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಪಾಕ್ ಜೊತೆ ಯುದ್ಧ, ಅಮೆರಿಕದ ಸುಂಕ ಹೇರಿಕೆಯ ನಡುವೆಯೂ ಕೇಂದ್ರ ಸರ್ಕಾರ ಜಿಎಸ್‌ಟಿ ದರವನ್ನು ಇಳಿಕೆ ಮಾಡಿದೆ. ಕೇಂದ್ರದ ಇಂತಹ ಜನಪರ ಯೋಚನೆ, ನಿರ್ಧಾರಗಳು ದೇಶ ಆತ್ಮನಿರ್ಭರವಾಗುತ್ತಿರುವ ಲಕ್ಷಣಗಳಾಗಿವೆ. ದೇಶದಲ್ಲೀಗ ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನೂ ಮುಖ್ಯ ವಾಹಿನಿಗೆ ತರುವ ಕಾರ್ಯವಾಗುತ್ತಿದೆ. ಇದು ವಿಕಸಿತ ಭಾರತದ ಆರ್ಥಿಕತೆ ಸುಸ್ಥಿರವಾಗುವತ್ತ ಬಹುದೊಡ್ಡ ಹೆಜ್ಜೆಯಾಗಿದೆ ಎಂದರು.ವಿಕಸಿತ ಭಾರತ ನಿರ್ಮಾಣಕ್ಕೆ ಪಂಡಿತ್ ದೀನ ದಯಾಳ್ ಉಪಾಧ್ಯಾಯರ ಸರಳ ಬದುಕು, ಬಡವರ ಪರ ಚಿಂತನೆ, ತ್ಯಾಗ, ಆದರ್ಶಗಳನ್ನು ಬಹಳ ದೊಡ್ಡ ಪ್ರೇರಣೆಯಾಗಿವೆ ಎಂದು ಹೇಳಿದರು.ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜ ಪ್ರತಿಯೊಬ್ಬ ವ್ಯಕ್ತಿಯೂ ಸ್ವಾವಲಂಬಿಯಾಗಬೇಕು ಎಂಬ ದೀನ್ ದಯಾಳ್ ಉಪಾಧ್ಯಾಯರ ಕನಸು ಪ್ರಧಾನಿ ಮೋದಿ ನನಸು ಮಾಡುತ್ತಿದ್ದಾರೆ ಎಂದರು.ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ಮಾತನಾಡಿದರು. ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಕೊಡಗು ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಭಾರತೇಶ ವೇದಿಕೆಯಲ್ಲಿದ್ದರು. ಗಿರೀಶ್ ಅಂಚನ್ ಕಾರ್ಯಕ್ರಮ ನಿರೂಪಿಸಿ, ನವೀನ್ ನಾಯಕ್ ವಂದಿಸಿದರು.ಆತ್ಮನಿರ್ಭರ ಸಂಕಲ್ಪ:ನಂತರ ನಡೆದ ಆತ್ಮನಿರ್ಭರ ಸಂಕಲ್ಪ ಕಾರ್ಯಾಗಾರದಲ್ಲಿ ಕೊಡಗು ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಭಾರತೇಶ ಮಾತನಾಡಿ, ಏಕಾತ್ಮ ಮಾನವತಾ ವಾದ, ಅಂತ್ಯೋದಯ, ಸ್ವಾವಲಂಬನೆ, ಸ್ವದೇಶಿ ಚಿಂತನೆ ನಮ್ಮ ಬದುಕಿನ ಗುರಿಯಾಗಬೇಕು ಎಂದು ಹೇಳಿದರು. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ, ರೇಷ್ಮಾ ಉದಯ ಶೆಟ್ಟಿ, ಕಿರಣ್ ಕುಮಾರ್ ಬೈಲೂರು ಉಪಸ್ಥಿತರಿದ್ದರು. ಶಿವಕುಮಾರ್ ಅಂಬಲಪಾಡಿ ವಂದೇ ಮಾತರಂ ಹಾಡಿದರು. ರಾಘವೇಂದ್ರ ಕುಂದರ್ ಸ್ವಾಗತಿಸಿದರು. ಗಿರೀಶ್ ಅಂಚನ್ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಸ್ವದೇಶಿ ಉತ್ಪನ್ನ ಬಳಕೆಯ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.