ಕೇಂದ್ರದಿಂದ ಸ್ವಾಭಿಮಾನಿ ಸರ್ಕಾರ: ಕೋಟಾ ಶ್ರೀನಿವಾಸ್ ಪೂಜಾರಿ

KannadaprabhaNewsNetwork |  
Published : Jun 13, 2025, 03:05 AM ISTUpdated : Jun 13, 2025, 03:06 AM IST
ಚಿಕ್ಕಮಗಳೂರಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಂಸದ ಕೋಟಾ ಶ್ರೀನಿವಾಸ್‌ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಅಧಿಕಾರಿಗಳ ಸಭೆ ನಡೆಯಿತು. ಡಿಸಿ ಮೀನಾ ನಾಗರಾಜ್‌, ಎಡಿಸಿ ನಾರಾಯಣರಡ್ಡಿ ಕನಕರಡ್ಡಿ, ಬಿಜೆಪಿ ಮುಖಂಡ ಎಚ್‌.ಸಿ. ಕಲ್ಮರುಡಪ್ಪ ಇದ್ದರು. | Kannada Prabha

ಸಾರಾಂಶ

ಚಿಕ್ಕಮಗಳೂರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 11 ವರ್ಷ ಸಮೃದ್ಧ, ಸ್ವಾಭಿಮಾನಿ ಶಕ್ತಿಶಾಲಿ ಆಡಳಿತವನ್ನು ನೀಡಿದೆ ಎಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.

- 11 ವರ್ಷದಲ್ಲಿ ಕಪ್ಪು ಚುಕ್ಕೆ ಕಾಣಲು ಸಾಧ್ಯವಾಗದ ಆಡಳಿತ ನೀಡಿದ ಪ್ರಧಾನಿ ನರೇಂದ್ರ ಮೋದಿ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 11 ವರ್ಷ ಸಮೃದ್ಧ, ಸ್ವಾಭಿಮಾನಿ ಶಕ್ತಿಶಾಲಿ ಆಡಳಿತವನ್ನು ನೀಡಿದೆ ಎಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.

11 ವರ್ಷದ ಅಧಿಕಾರದಲ್ಲಿ ಒಂದೇ ಒಂದು ಭ್ರಷ್ಟಾಚಾರದ ಕಪ್ಪು ಚುಕ್ಕೆ ಕಾಣಲು ಸಾಧ್ಯವಾಗಿಲ್ಲ. ಅಮೇರಿಕ ನಡೆಸಿದ ಸಮೀಕ್ಷೆಯಲ್ಲಿ ಜಗತ್ತಿನ 50 ಮಂದಿ ಭ್ರಷ್ಟಾಚಾರ ರಹಿತ ಮುಖಂಡರ ಪಟ್ಟಿಯಲ್ಲಿ ನರೇಂದ್ರ ಮೋದಿ ಅವರ ಹೆಸರು ಮೊದಲ ಸ್ಥಾನದಲ್ಲಿರುವುದು ಹೆಮ್ಮೆಯ ವಿಚಾರ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.ನರೇಂದ್ರ ಮೋದಿ ಸರ್ಕಾರ ಕರ್ನಾಟಕಕ್ಕೆ ಆರ್ಥಿಕ ಸಹಾಯ ಮತ್ತು ನಿಷ್ಪಕ್ಷಪಾತ ತೆರಿಗೆ ಹಂಚಿಕೆ ಮಾಡಿದೆ. ಈ ಅನುದಾನ ದಲ್ಲಿ ಐತಿಹಾಸಿಕ ಹೆಚ್ಚಳ ಆಗಿದೆ. ಒಟ್ಟು ₹2.36 ಲಕ್ಷ ಕೋಟಿ ಕರ್ನಾಟಕಕ್ಕೆ ನೀಡಿದೆ. ಇದು 2004 ರಿಂದ 2014 ರವರೆಗೆ ಯುಪಿಎ ಸರ್ಕಾರ ನೀಡಿದ್ದ ₹60 ಸಾವಿರ ಕೋಟಿಗೆ ಹೋಲಿಸಿದಲ್ಲಿ ಶೇ.243 ರಷ್ಟು ಅಧಿಕವಾಗಿದೆ ಎಂದರು. ಕಳೆದ 10 ವರ್ಷದಲ್ಲಿ ರಾಜ್ಯಕ್ಕೆ ₹2.82 ಲಕ್ಷ ತೆರಿಗೆ ಪಾಲು ಸಿಕ್ಕಿದೆ. ಯುಪಿಎ ಸರ್ಕಾರದ 10 ವರ್ಷಗಳ ಅವಧಿಯಲ್ಲಿ 81 ಸಾವಿರ ಕೋಟಿ ರು.ಗಳಿಗಿಂತ ಶೇ.246 ರಷ್ಟು ಹೆಚ್ಚಾಗಿದೆ ಎಂದು ತಿಳಿಸಿದರು.ಯುಪಿಎ ಸರ್ಕಾರದ 10 ವರ್ಷದ ಅವಧಿಯಲ್ಲಿ ಶೇ.8.2 ರಷ್ಟಿದ್ದ ಸರಾಸರಿ ಹಣ ದುಬ್ಬರವು ಎನ್‌ಡಿಎ ಸರ್ಕಾರದ 11 ವರ್ಷದ ಅವಧಿಯಲ್ಲಿ ಶೇ.5 ಕ್ಕೆ ಇಳಿಕೆಯಾಗಿದೆ. ಯುಪಿಎ ಸರ್ಕಾರದ 10 ವರ್ಷದ ಅವಧಿಯಲ್ಲಿ ಕೇವಲ 2 ಕೋಟಿ ಉದ್ಯೋಗ ಸೃಷ್ಠಿಯಾಗಿದ್ದರೆ ಎನ್‌ಡಿಎ ಅವಧಿಯಲ್ಲಿ 17 ಕೋಟಿ ಉದ್ಯೋಗ ಸೃಷ್ಠಿಯಾಗಿದೆ ಎಂದು ತಿಳಿಸಿದರು.ಯುಪಿಎ 10 ವರ್ಷ ಅವಧಿಯಲ್ಲಿ ಬಹು ಆಯಾಮದ ಬಡತನ ಶೇ. 29.2 ರಷ್ಟಿದ್ದರೆ ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಶೇ.11.3ಕ್ಕೆ ಇಳಿಕೆಯಾಗಿದೆ. ಆದಾಯ ತೆರಿಗೆ ಸಂಗ್ರಹದಲ್ಲೂ ಎನ್‌ಡಿಎ ಅಧಿಕಾರದಲ್ಲಿ ಸಾಕಷ್ಟು ಹೆಚ್ಚಳ ಆಗಿದೆ. ವಿದೇಶಿ ವಿನಿಮಯ ಹೂಡಿಕೆಯಲ್ಲಿ ಯುಪಿಎ ಸರ್ಕಾರದ 10 ವರ್ಷದ ಅವಧಿಯಲ್ಲಿ 308 ಮಿಲಿಯನ್ ಡಾಲರ್ ಇದ್ದರೆ ಇಷ್ಟೇ ಅವಧಿಯ ಎನ್‌ಡಿಎ ಸರ್ಕಾರದ ಅವಧಿಯಲ್ಲಿ 748 ಬಿಲಿಯನ್ ಡಾಲರ್ ಆಗಿದೆ. ಯುಪಿಎ ಅವಧಿಯಲ್ಲಿ 5 ನಗರಗಳಲ್ಲಿ 248 ಕಿ.ಮೀ. ಮೆಟ್ರೋ ನಿರ್ಮಾಣವಾಗಿದ್ದರೆ ಎನ್‌ಡಿಎ ಅವಧಿಯ 11 ವರ್ಷದಲ್ಲಿ 29 ನಗರಗಳಲ್ಲಿ 1013 ಕಿ.ಮೀ. ಮೆಟ್ರೋ ಮಾರ್ಗ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದರು. ಕರ್ನಾಟಕದಲ್ಲಿ ರಸ್ತೆ, ರೈಲ್ವೆ, ನಗರಾಭಿವೃದ್ಧಿ ಮತ್ತು ಇಂಧನ ಕ್ಷೇತ್ರಗಳಲ್ಲಿ ₹5 ಲಕ್ಷ ಕೋಟಿಗೂ ಹೆಚ್ಚು ಹೂಡಿಕೆಯನ್ನು ಕೇಂದ್ರ ಸರ್ಕಾರ ಮಾಡಿದೆ. ಕರ್ನಾಟಕದಲ್ಲಿ 1860 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲಾಗಿದೆ. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಗೆ ₹8408 ಕೋಟಿ ಮತ್ತು ಬೆಂಗಳೂರಿನ ಸ್ಯಾಟಲೈಟ್ ಟೌನ್ ರಿಂಗ್ ರೋಡ್‌ಗೆ ₹27 ಸಾವಿರ ಕೋಟಿ ಬಿಡುಗಡೆ ಮಾಡಲಾಗಿದೆ ಎಂದರು.ನೈಋತ್ಯ ರೈಲ್ವೆಗೆ ವಾರ್ಷಿಕ ಸರಾಸರಿ ಅನುದಾನವನ್ನು ಯುಪಿಎ ಸರ್ಕಾರದ ₹835 ಕೋಟಿಯಿಂದ ಮೋದಿ ಸರ್ಕಾರದ ಅವಧಿಯಲ್ಲಿ ₹3424 ಕೋಟಿಗೆ ಏರಿಕೆ ಆಗಿದೆ. ರೈಲ್ವೇ ವಿದ್ಯುದೀಕರಣದಲ್ಲಿ ಐತಿಹಾಸಿಕ ಪ್ರಗತಿ ಸಾಧಿಸಲಾಗಿದೆ. ಕರ್ನಾಟಕದಲ್ಲಿ 10 ವಂದೇ ಭಾರತ್ ರೈಲುಗಳು ಸಂಚರಿಸುತ್ತಿವೆ. 56 ರೈಲು ನಿಲ್ದಾಣಗಳನ್ನು ಅಮೃತ ಭಾರತ ಯೋಜನೆ ಯಡಿ ಆಧುನೀಕರಣಗೊಳಿಸಲಾಗುತ್ತಿದೆ. ಕರ್ನಾಟಕದ ರೈಲ್ವೇ ಅಭಿವೃದ್ಧಿಗೆ ₹7564 ಕೋಟಿ ನಿಗಧಿಪಡಿಸಲಾಗಿದೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ದೇವರಾಜ ಶೆಟ್ಟಿ, ಮುಖಂಡರಾದ ಕೋಟೆ ರಂಗನಾಥ್, ಎಚ್.ಸಿ.ಕಲ್ಮರುಡಪ್ಪ, ಹಿರೇಮಗಳೂರು ಪುಟ್ಟಸ್ವಾಮಿ, ಬೆಳವಾಡಿ ರವೀಂದ್ರ, ಈಶ್ವರಳ್ಳಿ ಮಹೇಶ್, ನರೇಂದ್ರ ಇದ್ದರು. 12 ಕೆಸಿಕೆಎಂ 4ಚಿಕ್ಕಮಗಳೂರಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಂಸದ ಕೋಟಾ ಶ್ರೀನಿವಾಸ್‌ ಪೂಜಾರಿ ಅಧ್ಯಕ್ಷತೆಯಲ್ಲಿ ಗುರುವಾರ ಅಧಿಕಾರಿಗಳ ಸಭೆ ನಡೆಯಿತು. ಡಿಸಿ ಮೀನಾ ನಾಗರಾಜ್‌, ಎಡಿಸಿ ನಾರಾಯಣರಡ್ಡಿ ಕನಕರಡ್ಡಿ, ಬಿಜೆಪಿ ಮುಖಂಡ ಎಚ್‌.ಸಿ. ಕಲ್ಮರುಡಪ್ಪ ಇದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ