ಸಾಗರ : ಲೋಕಸಭಾ ಚುನಾವಣೆಯಲ್ಲಿ ಸ್ವಾಭಿಮಾನಿ ಮತದಾರರು ತಕ್ಕ ಉತ್ತರ ನೀಡಿದ್ದಾರೆ. ಅದನ್ನು ನಾವು ಶರಸಾವಹಿಸಿ ಪಾಲಿಸಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಪಟ್ಟಣದ ರಾಘವೇಶ್ವರ ಸಭಾ ಭವನದಲ್ಲಿ ನಡೆದ ಮತದಾರರು, ಕಾರ್ಯಕರ್ತರಿಗೆ ಧನ್ಯವಾದ ಸಮರ್ಪಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಮತದಾರರು ವಿಪಕ್ಷಗಳಿಗೆ ಮೋದಿಯವರ ಶಕ್ತಿ ಏನೆಂದು ಅರ್ಥ ಮಾಡಿಸಿದ್ದಾರೆ. ಹಾಗಾಗಿ ದೇಶದ ಮತದಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಗೆಲುವಿಗೆ ಹಿಗ್ಗದೆ, ಮುಂದೆಯೂ ಕಾರ್ಯಕರ್ತರು ತಲೆತಗ್ಗಿಸಲು ಅವಕಾಶ ನೀಡದೆ, ನೀವು ಜನರಿಗೆ ಕೊಟ್ಟ ಆಶ್ವಾಸನೆಗಳನ್ನು ಮುಖಂಡರ ಗಮನಕ್ಕೆ ತಂದು ಪೂರೈಸುವ ಕೆಲಸ ಮಾಡೋಣ. ಕಾರ್ಯಕರ್ತರ ಪರಿಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಪಕ್ಷದ ಸಿದ್ಧಾಂತ, ಹೋರಾಟದಲ್ಲಿ ನಂಬಿಕೆ ಇಟ್ಟು ದುಡಿದಿರುವ ಎಲ್ಲರಿಗೂ ಅಭಿನಂದನೆಗಳು ಎಂದರು.
ರಾಜ್ಯದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ೫೭೫೬ ಕೋಟಿ ರು. ಅನುದಾನ ದೊರಕಿದ್ದರೆ, ಶಿವಮೊಗ್ಗ ವಿಭಾಗದ ಪಾಲು ೨೫೦೦ ಕೋಟಿಯಷ್ಟಿದ್ದು, ಅದರಲ್ಲಿ ಶೇ.೭೦ರಷ್ಟು ಸಾಗರಕ್ಕೆ ಲಭಿಸಿದೆ. ಆನಂತಪುರದಿಂದ ಚೂರಿಕಟ್ಟೆವರೆಗಿನ ರಾ.ಹೆ. ಯೋಜನೆಗೆ ೪೦೦ ಕೋಟಿ ಸಿಕ್ಕಿದೆ. ಸಿಗಂದೂರು-ಮರಕುಟಿಗ ರಸ್ತೆಗೆ ೬೩೪ ಕೋಟಿ ರೂ. ದೊರಕಿದೆ. ಮುಖ್ಯವಾಗಿ ರೈಲ್ವೆ ಯೋಜನೆಗೆ ಹೆಚ್ಚಿನ ಆದ್ಯತೆ ನೀಡುತ್ತೇವೆ ಎಂದು ಭರವಸೆ ನೀಡಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಹೆಚ್.ಹಾಲಪ್ಪ ಮಾತನಾಡಿ, ನಿಮ್ಮ ಬದುಕಿನ ಅತ್ಯಮೂಲ್ಯವಾದ ಸಮಯ, ಶ್ರಮಕೊಟ್ಟು ಚುನಾವಣೆಯಲ್ಲಿ ಹೋರಾಟ ನಡೆಸಿ, ರಾಘವೇಂದ್ರರನ್ನು ಗೆಲ್ಲಿಸಿಕೊಂಡು ಬಂದಿದ್ದೀರಿ. ಇದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಎಲ್ಲ ಕಾರ್ಯಕರ್ತರು ಮತದಾರರಿಗೆ ಧನ್ಯವಾದ. ಜನಪರ ಕಾಳಜಿ, ಹೋರಾಟಗಳು ರಾಘವೇಂದ್ರರನ್ನುಇಲ್ಲಿವರೆಗೂ ತಂದಿದೆ ಎಂದರಲ್ಲದೆ ಸಂಸದರು ೨ ರೈಲ್ವೆ ಯೋಜನೆಯನ್ನು ಸಾಗರಕ್ಕೂ ವಿಸ್ತರಿಸಬೇಕು. ಮುಂದೆ ಹೊನ್ನಾವರಕ್ಕೂ ಕೊಂಡೊಯ್ಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ವಿಪ ಸದಸ್ಯ ಡಾ.ಧನಂಜಯ ಸರ್ಜಿ ಮಾತನಾಡಿ, ಅಹಂಕಾರದಿಂದ ವರ್ತಿಸಿದವರಿಗೆ ಏನಾಗುತ್ತದೆಎನ್ನುವುದನ್ನು ಎರಡೂ ಚುನಾವಣೆ ತೋರಿಸಿಕೊಟ್ಟಿದೆ. ಎದುರಾಳಿಗಿಂತ ನಾವು ನಮ್ಮ ಕೆಲಸದಲ್ಲಿ ಗಮಹರಿಸಬೇಕು. ಮತ ನೀಡಿ ಗೆಲ್ಲಿಸಿ, ಎಲ್ಲರ ಪರವಾಗಿ ಕೆಲಸ ಮಾಡಲು ಅವಕಾಶ ನೀಡಿದ್ದಕ್ಕೆ ಮತದಾರರು, ಕಾರ್ಯಕರ್ತರು, ಮುಖಂಡರಿಗೆ ಅಭಿನಂದನೆಗಳು ಎಂದರು.
ಪಕ್ಷದ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಪ್ರಮುಖರಾದ ಭಾನು ಪ್ರಕಾಶ್, ಗಣೇಶ್ ಪ್ರಸಾದ್, ದೇವೇಂದ್ರಪ್ಪ ಯಲಕುಂದ್ಲಿ, ಪ್ರಸನ್ನಕೆರೆಕ್ಕೆ, ಡಾ.ರಾಜನಂದಿನಿ ಕಾಗೋಡು, ಪ್ರಶಾಂತ್, ಜ್ಯೋತಿ ಪ್ರಭು, ಶ್ರೀನಿವಾಸ್ ಮೇಸ್ತ್ರಿ, ಮಧುರಾ ಶಿವಾನಂದ, ಮಹೇಶ್, ಭರ್ಮಪ್ಪ, ಮಲ್ಲಿಕಾರ್ಜುನ ಹಕ್ರೆ ಮೊದಲಾದವರಿದ್ದರು.