ನಿಸ್ವಾರ್ಥ ಸಮಾಜಸೇವೆಯೇ ಜೀವನದ ಶ್ರೇಷ್ಠ ಮೌಲ್ಯ: ಗುರುಶಾಂತಮೂರ್ತಿ

KannadaprabhaNewsNetwork |  
Published : Nov 25, 2026, 01:30 AM IST
ಸುರಪುರದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ೧೯ನೇ ಸಮಾವೇಶದಲ್ಲಿ ಹಿರಿಯ ನಿವೃತ್ತ ನೌಕರರನ್ನು ಸನ್ಮಾನಿಸಿ ಗೌರವಿಸಲಾಯಿತು. | Kannada Prabha

ಸಾರಾಂಶ

ಸಮಾಜಸೇವೆ ಮಾಡುವುದರಲ್ಲಿ ನಿಜವಾದ ಗೌರವ ಅಡಗಿದೆ. ಪ್ರಶಂಸೆ, ಪ್ರಚಾರ ಅಥವಾ ವೈಯಕ್ತಿಕ ಪ್ರತಿಷ್ಠೆಗಿಂತ ಸಮಾಜದ ಒಳಿತಿಗಾಗಿ ನಿಸ್ವಾರ್ಥವಾಗಿ ಕಾರ್ಯನಿರ್ವಹಿಸುವ ಮನೋಭಾವನೇ ಶ್ರೇಷ್ಠ ಮೌಲ್ಯವಾಗಿದೆ ಎಂದು ರುಕ್ಮಾಪುರ ಹಿರೇಮಠ ಸಂಸ್ಥಾನದ ಗುರುಶಾಂತಮೂರ್ತಿ ಶಿವಾಚಾರ್ಯರು ಹೇಳಿದರು.

ಕನ್ನಡಪ್ರಭ ವಾರ್ತೆ ಸುರಪುರ

ಸಮಾಜಸೇವೆ ಮಾಡುವುದರಲ್ಲಿ ನಿಜವಾದ ಗೌರವ ಅಡಗಿದೆ. ಪ್ರಶಂಸೆ, ಪ್ರಚಾರ ಅಥವಾ ವೈಯಕ್ತಿಕ ಪ್ರತಿಷ್ಠೆಗಿಂತ ಸಮಾಜದ ಒಳಿತಿಗಾಗಿ ನಿಸ್ವಾರ್ಥವಾಗಿ ಕಾರ್ಯನಿರ್ವಹಿಸುವ ಮನೋಭಾವನೇ ಶ್ರೇಷ್ಠ ಮೌಲ್ಯವಾಗಿದೆ ಎಂದು ರುಕ್ಮಾಪುರ ಹಿರೇಮಠ ಸಂಸ್ಥಾನದ ಗುರುಶಾಂತಮೂರ್ತಿ ಶಿವಾಚಾರ್ಯರು ಹೇಳಿದರು.

ನಗರದ ಸರ್ಕಾರಿ ಕನ್ಯಾ ಮಾದರಿ ಪ್ರಾಥಮಿಕ ಶಾಲೆ (ದರಬಾರ) ಆವರಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ರಾಜ್ಯ ಸರ್ಕಾರಿ ನಿವೃತ್ತ ನೌಕರರ ೧೯ನೇ ಸಮಾವೇಶ ಹಾಗೂ ತಾಲೂಕು ನಿವೃತ್ತ ಹಿರಿಯ ಸದಸ್ಯ ಬಂಧುಗಳ ಸನ್ಮಾನ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ನಿವೃತ್ತ ನೌಕರರು ತಮ್ಮ ಸೇವಾ ಅವಧಿಯಲ್ಲಿ ಸಲ್ಲಿಸಿದ ಕೊಡುಗೆ ಹಾಗೂ ನಿವೃತ್ತಿಯ ನಂತರವೂ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಮಾಜಕ್ಕೆ ಮತ್ತು ನಾಡಿಗೆ ಆದರ್ಶ ವ್ಯಕ್ತಿಗಳಾಗಿದ್ದಾರೆ. ಇಂತಹ ಹಿರಿಯರನ್ನು ಗೌರವಿಸುವುದು ಅವರ ಸೇವೆಯನ್ನು ಸ್ಮರಿಸುವುದಷ್ಟೇ ಅಲ್ಲ, ಯುವ ಪೀಳಿಗೆಯಲ್ಲಿ ಜವಾಬ್ದಾರಿ, ಸೇವಾ ಮನೋಭಾವ ಮತ್ತು ಸಾಮಾಜಿಕ ಬದ್ಧತೆಯನ್ನು ಬೆಳೆಸಲು ಪ್ರೇರಣೆಯಾಗುತ್ತದೆ ಎಂದರು.

ಕ.ರಾ.ಸ.ನಿ.ನೌ.ಸಂಘದ ಗೌರವಾಧ್ಯಕ್ಷ ಡಾ.ರಾಘವೇಂದ್ರ ಗುಡಗುಂಟಿ ಮಾತನಾಡಿ, ನಿವೃತ್ತ ನೌಕರರು ಸಭೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ತಮ್ಮ ವೈಯಕ್ತಿಕ, ಕುಟುಂಬ ಪಿಂಚಣಿ ಸಂಬಂಧಿತ ಸಮಸ್ಯೆಗಳ ಕುರಿತು ಮುಕ್ತವಾಗಿ ಚರ್ಚಿಸಬೇಕು. ಕುಟುಂಬ ಪಿಂಚಣಿ, ಬ್ಯಾಂಕ್ ಹಾಗೂ ಖಜಾನೆ ಸಮಸ್ಯೆಗಳು, ಆರೋಗ್ಯ ಸಂಜೀವಿನಿ ಯೋಜನೆಯ ನೋಂದಣಿ, ಕಮ್ಯುಟೇಷನ್, ಬ್ಯಾಂಕ್‌ಗಳಲ್ಲಿ ಲೈಫ್ ಸರ್ಟಿಫಿಕೇಟ್ ಸಲ್ಲಿಸುವುದು ಸೇರಿದಂತೆ ವಿವಿಧ ದೈನಂದಿನ ಸಮಸ್ಯೆಗಳಿಗೆ ಸಂಘದ ಸಭೆಗಳ ಮೂಲಕ ಸೂಕ್ತ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.

ಸುರಪುರದಲ್ಲಿ ನಿವೃತ್ತ ನೌಕರರ ಕಟ್ಟಡ ನಿರ್ಮಾಣವಾಗಿದ್ದು, ಸಂಘದ ಕಚೇರಿಯನ್ನು ಎಲ್ಲ ನಿವೃತ್ತ ನೌಕರರು ತಮ್ಮ ಮನೆಯೆಂಬ ಭಾವನೆಯಿಂದ ಬಳಸಿಕೊಳ್ಳಬೇಕು. ಕಚೇರಿಯಲ್ಲಿ ದಿನಪತ್ರಿಕೆಗಳ ವ್ಯವಸ್ಥೆ ಮಾಡಿಸಿ, ಸದಸ್ಯರು ಪರಸ್ಪರ ಭೇಟಿಯಾಗಿ ವಿಚಾರ ವಿನಿಮಯ ಮಾಡಿಕೊಳ್ಳುವ ಮೂಲಕ ಸಂಘದ ಚಟುವಟಿಕೆಯ ಕೇಂದ್ರವನ್ನಾಗಿಸಬೇಕು ಎಂದು ಡಾ.ರಾಘವೇಂದ್ರ ಆಶಯ ವ್ಯಕ್ತಪಡಿಸಿದರು.

ಸಮಾವೇಶದಲ್ಲಿ ಜೇಷ್ಠತಾ ಆಧಾರದ ಮೇಲೆ ಹಿರಿಯ ನಿವೃತ್ತ ನೌಕರರಾದ ಹುಲಗಯ್ಯ ಶೆಟ್ಟಿಗೇರಾ, ಮಹ್ಮದ್ ಮಹಿಬೂಬಸಾ,ಶೇಷಣ್ಣ ಮಲ್ಲೇಶಪ್ಪ ಬಡಿಗೇರ, ಮೋನಪ್ಪ ಬಣಗಾರ, ನಿವೃತ್ತ ಎಸ್ಪಿ ಸಿ.ಎನ್. ಭಂಡಾರಿ, ಪ್ರಭುದೇವ ಜಿ. ಕಲ್ಲೂರಮಠ, ಚನ್ನಬಸಯ್ಯ ಜೆಟಗಿಮಠ, ಖಾದರಸಾಬ ಲೈನ್, ಶಂಕ್ರಪ್ಪ ಬಣಗಾರ, ಲಕ್ಷ್ಮಣ ಚಾರು,ಕೊಟ್ರಯ್ಯಸ್ವಾಮಿ ಬಳ್ಳುಂಡಗಿಮಠ ಅವರನ್ನು ಸನ್ಮಾನಿಸಲಾಯಿತು.

ಉಪ ಪ್ರಾಂಶುಪಾಲ ಯಲ್ಲಪ್ಪ ಕಾಡ್ಲೂರು, ನಿವೃತ್ತ ಎಸ್ಪಿ ಚಂದ್ರಕಾಂತ ಭಂಡಾರಿ ಹಾಗೂ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ನೌಕರ ಸಂಘದ ಅಧ್ಯಕ್ಷ ಶಿವಪ್ಪ ಬಿ. ಕಟ್ಟಿಮನಿ ಅವರು ಮಾತನಾಡಿದರು. ಸುರಪುರದ ರಾಜಾವಂಸ್ಥರಾದ ರಾಜಾ ಲಕ್ಷ್ಮೀನಾರಾಯಣ ನಾಯಕ ಕಾರ್ಯಕ್ರಮ ಉದ್ಘಾಟಿಸಿದರು. ಉದ್ಯಮಿ ಗ್ಯಾನಚಂದ ಜೈನ್, ಸಂಘದ ಉಪಾಧ್ಯಕ್ಷರಾದ ರಾಜಾ ಅಮರಪ್ಪರಾಜ ಮತ್ತು ಕೆಂಭಾವಿ ಅಬ್ದುಲ್ ರಜಾಕ ಸಾಬ್‌ ನಾಲತವಾಡ, ನಿವೃತ್ತ ವೈದ್ಯಾಧಿಕಾರಿ ಡಾ.ವಿ.ಎಲ್.ಚೌಧರಿ ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಪ್ರಭುದೇವ ಜಿ. ಕಲ್ಲೂರಮಠ, ಕೋಶಾಧಿಕಾರಿ ಹನುಮಪ್ಪ ಪೂಜಾರಿ, ರಾಮಕೋಟೆಪ್ಪ ಯಳಮೇಲಿ, ಲಿಂಗಯ್ಯ ಜಿ.ಕಲ್ಲೂರಮಠ, ಭೀಮಣ್ಣ ಗುಡ್ಡಕಾಯಿ, ಹಣಮಂತ ಕಮತಗಿ ಸೇರಿದಂತೆ ಅನೇಕ ನಿವೃತ್ತ ನೌಕರರು ಭಾಗವಹಿಸಿದ್ದರು. ರಾಮಕೋಟೆಪ್ಪ ಯಳಮೇಲಿ ಗಣ್ಯರ ಪರಿಚಯ ಮಾಡಿದರು. ಹಣಮಂತ್ರಾಯ ಕಮತಗಿ ದೇವರಗೋನಾಲ ಪ್ರಾರ್ಥನಾ ಗೀತೆ ಹಾಡಿದರು. ಭೀಮಣ್ಣ ಹುದ್ದಾರ ಸ್ವಾಗತಿಸಿದರು. ಎಚ್.ರಾಠೋಡ್ ನಿರೂಪಿಸಿ, ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಂಗ್ರೆಸ್, ಬಿಜೆಪಿ ಎರಡು ಪಕ್ಷಗಳೂ ಸಂವಿಧಾನ ವಿರೋಧಿ: ಎಂ.ಕೃಷ್ಣಮೂರ್ತಿ
ಇಂದು ರೈತರ ಟ್ರ್ಯಾಕ್ಟರ್ ರ್‍ಯಾಲಿಗೆ ಮಹಿಳಾ ಒಕ್ಕೂಟ ಬೆಂಬಲ