ಕಾಗದ ಮಿಶ್ರಿತ ಪಿಒಪಿ ಗಣೇಶ ವಿಗ್ರಹಗಳ ಮಾರಾಟ..!

KannadaprabhaNewsNetwork |  
Published : Aug 25, 2025, 01:00 AM IST
೨೪ಕೆಎಂಎನ್‌ಡಿ-೧ ಮತ್ತು ೨ಮಂಡ್ಯದಲ್ಲಿ ಹೊಸಹಳ್ಳಿ ಬಡಾವಣೆಯಲ್ಲಿ ಮಾರಾಟಕ್ಕಿಡಲಾಗಿರುವ ಗಣೇಶ ಮೂರ್ತಿಗಳು. | Kannada Prabha

ಸಾರಾಂಶ

ಗೌರಿ-ಗಣೇಶ ಹಬ್ಬ ಬಂದಿದೆ. ಹಬ್ಬದ ಆಕರ್ಷಣೆ ಹೆಚ್ಚಿಸಲು ಗೌರಿ-ಗಣೇಶ ವಿಗ್ರಹಗಳೂ ಮಾರುಕಟ್ಟೆಗೆ ಬಂದಿವೆ. ಈ ವೇಳೆ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಮಾರಾಟ ಮಾಡಬೇಕೆಂಬುದು ನಿಯಮ. ಆದರೆ, ವಾಸ್ತವದಲ್ಲಿ ನಿಯಮ ಪಾಲಿಸುತ್ತಿರುವವರನ್ನು ದುರ್ಬೀನು ಹಾಕಿ ಹುಡಕಬೇಕಿದೆ.

ಮಂಡ್ಯ ಮಂಜುನಾಥ

ಕನ್ನಡಪ್ರಭ ವಾರ್ತೆ ಮಂಡ್ಯ

ಗೌರಿ-ಗಣೇಶ ಹಬ್ಬ ಬಂದಿದೆ. ಹಬ್ಬದ ಆಕರ್ಷಣೆ ಹೆಚ್ಚಿಸಲು ಗೌರಿ-ಗಣೇಶ ವಿಗ್ರಹಗಳೂ ಮಾರುಕಟ್ಟೆಗೆ ಬಂದಿವೆ. ಈ ವೇಳೆ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಮಾರಾಟ ಮಾಡಬೇಕೆಂಬುದು ನಿಯಮ. ಆದರೆ, ವಾಸ್ತವದಲ್ಲಿ ನಿಯಮ ಪಾಲಿಸುತ್ತಿರುವವರನ್ನು ದುರ್ಬೀನು ಹಾಕಿ ಹುಡಕಬೇಕಿದೆ. ಪಿಒಪಿಯನ್ನೇ ಪ್ರಧಾನವಾಗಿಸಿಕೊಂಡು ಅಲ್ಪ ಪ್ರಮಾಣದ ಕಾಗದ ಬಳಕೆಯೊಂದಿಗೆ ನಿರ್ಮಾಣಗೊಂಡಿರುವ ಗಣೇಶ ಮೂರ್ತಿಗಳು ಎಲ್ಲೆಡೆ ಮಾರಾಟಕ್ಕೆ ಸಿದ್ಧಗೊಂಡಿವೆ.

ಪಿಒಪಿಯನ್ನೇ ಬಳಸದೆ ಗಣೇಶ ಮೂರ್ತಿಗಳನ್ನು ನಿರ್ಮಿಸುವುದು ಕಷ್ಟದ ಸಂಗತಿ. ವಿಗ್ರಹಗಳ ತಯಾರಿಕೆಗೆ ಮೊದಲಿನಷ್ಟು ದಪ್ಪನೆಯ ಪ್ರಮಾಣದಲ್ಲಿ ಪಿಒಪಿಯನ್ನು ಬಳಸುವುದನ್ನು ಸರಳಗೊಳಿಸಿ ಸಣ್ಣ ಪ್ರಮಾಣದಲ್ಲಿ ವಿಗ್ರಹಗಳ ಅಂಗಾಂಗಳನ್ನು ತಯಾರಿಸುತ್ತಿದ್ದಾರೆ. ಈ ಮೂರ್ತಿಗಳಿಗೆ ರಾಸಾಯನಿಕ ಬಣ್ಣವನ್ನು ಬಳಸಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ನೈಸರ್ಗಿಕ ಬಣ್ಣದ ಕುರುಹುಗಳು ಎಲ್ಲಿಯೂ ಕಾಣಸಿಗುವುದೇ ಇಲ್ಲ. ಪಿಒಪಿ ಗಣಪಗಳನ್ನೇ ಕಾಗದದ ಗಣಪತಿ ಎಂದು ನಂಬಿಸಿ ಮಾರಾಟ ಮಾಡುತ್ತಿದ್ದಾರೆ. ಅದು ಕೊಳ್ಳುವವರಿಗೆ ಮತ್ತು ಮಾರುವವರಿಗೆ ಮಾತ್ರ ಗೊತ್ತಿರುತ್ತದೆ.

ಗಣೇಶ ವಿಗ್ರಹಗಳ ತಯಾರಿಕೆಗೆ ಶೇ.೬೦ರಿಂದ ೭೦ರಷ್ಟು ಪಿಒಪಿಯನ್ನು ಬಳಸಲೇಬೇಕು. ಆಗ ಮಾತ್ರ ೧೫ ರಿಂದ ೨೦ ಅಡಿಯವರೆಗೆ ಗಣೇಶ ಮೂರ್ತಿಗಳನ್ನು ತಯಾರಿಸಲು ಸಾಧ್ಯ. ಮಣ್ಣು ಮತ್ತು ಕಾಗದದಿಂದ ಕೂಡಿದ ಗಣಪಗಳನ್ನು ಅಷ್ಟು ಎತ್ತರಕ್ಕೆ ನಿರ್ಮಿಸಲು ಸಾಧ್ಯವೇ ಇಲ್ಲ. ಒಮ್ಮೆ ನಿರ್ಮಿಸಿದರೆ ಅವುಗಳ ಸುರಕ್ಷಿತ ಸಾಗಣೆ ಅಸಾಧ್ಯದ ಮಾತಾಗಿದೆ. ಹಾಗಾಗಿ ಸಣ್ಣ ಪ್ರಮಾಣದ ಗೌರಿ-ಗಣೇಶ ಮೂರ್ತಿಗಳನ್ನು ಮಣ್ಣಿನಲ್ಲಿ ನಿರ್ಮಿಸಿದರೆ ವಿವಿಧ ವಿನ್ಯಾಸದ ಬೃಹತ್ ಗಣೇಶ ಮೂರ್ತಿಗಳ ತಯಾರಿಕೆಗೆ ಪಿಒಪಿಯನ್ನೇ ಪ್ರಧಾನವಾಗಿ ಬಳಸಲಾಗುತ್ತಿದೆ. ಅದರಿಂದ ಎಷ್ಟು ಎತ್ತರದ ಗಣೇಶ ಮೂರ್ತಿಗಳನ್ನಾದರೂ ಪ್ರತಿಷ್ಠಾಪಿಸಲು ಸಾಧ್ಯವಿದೆ.

ಮಂಡ್ಯದ ಹೊಸಹಳ್ಳಿ ಬಡಾವಣೆ, ಒಳಾಂಗಣ ಕ್ರೀಡಾಂಗಣದ ಪಕ್ಕ, ಪೇಟೆಬೀದಿ, ಹೊಳಲು ಸರ್ಕಲ್ ಸೇರಿದಂತೆ ಹಲವೆಡೆ ಗಣೇಶ ಮೂರ್ತಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಕೆಲವರು ಕದ್ದು-ಮುಚ್ಚಿ ಪಿಒಪಿ ಗಣೇಶ ಮೂರ್ತಿಗಳನ್ನು ಮಾರಾಟ ಮಾಡುತ್ತಿದ್ದರೆ, ಕೆಲವರು ರಾಜಾರೋಷವಾಗಿ ತೆರೆದಿಟ್ಟುಕೊಂಡೇ ಮಾರಾಟಕ್ಕಿಳಿದಿದ್ದಾರೆ. ಅವರಿಗೆ ಅಧಿಕಾರಿಗಳು ಸೇರಿದಂತೆ ಯಾರೊಬ್ಬರ ಭಯವೂ ಇಲ್ಲದಂತಾಗಿದೆ.

ಮಹಾರಾಷ್ಟ್ರದ ಸೊಲ್ಲಾಪುರದಿಂದ ಗಣೇಶ ವಿಗ್ರಹಗಳ ಬಿಡಿ ಭಾಗಗಳನ್ನು ತಯಾರಿಸಿಕೊಂಡು ಇಲ್ಲಿಗೆ ತಂದ ನಂತರ ಅವುಗಳನ್ನು ಜೋಡಿಸಿ ಬಣ್ಣ ಹಚ್ಚಿ ಮಾರಾಟಕ್ಕೆ ಇಡಲಾಗುತ್ತಿದೆ. ಈ ರೀತಿ ಮಣ್ಣು ಮತ್ತು ಕಾಗದದಿಂದ ಗಣೇಶ ಮೂರ್ತಿಯ ಸೊಂಡಿಲು, ಕೈ-ಕಾಲು, ತಲೆ, ಪ್ರಾಣಿಗಳು ಹಾಗೂ ವಿವಿಧ ದೇವರುಗಳ ಬಿಡಿಭಾಗಗಳನ್ನು ತರಲು ಸಾಧ್ಯವೇ ಇಲ್ಲ. ಸೊಂಡಿಲು, ಮುಖ ಸೇರಿದಂತೆ ಇಡೀ ವಿಗ್ರಹಕ್ಕೆ ಬಣ್ಣ ಲೇಪನ ಯಂತ್ರದ ಸಹಾಯದಿಂದ ಸ್ಪ್ರೇ ಮಾಡಿರುವುದು ಕಣ್ಣಿಗೆ ಕಟ್ಟಿದಂತೆ ಕಾಣುತ್ತದೆ. ನೈಸರ್ಗಿಕ ಬಣ್ಣವನ್ನು ಆ ರೀತಿಯಲ್ಲಿ ಹಚ್ಚುವುದಕ್ಕೆ ಸಾಧ್ಯವಿಲ್ಲದಿದ್ದರೂ ವಾಸ್ತವ ಸತ್ಯವನ್ನು ಮರೆಮಾಚಿ ಗಣೇಶ ಮೂರ್ತಿಗಳನ್ನು ಮಾರಾಟ ಮಾಡಲಾಗುತ್ತಿದೆ.

ಪಿಒಪಿ ಗಣೇಶ ವಿಗ್ರಹಗಳ ಮಾರಾಟ ನಿಷೇಧಿಸಿರುವ ಅಧಿಕಾರಿಗಳಿಗೂ ವಾಸ್ತವ ಏನೆಂಬ ಬಗ್ಗೆ ಅರಿವಿದೆ. ಆದರೂ ಪಿಒಪಿ ವಿಗ್ರಹಗಳ ವಿರುದ್ಧ ಕ್ರಮ ಜರುಗಿಸುವ ಇಚ್ಛಾಶಕ್ತಿ, ಬದ್ಧತೆಯನ್ನು ಮಾತ್ರ ಪ್ರದರ್ಶಿಸುತ್ತಿಲ್ಲ. ವಿಗ್ರಹ ಮಾರಾಟ ಸ್ಥಳಕ್ಕೆ ತೆರಳಿ ಅದು ಮಣ್ಣಿನದ್ದೋ, ಕಾಗದದ್ದೋ, ಪಿಒಪಿ ವಿಗ್ರಹಗಳೋ, ಪಿಒಪಿಯನ್ನು ಬಳಸಿದ್ದರೆ ಅದು ಎಷ್ಟು ಪ್ರಮಾಣದಲ್ಲಿದೆ. ರಾಸಾಯನಿಕ ಬಣ್ಣದ ಬಳಕೆ ಎಷ್ಟಿದೆ, ಪರಿಸರ ಸ್ನೇಹಿ ಗಣೇಶ ಮೂರ್ತಿಗಳು ಎಷ್ಟು ಪ್ರಮಾಣದಲ್ಲಿ ಮಾರಾಟಕ್ಕಿಡಲಾಗಿದೆ. ಅದರಲ್ಲಿ ಪಿಒಪಿ ಗಣೇಶ ಮೂರ್ತಿಗಳ ಪ್ರಮಾಣವೆಷ್ಟು ಎಂಬ ಪರಿಶೀಲನೆ ಮಾಡುವ ಗೋಜಿಗೆ ಹೋಗದೆ ಕಂಡೂ ಕಾಣದಂತೆ ದೂರವೇ ಉಳಿದಿದ್ದಾರೆ. ಹೀಗಾಗಿ ಪಿಒಪಿ ಗಣೇಶ ಮೂರ್ತಿಗಳ ಮಾರಾಟ ನಿರ್ಬಂಧ ಬಿಳಿಯ ಹಾಳೆಗೆ ಮಾತ್ರ ಸೀಮಿತವಾಗಿ ಉಳಿದುಕೊಂಡಿದೆ.

ಮಣ್ಣಿನ ಮತ್ತು ಕಾಗದಿಂದ ಗಣೇಶ ಮೂರ್ತಿಗಳನ್ನು ತಯಾರಿಸಿದರೆ ಯಾರೂ ಕೊಳ್ಳುವುದಕ್ಕೆ ಮುಂದೆ ಬರುವುದಿಲ್ಲ. ಗಣೇಶ ಪ್ರತಿಷ್ಠಾಪಿಸುವವರಿಗೆ ನೋಡಲು ಅಂದ-ಚೆಂದದಿಂದ ಕೂಡಿರಬೇಕು. ಮೂರ್ತಿ ಹೊಳಪಾಗಿರಬೇಕು ಹಾಗೂ ಸುಲಭವಾಗಿ ಸಾಗಣೆ ಮಾಡುವ ಗಣೇಶ ವಿಗ್ರಹಗಳನ್ನೇ ಇಷ್ಟಪಡುತ್ತಾರೆ. ಇಂತಹ ಮನಮೆಚ್ಚುವ ರೀತಿಯ ವಿಗ್ರಹಗಳನ್ನು ಪಿಒಪಿಯಿಂದಷ್ಟೇ ಮಾಡುವುದಕ್ಕೆ ಸಾಧ್ಯವಿದೆ. ಈ ಪಿಒಪಿ ವಿಗ್ರಹಗಳನ್ನು ಮೈಸೂರು, ಹೆಗ್ಗಡದೇವನಕೋಟೆ, ಟಿ.ನರಸೀಪುರ, ಬನ್ನೂರು ಸೇರಿದಂತೆ ಹೊರಗಿನಿಂದ ಬಂದು ಇಲ್ಲಿ ಮೂರ್ತಿಗಳನ್ನು ಬುಕ್ಕಿಂಗ್ ಮಾಡಿ ಯುವಕರು ಕೊಂಡೊಯ್ಯುತ್ತಾರೆ. ೫೦ ಸಾವಿರ ಬೆಲೆಯದ್ದಾದರೂ ಪ್ರತಿಷ್ಠೆಗಾಗಿ ಕೊಂಡುಕೊಳ್ಳುವರು.

ಗಣೇಶ ಮೂರ್ತಿ ಮಾರಾಟಗಾರರಿಗೂ ಅಂತಹವರೇ ಬೇಕು. ಏಕೆಂದರೆ, ಇದರಿಂದ ಹಬ್ಬದ ಸಮಯದಲ್ಲಿ ಹೆಚ್ಚು ಲಾಭ ಗಳಿಸಬಹುದು. ಲಾಭ-ನಷ್ಟದ ಲೆಕ್ಕಾಚಾರದಲ್ಲಿ ಗಣೇಶ ಮೂರ್ತಿಗಳ ಮಾರಾಟ ನಡೆಯುವುದರಿಂದ ಅದರ ಎದುರು ಪರಿಸರ ಉಳಿವು, ಜಲಮಾಲಿನ್ಯ, ಜಲಚರಗಳ ಸಂರಕ್ಷಣೆ ಎಲ್ಲವೂ ಗೌಣವಾಗಿದೆ.

PREV

Recommended Stories

ದಸರಾ ಉದ್ಘಾಟನೆಗೆ ಬಾನು : ಬಿಜೆಪಿ vs ಕಾಂಗ್ರೆಸ್ ಜಟಾಪಟಿ
ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ