ಲೋಕಿಕೆರೆಗೆ ಉಜ್ವಲ ರಾಜಕೀಯ ಭವಿಷ್ಯ: ಬಿ.ಸಿ.ಪಾಟೀಲ್‌

KannadaprabhaNewsNetwork |  
Published : Aug 25, 2025, 01:00 AM IST
24ಕೆಡಿವಿಜಿ8-ದಾವಣಗೆರೆಯಲ್ಲಿ ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ ಜನ್ಮದಿನಾಚರಣೆ ಸಮಾರಂಭ ಉದ್ಘಾಟನೆಯಲ್ಲಿ ಶ್ರೀ ಬಸವಪ್ರಭು ಸ್ವಾಮೀಜಿ, ಮಾಜಿ ಸಚಿವರಾದ ಎಸ್.ಎ.ರವೀಂದ್ರನಾಥ, ನಡಹಳ್ಳಿ, ಬಿ.ಸಿ.ಪಾಟೀಲ, ಎಂ.ಪಿ.ರೇಣುಕಾಚಾರ್ಯ ಇತರರು.  | Kannada Prabha

ಸಾರಾಂಶ

ವಿಧಾನಸಭೆ ಚುನಾವಣೆಯಲ್ಲಿ ದಾವಣಗೆರೆ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಲೋಕಿಕೆರೆ ನಾಗರಾಜ ಸೋತಿದ್ದು ಕಾಂಗ್ರೆಸ್ಸಿನ ದೊಡ್ಡ ಬೆಟ್ಟದ ಎದುರಾಗಿದ್ದು, ಮುಂದೊಂದು ದಿನ ಗೆದ್ದಾಗ ಅದೇ ಬೆಟ್ಟ ಕಾಲ ಬುಡದಲ್ಲಿರುತ್ತದೆ. ಅವರ ಮುಂದಿನ ರಾಜಕೀಯ ಭವಿಷ್ಯ ಉಜ್ವಲವಾಗಲಿದೆ ಎಂದು ಬಿಜೆಪಿ ಮಾಜಿ ಸಚಿವ ಬಿ.ಸಿ.ಪಾಟೀಲ್‌ ಹೇಳಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ವಿಧಾನಸಭೆ ಚುನಾವಣೆಯಲ್ಲಿ ದಾವಣಗೆರೆ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಲೋಕಿಕೆರೆ ನಾಗರಾಜ ಸೋತಿದ್ದು ಕಾಂಗ್ರೆಸ್ಸಿನ ದೊಡ್ಡ ಬೆಟ್ಟದ ಎದುರಾಗಿದ್ದು, ಮುಂದೊಂದು ದಿನ ಗೆದ್ದಾಗ ಅದೇ ಬೆಟ್ಟ ಕಾಲ ಬುಡದಲ್ಲಿರುತ್ತದೆ. ಅವರ ಮುಂದಿನ ರಾಜಕೀಯ ಭವಿಷ್ಯ ಉಜ್ವಲವಾಗಲಿದೆ ಎಂದು ಬಿಜೆಪಿ ಮಾಜಿ ಸಚಿವ ಬಿ.ಸಿ.ಪಾಟೀಲ್‌ ಹೇಳಿದರು.

ನಗರದ ಶ್ರೀ ಅಭಿನವ ರೇಣುಕಾ ಮಂದಿರದಲ್ಲಿ ಭಾನುವಾರ ಬಿಜೆಪಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ ಜನ್ಮದಿನೋತ್ಸವ ಉದ್ಘಾಟಿಸಿ ಮಾತನಾಡಿ, ಹಲವಾರು ಕಾರಣದಿಂದ ಲೋಕಿಕೆರೆ ನಾಗರಾಜ ಕಳೆದ ಚುನಾವಣೆಯಲ್ಲಿ ಸೋತಿರಬಹುದು, ಆದರೆ ಯಾರ ಎದುರು ನಿಂತಿದ್ದರು ಎಂಬುದು ಗಮನಾರ್ಹ. ಮುಂದಿನ ದಿನಗಳಲ್ಲಿ ನಾಗರಾಜ ಗೆದ್ದೇ ಗೆಲ್ಲುತ್ತಾರೆ ಎಂದರು.

ಮಧ್ಯ ಕರ್ನಾಟಕದ ದಾವಣಗೆರೆ ಬಿಜೆಪಿಯ ಭದ್ರಕೋಟೆ ಎಂಬುದೇನೋ ನಿಜ. ಆದರೆ, ಲೋಕಿಕೆರೆ ನಾಗರಾಜ ಸ್ಪರ್ಧಿಸಿದ್ದು ಇಲ್ಲಿನ ಪ್ರಭಾವಿ ಅಭ್ಯರ್ಥಿ ವಿರುದ್ಧ. ಅದೊಂದು ದೊಡ್ಡ ಬೆಟ್ಟ ಇದ್ದಂತೆ. ಅಂತಹ ಬೆಟ್ಟವನ್ನು ಹತ್ತಲು ಸಾಧ್ಯವಾಗದಿರಬಹುದು. ಆದರೆ, ಮುಂದೊಂದು ದಿನ ಗೆಲ್ಲುತ್ತೇನೆಂಬ ಆತ್ಮವಿಶ್ವಾಸದಿಂದ ಬೆಟ್ಟ ಹತ್ತಿದರೆ ಬೆಟ್ಟವೇ ಕಾಲಡಿ ಇರುತ್ತದೆ ಎಂದರು.

ಸೋತರೂ ಸಹ 70 ಸಾವಿರ ಮತಗಳನ್ನು ನಾಗರಾಜ ಪಡೆದಿದ್ದಾರೆ. ಮಾಜಿ ಸಚಿವರು, ಮಾಜಿ ಶಾಸಕರೇ ಇಂದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಮುಂದಿನ ಚುನಾವಣೆಗಳಲ್ಲಿ ಇದೇ ಮಾಜಿಗಳೇ ಹಾಲಿಗಳಾಗುತ್ತಾರೆ ಎಂದು ಹೇಳಿದರು.

ಇದೇ ದಾವಣಗೆರೆಯಿಂದಲೇ ನಾನು ಬದುಕು ಕಟ್ಟಿಕೊಂಡವರು. ಈ ನೆಲದಲ್ಲೇ ಪೊಲೀಸ್ ಅಧಿಕಾರಿಯಾಗಿ, ನಟನಾಗಿ ಮತ್ತು ರಾಜಕಾರಣಿಯಾಗಿ ಬೆಳೆದವರು. ಇದು ದಾವಣಗೆರೆಯಲ್ಲ, ಹೆಸರಿಗೆ ತಕ್ಕಂತೆ ನನ್ನ ಪಾಲಿನ ದೇವನಗರಿಯಾಗಿದೆ. ಒಬ್ಬ ಸಾಮಾನ್ಯ ರೈತನ ಮಗನಾಗಿ, ರೈತರ ಸಂಕಷ್ಟಗಳನ್ನು ಅರಿತ ಲೋಕಿಕೆರೆ ನಾಗರಾಜಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಭವಿಷ್ಯವಿದೆ ಎಂದರು.

ಪಕ್ಷದ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ಇದೇ ವೇದಿಕೆ ಮೂಲಕ ನಾನು ಸವಾಲು ಹಾಕುತ್ತೇನೆ. ಈಗ ಕಾಂಗ್ರೆಸ್ ಪಕ್ಷವು ಚುನಾವಣೆ ನಡೆಸಲಿ, ದಾವಣಗೆರೆ ಬಿಜೆಪಿ ಭದ್ರಕೋಟೆ ಎಂಬುದು ಮತ್ತೊಮ್ಮೆ ಸಾಬೀತುಪಡಿಸುತ್ತೇವೆ. ಇದೇ ಉತ್ತರ ಕ್ಷೇತ್ರದಲ್ಲಿ ಹಾಲಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಸುಮಾರು 50 ಸಾವಿರ ಮತಗಳ ಅಂತರದಲ್ಲಿ ಪರಾಭವಗೊಳಿಸುವುದರಲ್ಲಿ ಯಾವುದೇ ಸಂಶಯವೂ ಇಲ್ಲ ಎಂದು ತಿಳಿಸಿದರು.

ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಜನ್ಮದಿನ ಆಚರಿಸಿಕೊಂಡ ಲೋಕಿಕೆರೆ ನಾಗರಾಜ ಸನ್ಮಾನಿತರಾಗಿ ಮಾತನಾಡಿದರು. ಮಾಜಿ ಸಚಿವರಾದ ಎಸ್.ಎ.ರವೀಂದ್ರನಾಥ, ಎಂ.ಪಿ.ರೇಣುಕಾಚಾರ್ಯ, ವಿಪ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾಮಿ, ಮಾಜಿ ಶಾಸಕರಾದ ಮಾಡಾಳ ವಿರುಪಾಕ್ಷಪ್ಪ, ವೈ.ಸಂಪಂಗಿ, ಎಂ.ಬಸವರಾಜ ನಾಯ್ಕ, ಮಾಡಾಳ ಮಲ್ಲಿಕಾರ್ಜುನ, ಮಾಜಿ ಮೇಯರ್ ಬಿ.ಜಿ.ಅಜಯಕುಮಾರ, ಚಂದ್ರಶೇಖರ ಪೂಜಾರ, ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ ನಾಗಪ್ಪ, ಪಿ.ಸಿ.ಶ್ರೀನಿವಾಸ ಭಟ್, ಬಿ.ಎಂ.ಸತೀಶ ಕೊಳೇನಹಳ್ಳಿ, ಆಲೂರು ನಿಂಗರಾಜ, ದೂಡಾ ಮಾಜಿ ಅಧ್ಯಕ್ಷ ಕೆ.ಎಂ.ಸುರೇಶ, ಪುಷ್ಪಾ ನಾಗರಾಜ ಇತರರು ಇದ್ದರು.

ಇದೇ ವೇಳೆ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಸನ್ಮಾನಿಸಲಾಯಿತು.

PREV

Recommended Stories

ದಸರಾ ಉದ್ಘಾಟನೆಗೆ ಬಾನು : ಬಿಜೆಪಿ vs ಕಾಂಗ್ರೆಸ್ ಜಟಾಪಟಿ
ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ