ಕನ್ನಡಪ್ರಭ ವಾರ್ತೆ ಮೈಸೂರುಭಾರತವು ಯುವ ಸಮೂಹವೇ ಹೆಚ್ಚಾಗಿರುವ ದೇಶವಾದ್ದರಿಂದ ಮೊಬೈಲ್‌ಚಟಕ್ಕೆ ಬಲಿಯಾಗಬೇಡಿ, ನಿಮ್ಮಿಂದ ದೇಶಕ್ಕೆ ಸಾಕಷ್ಟು ಕೊಡುಗೆ ದೊರೆಯಬೇಕಿದೆ ಎಂದು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಆರ್. ಮಹದೇವ ತಿಳಿಸಿದರು.ನಗರದ ಯುವರಾಜ ಕಾಲೇಜಿನ ಅಮೃತ ಮಹೋತ್ಸವ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಗುರುವಾರ ನಡೆದ ಕನ್ನಡ ರಾಜ್ಯೋತ್ಸವ ಹಾಗೂ ಬುಕರ್ ಪ್ರಶಸ್ತಿ ವಿಜೇತ ಸಾಹಿತಿ ಬಾನುಮುಷ್ತಾಕ್ ಅವರ ''''''''ಎದೆಯ ಹಣತೆ'''''''' ಕೃತಿ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.ಯುವ ಜನಾಂಗ ಎಲ್ಲೋ ಒಂದು ಕಡೆ ದಿಕ್ಕು ತಪ್ಪುತ್ತಿದೆ. ತಾವೆಲ್ಲರೂ ಕೂಡ ಮೊಬೈಲ್ ಬಿಟ್ಟು ಪುಸ್ತಕ ಓದಿ ಎಂದು ಹೇಳುತ್ತೇವೆ. ಯುವ ಸಮೂಹವೇ ಹೆಚ್ಚಾಗಿರುವ ಈ ದೇಶದಲ್ಲಿ ಮೊಬೈಲ್ ಗೆ ಮಾರು ಹೊಗಿದ್ದಾರೆ. ಮೊಬೈಲ್ ಚಟಕ್ಕೆ ಬಲಿಯಾಗಬೇಡಿ. ನಿಮ್ಮಿಂದ ದೇಶಕ್ಕೆ ಸಾಕಷ್ಟು ಕೊಡುಗೆ ಸಿಗಬೇಕಿದೆ. ಜಪಾನ್‌ತಂತ್ರಜ್ಞಾನ ಕ್ಷೇತ್ರದಲ್ಲಿ ಜಗತ್ತಿನಲ್ಲಿಯೇ ಮುಂದಿದೆ ಎಂದರು.ಭಾಷಾವಾರು ಪ್ರಾಂತ್ಯಗಳ ರಚನೆ ವೇಳೆ ಕನ್ನಡ ನಾಡಿನ ಏಕೀಕರಣಕ್ಕೆ ಹಲವರ ತ್ಯಾಗವಿದೆ. ಮೈಸೂರಿನ ವಿದ್ಯಾರ್ಥಿ ರಾಮಸ್ವಾಮಿ ಕರ್ನಾಟಕ ಏಕೀಕರಣಕ್ಕಾಗಿ ತಮ್ಮ ಪ್ರಾಣವನ್ನೆ ತ್ಯಾಗ ಮಾಡಿದ್ದಾರೆ. ಕನ್ನಡ ರಾಜ್ಯೋತ್ಸವ ವೇಳೆ ಎಲ್ಲಾ ಮಹನೀಯರನ್ನು ಸ್ಮರಿಸಬೇಕು. ಕನ್ನಡ ಸಾಹಿತ್ಯ, ಪರಂಪರೆಯನ್ನು ಗೌರವಿಸಿ, ಬೇರೆಯವರಲ್ಲಿಯೂ ಕನ್ನಡದ ಮಹತ್ವ ತಿಳಿಸೋಣ ಎಂದು ಅವರು ಹೇಳಿದರು.ಬಳಿಕ ನಡೆದ ಬಾನು ಮುಷ್ತಾಕ್‌ಅವರು ಎದೆಯ ಹಣತೆ ಕೃತಿ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ''''''''ಎದೆಯ ಹಣತೆ-ಸ್ತ್ರೀ ಸಂವೇದನೆ'''''''' ಕುರಿತು ಮದ್ರಾಸ್ ವಿವಿ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ. ತಮಿಳ್ ಸೆಲ್ವಿ ಹಾಗೂ ''''''''ಎದೆಯ ಹಣತೆ-ಸಾಮಾಜಿಕ ಪ್ರಜ್ಞೆ'''''''' ಕುರಿತು ವಿಶ್ರಾಂತ ಪ್ರಾಧ್ಯಾಪಕ ಡಾ. ರಾಜಪ್ಪ ದಳವಾಯಿ ವಿಷಯ ಮಂಡಿಸಿದರು.ಕನ್ನಡ ರಾಜ್ಯೋತ್ಸವ ಅಂಗವಾಗಿ ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ವಿಶ್ರಾಂತ ಪ್ರಾಧ್ಯಾಪಕಿ ಪ್ರೊ. ವಿಜಯಕುಮಾರಿ ಎಸ್. ಕರಿಕಲ್ ಹಾಗೂ ಕನ್ನಡಪ್ರಭದ ಹಿರಿಯ ಛಾಯಾಗ್ರಾಹಕ ಅನುರಾಗ್ ಬಸವರಾಜ್ ಅವರನ್ನು ಸನ್ಮಾನಿಸಲಾಯಿತು. ಕೃತಿ ಬಿಡುಗಡೆ, ಪ್ರತಿಭಾ ಪುರಸ್ಕಾರಕನ್ನಡ ಸಹ ಪ್ರಾಧ್ಯಾಪಕಿ ಡಾ.ಎಂ.ಎಸ್. ವಸಂತ ಅವರ ''''''''ಮಹತಿ'''''''' ಕೃತಿಯನ್ನು ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ಬಿಡುಗಡೆಗೊಳಿಸಿದರು. ಇದೇ ವೇಳೆ ಕನ್ನಡ ವಿಷಯದಲ್ಲಿ ಹೆಚ್ಚು ಅಂಕಗಳಿಸಿದ 20 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕಿ ಪ್ರೊ.ಎನ್.ಕೆ. ಲೋಲಾಕ್ಷಿ ಮುಖ್ಯ ಭಾಷಣ ಮಾಡಿದರು. ಯುವರಾಜ ಕಾಲೇಜು ಪ್ರಾಂಶುಪಾಲ ಪ್ರೊ.ಎಸ್. ಮಹದೇವ ಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ವಿವಿ ಸಿಂಡಿಕೇಟ್ ಸದಸ್ಯರಾದ ಕ್ಯಾತನಹಳ್ಳಿ ನಾಗರಾಜು, ಡಾ.ಜೆ. ಶಿಲ್ಪಾ, ಯುವರಾಜ ಕಾಲೇಜು ಆಡಳಿತಾಧಿಕಾರಿ ಪ್ರೊ.ಕೆ. ಅಜಯ್ ಕುಮಾರ್, ಪರೀಕ್ಷಾ ನಿಯಂತ್ರಣಾಧಿಕಾರಿ ಪ್ರೊ.ಸಿ. ನಾಗೇಶ್ ಬಾಬು, ಸಂಯೋಜಕ ಪ್ರೊ.ಪಿ.ಕೆ. ಮಹೇಶ್ವರ, ಕನ್ನಡ ಪ್ರಾಧ್ಯಾಪಕ ಡಾ.ಸಿ.ಡಿ. ಪರಶುರಾಮ ಮೊದಲಾದವರು ಇದ್ದರು.