ಮಕ್ಕಳನ್ನು ತಪ್ಪದೇ ನಿತ್ಯ ಶಾಲೆಗೆ ಕಳಿಸಿ: ಮಧು ಬಂಗಾರಪ್ಪ

KannadaprabhaNewsNetwork |  
Published : Nov 26, 2024, 12:46 AM IST
ಶಿರಸಿ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯನ್ನು ಸಚಿವ ಮಧು ಬಂಗಾರಪ್ಪ ಉದ್ಘಾಟಿಸಿದರು. | Kannada Prabha

ಸಾರಾಂಶ

ಶಾಲೆಗೆ ಮಗು ಬಂದರೆ ಶಾಲೆಗೂ, ಇಲಾಖೆಗೂ, ಸರ್ಕಾರಕ್ಕೂ ಗೌರವ. ನಮ್ಮ ಮಕ್ಕಳು ದೇಶದ ಭವಿಷ್ಯ.

ಶಿರಸಿ: ಮಕ್ಕಳನ್ನು ಶಾಲೆಗೆ ಸೇರಿಸುವುದು ಮುಖ್ಯವಲ್ಲ. ಪಾಲಕರು ನಿತ್ಯ ಮಕ್ಕಳನ್ನು ಶಾಲೆಗೆ ಕಳಿಸುವುದು ಮುಖ್ಯ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಮನವಿ ಮಾಡಿದರು. ಶಿರಸಿಯಲ್ಲಿ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟಿಸಿ ಮಾತನಾಡಿ, ಒಂದು ದಿನ ಶಾಲೆಗೆ ಮಗು ರಜೆ ಮಾಡಿದರೆ ಮತ್ತೆ ಆ ದಿನ ಮಕ್ಕಳಿಗೆ ಸಿಗುವುದಿಲ್ಲ. ಶಾಲೆಯಲ್ಲಿ ಎಲ್ಲ ಮೂಲ ಸೌಲಭ್ಯ ನೀಡುತ್ತಿದ್ದೇವೆ. ಪಾಲಕರು ನೆಂಟರಿಷ್ಟರ ಮನೆಗೆ ಕರೆದೊಯ್ದರೆ ಆ ಮಗುವಿನ ಭವಿಷ್ಯಕ್ಕೆ ತೊಂದರೆ ಆಗುತ್ತದೆ ಎಂದರು.ಶಾಲೆಗೆ ಮಗು ಬಂದರೆ ಶಾಲೆಗೂ, ಇಲಾಖೆಗೂ, ಸರ್ಕಾರಕ್ಕೂ ಗೌರವ. ನಮ್ಮ ಮಕ್ಕಳು ದೇಶದ ಭವಿಷ್ಯ ಎಂದ ಮಧು, ಪ್ರತಿಭಾ ಕಾರಂಜಿಗೆ ಕೊಡುವ ಹಣ ಕಡಿಮೆ ಇದ್ದು, ಅದನ್ನು ಹೆಚ್ಚಿಸುವ ಕಾರ್ಯ ಮಾಡಲು ಚಿಂತಿಸಿದ್ದೇವೆ. ವಿಧಾನಸಭಾ ಕ್ಷೇತ್ರಕ್ಕೆ ತಕ್ಷಣ ಐದಾರು ಪಬ್ಲಿಕ್ ಶಾಲೆ ಕೊಡುವ ಕಾರ್ಯ ಮಾಡಲಿದ್ದೇವೆ. ಪಬ್ಲಿಕ್ ಶಾಲೆಯಲ್ಲಿ ಕ್ರೀಡೆ, ಕಲಾ ಶಿಕ್ಷಕರೂ ಸಿಗಲಿದ್ದಾರೆ ಎಂದರು.ಮಕ್ಕಳಲ್ಲಿ ಕೊರತೆ ಆಗುತ್ತಿರುವ ನೈತಿಕ ಮೌಲ್ಯ ವೃದ್ಧಿಗೆ ಮುಂದಿನ ಶೈಕ್ಷಣಿಕ ವರ್ಷದಿಂದ ಮಾನವೀಯ ಮೌಲ್ಯ, ನೈತಿಕ ಶಿಕ್ಷಣ ನೀಡುವ ತರಗತಿಯನ್ನೂ ವಾರಕ್ಕೊಮ್ಮೆ ನೀಡಲಿದ್ದೇವೆ. ಈ ಬಗ್ಗೆ ವೀರಪ್ಪ ಮೊಯ್ಲಿ ಅಧ್ಯಕ್ಷತೆಯಲ್ಲಿ ಈಗಾಗಲೇ ಸಮಾಲೋಚನೆ ಕೂಡ ಮಾಡಿದ್ದೇವೆ. ಮಕ್ಕಳೆಲ್ಲರಲ್ಲೂ ಪ್ರತಿಭೆ ಇದೆ. ಅವರಿಗೆ ಪ್ರೋತ್ಸಾಹ ನೀಡಿದರೆ ಯಾವ ಕ್ಷೇತ್ರದಲ್ಲೂ ಬೆಳೆಯಬಹುದು ಎಂದರು.ಇಡೀ ರಾಜ್ಯದಲ್ಲಿ ಶೇ. ೪೦ರಷ್ಟು ಸರ್ಕಾರಿ ನೌಕರರು ಶಿಕ್ಷಣ ಇಲಾಖೆಯಲ್ಲೇ ಇದ್ದಾರೆ. ಸರ್ಕಾರಿ ಅನುದಾನರಹಿತ, ಅನುದಾನಿತ ೧.೦೮ ಕೋಟಿ ಮಕ್ಕಳು ಓದುತ್ತಿದ್ದಾರೆ. ೫೭ ಲಕ್ಷ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾರೆ. ಜಾತಿ, ರಾಜಕೀಯ ಕಲ್ಮಶ ಹೋಗಲಾಡಿಸಲು ಮಕ್ಕಳಿಂದ ಮಾತ್ರ ಸಾಧ್ಯವಾಗುತ್ತದೆ ಎಂದರು.ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಿದರೆ ಮಾತ್ರ ನಮ್ಮ ಹಿರಿಯರು ಕಂಡ ಕನಸು ಸಾಕಾರವಾಗುತ್ತದೆ. ಮಕ್ಕಳ ಶಿಕ್ಷಣದ ಜತೆ ಕ್ರೀಡೆಯಲ್ಲೂ ಮಕ್ಕಳು ಹೆಚ್ಚು ಪಾಲ್ಗೊಳ್ಳುವಂತೆ ಮಾಡಬೇಕು. ಸರ್ಕಾರಿ ಶಾಲೆಗಳು ಉತ್ತಮ ಶಿಕ್ಷಣ ನೀಡುತ್ತಿವೆ. ಖಾಸಗಿ ಶಾಲೆಗಳಿಗಿಂತ ಉತ್ತಮ ಶಿಕ್ಷಣ ಇಲ್ಲಿದೆ. ಏಕೆ ಸಾವಿರಾರು ರು. ಖರ್ಚು ಮಾಡಿ ಖಾಸಗಿ ಶಾಲೆಗೆ ಕಳಿಸಬೇಕು? ಎಸ್‌ಎಸ್‌ಎಲ್‌ಸಿಯಲ್ಲಿ ಸರ್ಕಾರಿ ಶಾಲೆ ಫಲಿತಾಂಶವೇ ಉತ್ತಮವಾಗಿ ಬರುತ್ತಿವೆ ಎಂದರು.ಸಹಾಯಕ ಆಯುಕ್ತೆ ಕೆ.ವಿ. ಕಾವ್ಯಾರಾಣಿ, ಡಿಡಿಪಿಐ ಬಸವರಾಜ್ ಪಿ., ತಹಸೀಲ್ದಾರ್ ಶ್ರೀಧರ ಮುಂದಲಮನಿ ಮತ್ತಿತರರು ಇದ್ದರು. ಡಯಟ್ ಉಪನ್ಯಾಸಕ ನಾರಾಯಣ ಭಾಗವತ್ ನಿರ್ವಹಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ ನಾಯ್ಕ ಸ್ವಾಗತಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!