ರೈತರನ್ನು ಕೃಷಿ ಅಧ್ಯಯನ ಪ್ರವಾಸಕ್ಕೆ ಕಳುಹಿಸಿಕೊಡಿ

KannadaprabhaNewsNetwork |  
Published : Jul 24, 2025, 12:45 AM IST
ಪೊಟೋ ಜು.23ಎಂಡಿಎಲ್ 2ಎ, 2ಬಿ. ಮಾಜಿ ಸಚಿವ ಮುರಗೇಶ ನಿರಾಣಿ ಅವರ ಜೊತೆ ರೈತರ ಪೊಟೋ. | Kannada Prabha

ಸಾರಾಂಶ

ಬೆಳೆದ ಬೆಳೆಯನ್ನು ಎಲ್ಲರೊಂದಿಗೆ ಹಂಚಿಕೊಂಡು ಊಟ ಮಾಡುವುದು ನೇಗಿಲ ಯೋಗಿಯ ಧರ್ಮ

ಕನ್ನಡಪ್ರಭ ವಾರ್ತೆ ಮುಧೋಳ

ಕೃಷಿ ಅಧ್ಯಯನ ಪ್ರವಾಸವು ರೈತರಲ್ಲಿ ಉತ್ಸಾಹದೊಂದಿಗೆ ಹೊಸಹೊಸ ಪ್ರಯೋಗಗಳಿಗೆ ಸಜ್ಜುಗೊಳಿಸುತ್ತದೆ. ಆರ್ಥಿಕ ಬೆಳವಣಿಗೆಗೂ ಕಾರಣವಾಗುತ್ತದೆ. ಹಾಗಾಗೀ ಸರ್ಕಾರ, ಸಂಘ-ಸಂಸ್ಥೆಗಳು, ಕೃಷಿ ಆಧಾರಿತ ಉದ್ದಿಮೆಗಳು, ಬ್ಯಾಂಕ್‌ಗಳು ರೈತರನ್ನು ಬೇರೆ ಬೇರೆ ರಾಜ್ಯಗಳಿಗೆ, ದೇಶಗಳಿಗೆ ಕೃಷಿ ಅಧ್ಯಯನ ಪ್ರವಾಸಕ್ಕೆ ಕಳುಹಿಸಿಕೊಡಬೇಕು ಎಂದು ಮಾಜಿ ಸಚಿವ, ನಿರಾಣಿ ಸಮೂಹ ಸಂಸ್ಥೆಯ ಅಧ್ಯಕ್ಷ ಮುರುಗೇಶ ನಿರಾಣಿ ಹೇಳಿದರು.

ಮಹಾರಾಷ್ಟ್ರ ರಾಜ್ಯದಲ್ಲಿ 4 ದಿನಗಳ ಕೃಷಿ ಅಧ್ಯಯನ ಪ್ರವಾಸ ಮಾಡಿ ಮರಳಿ ಬಂದ ರೈತರನ್ನು ಸ್ವಾಗತಿಸಿ ಅವರು ಮಾತನಾಡಿದರು. ರೈತ ಮೊದಲು ಕೃಷಿ ವಿಜ್ಞಾನಿ ಎಂಬ ಮಾತಿದೆ. ಸೂಕ್ತ ಸಮಯಕ್ಕೆ ಉಳುಮೆ ಮಾಡುವ, ಉತ್ತಮ ಬೀಜಗಳನ್ನು ಕಾಯ್ದಿಡುವ, ಸಕಾಲಕ್ಕೆ ರಾಶಿ ಮಾಡುವ ವಿಧಾನಗಳನ್ನು ರೈತ ಪ್ರಯೋಗಶೀಲತೆಯಿಂದ ಕಲಿತುಕೊಂಡಿದ್ದಾನೆ. ಬೆಳೆದ ಬೆಳೆಯನ್ನು ಎಲ್ಲರೊಂದಿಗೆ ಹಂಚಿಕೊಂಡು ಊಟ ಮಾಡುವುದು ನೇಗಿಲ ಯೋಗಿಯ ಧರ್ಮವಾಗಿದೆ ಎಂದರು.

ನಿರಾಣಿ ಸಕ್ಕರೆ ಕಾರ್ಖಾನೆಯ ಪರವಾಗಿ 200 ರೈತರನ್ನು ಅಧ್ಯಯನಕ್ಕೆ ಕಳಿಸಿಕೊಡಲಾಗಿತ್ತು. ಮಹಾರಾಷ್ಟ್ರದ ಪಾಟಸ್ಕರ್ ಸಕ್ಕರೆ ಕಾರ್ಖಾನೆ, ಉರುಳಿಕಾಂಚನ ಕೃಷಿ ಕ್ಷೇತ್ರ, ಬಾರಾಮತಿಯ ಕೃಷಿ ವಿಜ್ಞಾನ ಕೇಂದ್ರ, ರಾಹುರಿ ಕೃಷಿ ವಿದ್ಯಾಪೀಠ ಹಾಗೂ ಜೈನ್ ಇರ್ರೀಗೇಷನ್ ಸಂಸ್ಥೆಗೆ ಭೇಟಿ ನೀಡಿ ಬಂದ ರೈತರು ತಮ್ಮ ಅನುಭವವನ್ನು ಉತ್ಸಾಹದಿಂದ ವಿವರಿಸಿದರು.

ಮಹಾರಾಷ್ಟ್ರ ರೈತರು ಪ್ರತಿ ಎಕರೆಗೆ 80 ರಿಂದ 100 ಟನ್ ಕಬ್ಬು ಬೆಳೆಯುವುದು ಸಾಮಾನ್ಯ. ಶ್ರದ್ಧೆ ಭಕ್ತಿಯಿಂದ ಅವರು ಕೃಷಿ ಕಾರ್ಯ ಮಾಡುತ್ತಿರುವುದು ಬಹಳ ಮೆಚ್ಚುಗೆಯಾಯಿತು. ನೀರು ಮಿತವಾಗಿ ಬಳಸುವ, ಭೂಮಿ ಸವಳು ಆಗದಂತೆ ಕಾಪಾಡಿಕೊಳ್ಳುವ ಬಗ್ಗೆ ಬಹಳ ಕಾಳಜಿ ವಹಿಸುತ್ತಾರೆ. ಈ ಪ್ರವಾಸ ನಮ್ಮಲ್ಲಿ ಬಹಳ ಉತ್ಸಾಹ ತುಂಬಿದೆ ಎಂದು ರೈತರು ವಿವರಿಸಿದರು. ಕಬ್ಬು ಮಂಡಳಿಯ ಮಾಜಿ ಸದಸ್ಯ ಸುಭಾಷ್ ಶಿರಬೂರ್, ದಾನಪ್ಪಗೋಳ, ಮಾಹಾದೇವ ಮುರನಾಳ, ಚೆನ್ನಪ್ಪ ಪುರಾಣಿಕ ಪ್ರವಾಸದ ಅನುಭವ ವಿವರಿಸಿದರು. ಸಂಗಮೇಶ ನಿರಾಣಿ, ಎನ್.ವಿ.ಪಡಿಹಾರ, ನ್ಯಾಯವಾದಿ ಆರ್.ಡಿ.ಹಳಿಂಗಳಿ ಇದ್ದರು.

ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳಿಗೆ ಭೇಟಿ ನೀಡಿದೆವು. ಅಲ್ಲಿ ಕಬ್ಬು ಸಾಗಿಸುವುದಕ್ಕೆ, ಕಟಾವಿಗೆ ಲಗಾನಿ ಕೊಡಬೇಕಾಗಿಲ್ಲ. ಕಬ್ಬು ನಾಟಿ ಮಾಡಿದ ದಿನಾಂಕ ಮತ್ತು ಸಮಯ ನೋಂದಣಿ ಮಾಡಲಾಗುತ್ತದೆ. ತಾರತಮ್ಯವಿಲ್ಲದೆ ಕಬ್ಬು ಸಾಗಾಣಿಕೆ ವ್ಯವಸ್ಥೆ ಮಾಡಲಾಗುತ್ತದೆ. ಕರ್ನಾಟಕದಲ್ಲಿ ಇದು ಜಾರಿಯಾಗಬೇಕು. ಸುಭಾಷ ಶಿರಬೂರ, ರೈತ ಮುಖಂಡ, ಕೃಷಿ ಅಧ್ಯಯನ ಪ್ರವಾಸಿಗ

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ