ಹಿರಿಯೂರು: ಹಿರಿಯ ನಾಗರಿಕರು ಅನುಭವಗಳ ಕಣಜಗಳಿದ್ದಂತೆ. ಅವರ ಮಾರ್ಗದರ್ಶನ, ಸಲಹೆ ಯುವ ಪೀಳಿಗೆಗೆ ಅತ್ಯುಪಯುಕ್ತವಾದುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಸುಜಾತಾ ಸುವರ್ಣ ಅಭಿಪ್ರಾಯಪಟ್ಟರು.
ಹಿರಿಯ ನಾಗರಿಕರನ್ನು, ಮಹಿಳೆಯರನ್ನು ಗೌರವದಿಂದ ಕಾಣಬೇಕಾದ್ದು ಎಲ್ಲರ ಕರ್ತವ್ಯವಾಗಬೇಕು. ಹೆಣ್ಣು ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಬೇಕು. ಪುರುಷ ಸಮಾನವಾಗಿ ಮಹಿಳೆಯರು ಬೆಳೆದಿದ್ದು, ಇಂದು ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲೂ ಹೆಣ್ಣು ತನ್ನ ಸಾಮರ್ಥ್ಯ ತೋರಿಸಿದ್ದಾಳೆ. ಹೆಣ್ಣು ಮಕ್ಕಳಿಗೆ ಸಾಕಷ್ಟು ಸೌಲಭ್ಯಗಳಿದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ವಕೀಲರ ಸಂಘದ ಅಧ್ಯಕ್ಷ ರಂಗೇನಹಳ್ಳಿ ರಾಮಚಂದ್ರಪ್ಪ ಮಾತನಾಡಿ, ಹಿರಿಯರನ್ನು ಗೌರವಿಸುವುದು ಪೂಜಿಸುವುದು ನಮ್ಮ ಸಂಸ್ಕೃತಿಯ ಒಂದು ಭಾಗವೇ ಆಗಿದೆ. ಈಗಲೂ ಸಹ ಹಿರಿಯರ ಪೂಜೆಗಳು ಚಾಲ್ತಿಯಲ್ಲಿವೆ. ಮಹಿಳೆಯರ ವಿಚಾರದಲ್ಲಿ ಇವತ್ತಿಗೂ ಕೆಲವು ಮೌಢ್ಯಾಚರಣೆಗಳು ಕೆಲವು ಕಡೆ ಚಾಲ್ತಿಯಲ್ಲಿವೆ. ಇಂತಹ ಅನಿಷ್ಟ ಪದ್ಧತಿಗಳನ್ನು ತೊಡೆದುಹಾಕಬೇಕಿದೆ ಎಂದರು.ಈ ಸಂದರ್ಭದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಶಿಲ್ಪಾ ತಿಮ್ಮಾಪುರ, ಅಪರ ಸಿವಿಲ್ ನ್ಯಾಯಾಧೀಶ ಎಚ್.ಡಿ.ಶ್ರೀಧರ್, ತಾಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಾಘವೇಂದ್ರ, ವಕೀಲರ ಸಂಘದ ಉಪಾಧ್ಯಕ್ಷೆ ಬೀನಾರಾಣಿ, ಪ್ರಧಾನ ಕಾರ್ಯದರ್ಶಿ ಚಿತ್ರಲಿಂಗಪ್ಪ, ಜಂಟಿ ಕಾರ್ಯದರ್ಶಿ ವೆಂಕಟೇಶ್ ಶಿಲ್ಪಿ ಹಾಗೂ ಆಶಾ ಕಾರ್ಯಕರ್ತೆಯರು ಹಾಜರಿದ್ದರು.