ಕನ್ನಡಪ್ರಭ ವಾರ್ತೆ ಮೈಸೂರು
ಲೇಖಕಿಯ ಸಹೋದರ ಡಾ. ಮಹೇಶ್ ರಾವ್ ನಿವಾಸದಲ್ಲಿ ಕುಟುಂಬ ಸದಸ್ಯರು, ಸಾಹಿತ್ಯ ಹಿತೈಷಿಗಳು ಭಾಗವಹಿಸಿದ್ದ ಆಪ್ತ ಕಾರ್ಯಕ್ರಮದಲ್ಲಿ ಹಿರಿಯ ವಿಮರ್ಶಕ ಪ್ರೊ.ಓ.ಎಲ್. ನಾಗಭೂಷಣ ಸ್ವಾಮಿ ಅವರು ''ದುಪಡಿಯನ್ನು ಓದುಗರಿಗೆ ಹೊದಿಸಿದರು.
ಆತ್ಮಕತೆಯ ಸ್ವರೂಪದಲ್ಲಿರುವ ಈ ಕೃತಿ ಹವ್ಯಕ ನುಡಿಗಟ್ಟನ್ನು ಬಳಸಿಕೊಂಡು ರಚಿತವಾಗಿರುವುದು ವಿಶೇಷ. ಇದು ಒಂದು ಸಮುದಾಯದ ಹೆಣ್ಣಿನ ಆತ್ಮಕತೆ. ಒಂದು ಮನೆಯ; ಒಂದು ಊರಿನ ಕತೆಯೂ ಹೌದು. ಕತೆ ಹೇಳುವ ಹೆಣ್ಣು ಮನಸ್ಸು ಒಂದು ಕಾಲಘಟ್ಟದ ನಾಡಿನ ಕತೆಯನ್ನು, ದೇಶದ ಕತೆಯನ್ನು ಹೇಳುತ್ತದೆ. ಆ ಮೂಲಕ ಇಡೀ ಸಂಸ್ಕೃತಿಯ ಆತ್ಮಕತೆಯಂತೆಯೂ ಕಾಣುತ್ತದೆ, ಎಂದು ವಿಶ್ಲೇಷಿಸಿದರು.ಕನ್ನಡದಲ್ಲಿ ಇತ್ತೀಚಿನ ವರ್ಷಗಳಲ್ಲಿ ಅರ್ಥಪೂರ್ಣವಾಗಿ ಬರೆಯುತ್ತಿರುವವರಲ್ಲಿ ಹೆಣ್ಣು ಮಕ್ಕಳೇ ಹೆಚ್ಚು. ದುಪಡಿ ಚಂದ್ರಮತಿ ಅವರೊಬ್ಬರ ಕತೆಯಲ್ಲ. ಅವರು ಬದುಕಿರುವ ಕಾಲಘಟ್ಟದ ಎಲ್ಲಾ ಹೆಣ್ಣುಮಕ್ಕಳು ಬರೆಯಬೇಕು ಅಂದುಕೊಂಡ ಕತೆ. ಹಲವು ವಿಷಯ,ವೈವಿಧ್ಯಗಳ ದಾಖಲೀಕರಣವೂ ಹೌದು, ಎಂದು ಶ್ಲಾಘಿಸಿದರು.
ವಿಜಯಪುರ ಮಹಿಳಾ ವಿವಿ ವಿಶ್ರಾಂತ ಕುಲಪತಿ ಪ್ರೊ. ಸಬಿಹಾ ಭೂಮಿಗೌಡ , ಮೈಸೂರು ವಿವಿ ಕನ್ನಡ ಅಧ್ಯಯನ ಸಂಸ್ಥೆ ಮಾಜಿ ನಿರ್ದೇಶಕಿ ಪ್ರೊ. ಪ್ರೀತಿ ಶುಭಚಂದ್ರ ಅವರು ಕಾದಂಬರಿಯ ಕುರಿತು ಮಾತನಾಡಿದರು.
ಡಾ. ರಾಮಕೃಷ್ಣ ಜೋಷಿ, ಡಾ. ಮಹೇಶ್ ರಾವ್, ಹಿರಿಯ ಪತ್ರಿಕೋದ್ಯಮಿ ಕೆ.ಬಿ. ಗಣಪತಿ ಅವರು ಮೊದಲ ಪ್ರತಿಗಳನ್ನು ಸ್ವೀಕರಿಸಿದರು. ವಿಜಯಾ ರಾವ್ ಸ್ವಾಗತಿಸಿದರು. ಅಲಕ ಕಟ್ಟೆಮನೆ ನಿರೂಪಿಸಿದರು.