ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್‌ ನಿಧನ

KannadaprabhaNewsNetwork |  
Published : Jan 29, 2026, 02:00 AM ISTUpdated : Jan 29, 2026, 05:16 AM IST
CPI leader Anantha Subba Rao passes away wife s health deteriorates

ಸಾರಾಂಶ

 ಅನಂತ ಸುಬ್ಬರಾವ್‌  ಹೃದಯಾಘಾತದಿಂದ  ವಿಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟದ್ದಾರೆ.   ಕಮ್ಯುನಿಸ್ಟ್‌ ನಾಯಕರೆಂದು ಗುರುತಿಸಿಕೊಂಡಿದ್ದ ಸುಬ್ಬರಾವ್‌, ಕೆಎಸ್‌ಆರ್‌ಟಿಸಿ ಸ್ಟಾಫ್ ಆ್ಯಂಡ್‌ ವರ್ಕರ್ಸ್‌ ಫೆಡರೇಷನ್‌ನ ಪ್ರಧಾನ ಕಾರ್ಯದರ್ಶಿಯಾಗಿ ಸಮಸ್ಯೆಗಳ ಕುರಿತು ಹೋರಾಟದಲ್ಲಿದ್ದರು

  ಬೆಂಗಳೂರು :  ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್‌ (85) ಅವರು ತೀವ್ರ ಹೃದಯಾಘಾತದಿಂದ ಬುಧವಾರ ಸಂಜೆ ವಿಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟದ್ದಾರೆ.

ರಾಷ್ಟ್ರಮಟ್ಟದಲ್ಲಿ ಕಮ್ಯುನಿಸ್ಟ್‌ ನಾಯಕರೆಂದು ಗುರುತಿಸಿಕೊಂಡಿದ್ದ ಅನಂತ ಸುಬ್ಬರಾವ್‌, ಕೆಎಸ್‌ಆರ್‌ಟಿಸಿ ಸ್ಟಾಫ್ ಆ್ಯಂಡ್‌ ವರ್ಕರ್ಸ್‌ ಫೆಡರೇಷನ್‌ನ ಪ್ರಧಾನ ಕಾರ್ಯದರ್ಶಿಯಾಗಿ ಸಾರಿಗೆ ನೌಕರರ ಸಮಸ್ಯೆಗಳ ಕುರಿತು ಹೋರಾಟದಲ್ಲಿ ತೊಡಗಿದ್ದರು. ವಯೋಸಹಜ ಕಾರಣಗಳಿಂದಾಗಿ ಕಳೆದ ಡಿಸೆಂಬರ್‌ 2025ರಲ್ಲಿ ಎಐಟಿಯುಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೂ, ಕೆಎಸ್ಸಾರ್ಟಿಸಿ ಸ್ಟಾಫ್ ಆ್ಯಂಡ್‌ ವರ್ಕರ್ಸ್‌ ಫೆಡರೇಷನ್‌ ಮತ್ತು ಕೆಎಸ್ಸಾರ್ಟಿಸಿ ಕಾರ್ಮಿಕರ ಜಂಟಿ ಕ್ರಿಯಾಸಮಿತಿಯ ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಕೆಎಸ್ಸಾರ್ಟಿಸಿ ಕಾರ್ಮಿಕರ ಜಂಟಿ ಕ್ರಿಯಾಸಮಿತಿ ಮೂಲಕ ಜ.29ರಂದು ಕೂಡ ಸಾರಿಗೆ ನೌಕರರ ಪ್ರತಿಭಟನೆಗೆ ಕರೆ ನೀಡಿದ್ದರು. ಬುಧವಾರ ಬೆಳಗ್ಗೆಯಿಂದ ಸಂಘಟನೆ ನಾಯಕರೊಂದಿಗೆ ಪ್ರತಿಭಟನೆ ಕುರಿತು ದೂರವಾಣಿ ಮೂಲಕವೇ ಸುಬ್ಬರಾವ್‌ ಚರ್ಚೆ ನಡೆಸಿದ್ದರು. ಅಲ್ಲದೆ, ಸಂಜೆ 5 ಗಂಟೆ ವೇಳೆಗೆ ಶೇಷಾದ್ರಿಪುರದಲ್ಲಿನ ಕೆಎಸ್ಸಾರ್ಟಿಸಿ ಸ್ಟಾಫ್ ಆ್ಯಂಡ್‌ ವರ್ಕರ್ಸ್‌ ಫೆಡರೇಷನ್‌ನ ಕಚೇರಿಗೆ ತೆರಳಲು ಸಿದ್ಧರಾಗುತ್ತಿದ್ದರು. ಈ ವೇಳೆ ಎದೆ ನೋವು ಕಾಣಿಸಿಕೊಂಡು, ಉಸಿರಾಟದ ಸಮಸ್ಯೆಯೂ ಉಂಟಾಗಿದೆ. ಕೂಡಲೇ ಮೊಮ್ಮಗಳು ಕುಟುಂಬದ ವೈದ್ಯರಿಗೆ ಕರೆ ಮಾಡಿದ್ದಾರೆ. ಅವರು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ.

ಚಿಕಿತ್ಸೆ ಫಲಕಾರಿಯಾಗದೆ ಮೃತ

ಅದರಂತೆ ವಿಜಯನಗರದ ಗ್ಲೋಬಲ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ತೀವ್ರ ಹೃದಯಾಘಾತದಿಂದ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.

ಸುಬ್ಬರಾವ್‌ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಅವರಲ್ಲಿ ಒಬ್ಬರು ವಿದೇಶದಲ್ಲಿದ್ದಾರೆ. ಇನ್ನೊಬ್ಬ ಮಗಳು ಜ್ಯೋತಿ ಅನಂತಸುಬ್ಬರಾವ್‌ ಕೂಡ ಸಾಮಾಜಿಕ ಹೋರಾಟಗಾರ್ತಿಯಾಗಿದ್ದು, ಎನ್‌ಎಫ್‌ಐಡಬ್ಲ್ಯು ರಾಜ್ಯಾಧ್ಯಕ್ಷರಾಗಿದ್ದಾರೆ ಹಾಗೂ ಅಳಿಯ ಸ್ವಾತಿ ಸುಂದರೇಶ್‌ ಕೂಡ ಕಮ್ಯುನಿಸ್ಟ್‌ ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಅನಂತ ಸುಬ್ಬರಾವ್‌ ಅವರ ಪಾರ್ಥಿವ ಶರೀರವನ್ನು ವಿಜಯನಗರದ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದ್ದು, ಗುರುವಾರ ಮಧ್ಯಾಹ್ನದವರೆಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ.-ಬಾಕ್ಸ್‌-

ಸಾರಿಗೆ ನೌಕರರ ಪ್ರತಿಭಟನೆ ಮುಂದೂಡಿಕೆ

ಸಾರಿಗೆ ನೌಕರರ ವೇತನ ಹೆಚ್ಚಳ ಮತ್ತು ವೇತನ ಹೆಚ್ಚಳ ಹಿಂಬಾಕಿ ಪಾವತಿಗೆ ಆಗ್ರಹಿಸಿ ಗುರುವಾರ ಸಾರಿಗೆ ನೌಕರರಿಂದ ಬೆಂಗಳೂರು ಚಲೋಗೆ ಕರೆ ನೀಡಲಾಗಿತ್ತು. ಅದಕ್ಕಾಗಿ ಕೆಎಸ್ಸಾರ್ಟಿಸಿ ಕಾರ್ಮಿಕರ ಜಂಟಿ ಕ್ರಿಯಾಸಮಿತಿಯಿಂದ ಎಲ್ಲ ರೀತಿಯ ಸಿದ್ಧತೆಗಳನ್ನೂ ಮಾಡಲಾಗಿತ್ತು. ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿ, ನಂತರ ಮುಂದಿನ ಹೋರಾಟದ ಘೋಷಣೆ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಹೋರಾಟದ ಹಿಂದಿನ ದಿನ ಅನಂತ ಸುಬ್ಬರಾವ್‌ ಅವರು ನಿಧನರಾಗಿರುವ ಕಾರಣದಿಂದಾಗಿ ಬೆಂಗಳೂರು ಚಲೋ ಹೋರಾಟವನ್ನು ಮುಂದೂಡಲು ಇತರ ನಾಯಕರು ನಿರ್ಧರಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಸರ್ಕಾರಿ ಅಧಿಕಾರಿ, ನೌಕರರಿಗೆ ಖಾದಿ ದಿರಿಸು ಕಡ್ಡಾಯ ?
4 ದಿನದಲ್ಲಿ 37 ಜನರಿಗೆ ನಾಯಿ ಕಡಿತ, ಬಾಲಕಿ ಗಂಭೀರ - 4 ನಗರಗಳಲ್ಲಿ ಬೀದಿ ನಾಯಿ, ಹುಚ್ಚು ನಾಯಿ ಕಡಿತ