ಕನ್ನಡಪ್ರಭ ವಾರ್ತೆ ಅಥಣಿ
ಅಥಣಿ ವಕೀಲರ ಸಂಘದ ಹಿರಿಯ ಸದಸ್ಯ, ಮುಖಂಡ ಸುಭಾಷ ಪಾಟಣಕರ ಎರಡು ದಿನಗಳಿಂದ ಕಾಣೆಯಾಗಿದ್ದು, ದೂರು ನೀಡಿದರೂ ಪತ್ತೆಗೆ ಪೊಲೀಸರು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪಿಸಿ ಅಥಣಿ ವಕೀಲರ ಸಂಘದ ಸದಸ್ಯರು ಗುರುವಾರ ಕೋರ್ಟ್ ಕಲಾಪದಿಂದ ದೂರ ಉಳಿದು ಪಾದಯಾತ್ರೆ ಮೂಲಕ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿಯತ್ತ ತೆರಳಿ ರಸ್ತೆ ತಡೆ ನಡೆಸಿದ ವಕೀಲರು ಶೀಘ್ರ ಕಾರ್ಯಾಚರಣೆ ನಡೆಸಿ ನಾಪತ್ತೆಯಾಗಿರುವ ವಕೀಲರ ಪತ್ತೆ ಹಚ್ಚಬೇಕು. ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳು ತ್ವರಿತ ಕಾರ್ಯಾಚರಣೆಗೆ ಸಿಬ್ಬಂದಿ ನೇಮಿಸಬೇಕೆಂದು ಒತ್ತಾಯಿಸಿದರು.
ಅಥಣಿ ವಕೀಲರ ಸಂಘದ ಅಧ್ಯಕ್ಷ ನಿಂಗಪ್ಪ ಕೊಖಲೆ ಮಾತನಾಡಿ, ಸಂಘದ ಹಿರಿಯ ವಕೀಲ ಸುಭಾಷ ಪಠಾಣಕರ ಎರಡು ದಿನಗಳ ಹಿಂದೆ ಅನುಮಾನಾಸ್ಪದವಾಗಿ ಕಾಣೆಯಾಗಿದ್ದಾರೆ. ಅವರನ್ನು ಅಪಹರಿಸಿದ್ದಾರೋ ಅಥವಾ ಕೃಷ್ಣಾ ನದಿಯಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೋ ಅಥವಾ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೋ ಇತ್ಯಾದಿ ಸಂದೇಹಗಳು ಕಾಡುತ್ತಿವೆ. ತ್ವರಿತಗತಿಯಲ್ಲಿ ಕಾರ್ಯಾಚರಣೆ ನಡೆಸಿ ಪತ್ತೆ ಹಚ್ಚಬೇಕಾದ ಪೊಲೀಸರು ನಿರ್ಲಕ್ಷ್ಯ ತೋರುತ್ತಿದ್ದಾರೆ. ಪೊಲೀಸ್ ಸಿಬ್ಬಂದಿ ಮತ್ತು ಅಗ್ನಿಶಾಮಕ ದಳದಿಂದ ನದಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದು, ಎನ್‌ಡಿಆರ್‌ಎಫ್ ತಂಡದಿಂದ ಶೋಧ ಕಾರ್ಯ ನಡೆಸಬೇಕು. ಪತ್ತೆ ಕಾರ್ಯ ಚುರುಕುಗೊಳಿಸಿ ಶೀಘ್ರ ಪತ್ತೆಗೆ ಕಾರ್ಯಾಚರಣೆ ನಡೆಸಬೇಕು. ಇಲ್ಲದಿದ್ದರೆ ತೀವ್ರ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಹಿರಿಯ ವಕೀಲರಾದ ಕಲ್ಲಪ್ಪ ವಣಜೋಳ, ಎ.ಎಂ. ಕೊಬ್ಬರಿ, ಬಾವಸಾಹೇಬ ಕಾಂಬಳೆ, ಮಟ್ಟೆಪ್ಪನವರ ಮಾತನಾಡಿ. ನಾಪತ್ತೆಯಾಗಿರುವ ವಕೀಲರನ್ನು ಶೀಗ್ರ ಪತ್ತೆ ಹಚ್ಚುವಂತೆ ಪೊಲೀಸ್ ಅಧಿಕಾರಿ ಮತ್ತು ಜಿಲ್ಲಾಡಳಿತಕ್ಕೆ ಒತ್ತಾಯಿಸಿದರು.
ಮಿತೇಶ ಪಟ್ಟಣ, ಬಸವರಾಜ ಡಂಗಿ, ವಿನಯಗೌಡ ಪಾಟೀಲ, ಶಶಿಕಾಂತ ಬಾಡಗಿ, ಸದಾ ಕಾಂಬಳೆ, ರಾಮ ಮರಳೆಕರ, ಸುನಿಲ ಶಂಕ, ಎಲ್.ಡಿ. ಹಳಿಂಗಳಿ, ಎ.ಎಚ್. ಅವಟಿ, ಎಸ್.ಪಿ. ನಾಯಕ, ಶಾರದಾ ಕೊತರಮಠ, ಗೀತಾ ಕಾಂಬಳೆ ಸೇರಿದಂತೆ ನೂರಾರು ವಕೀಲರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ಅಥಣಿ ವಕೀಲರ ಸಂಘದ ಹಿರಿಯ ಸದಸ್ಯ ಹಾಗೂ ಮುಖಂಡ ಸುಭಾಷ ಪಾಟಣಕರ ಎರಡು ದಿನಗಳಿಂದ ಕಾಣೆಯಾಗಿದ್ದು, ಅವರ ಬೈಕ್ ಮತ್ತು ಮೊಬೈಲ್ ತಾಲೂಕಿನ ಹಲ್ಯಾಳ ಗ್ರಾಮದ ಕೃಷ್ಣಾ ನದಿ ಸೇತುವೆ ಹತ್ತಿರ ಪತ್ತೆಯಾಗಿವೆ. ಈ ಬಗ್ಗೆ ಅವರ ಸಂಬಂಧಿಕರು ಐಗಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.