ಕನ್ನಡಪ್ರಭ ವಾರ್ತೆ ಟಿ. ನರಸೀಪುರ
ವಿದ್ಯಾರ್ಥಿಗಳ ಮಾನಸಿಕ, ಶೈಕ್ಷಣಿಕ ಮತ್ತು ಕ್ರೀಡಾತ್ಮಕ ಏಳಿಗೆ ಸೇರಿದಂತೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಶಿಕ್ಷಕರ ಹೊಣೆಗಾರಿಕೆಯಾಗಿದೆ ಎಂದು ಜಿಲ್ಲಾ ಉಪಯೋಜನಾ ಸಮನ್ವಯಧಿಕಾರಿ ಜಿ. ಶೋಭಾ ಹೇಳಿದರು.ತಾಲೂಕಿನ ಹಳೇ ಕೆಂಪಯ್ಯಹುಂಡಿ ಗ್ರಾಮದ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ 2024-25ನೇ ಸಾಲಿನ ಕಸಬಾ ಹೋಬಳಿ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲ ಮಕ್ಕಳಲ್ಲೂ ವೈವಿಧ್ಯಮಯ ಪ್ರತಿಭೆ ಅಡಗಿರುತ್ತದೆ. ಅದನ್ನು ಗುರುತಿಸಿ ಪೋಷಣೆ ಮಾಡಬೇಕಿರುವುದು ಶಿಕ್ಷಕರ ಹೊಣೆ. ಅಲ್ಲದೆ ಮಕ್ಕಳನ್ನು ಬಹುಮುಖ ಪ್ರತಿಭೆಯಾಗಿ ರೂಪಿಸಲು ಪೋಷಕರ ಜವಾಬ್ದಾರಿಯೂ ಕೂಡ ಅತ್ಯಂತ ಮುಖ್ಯ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಶಿವಮೂರ್ತಿ ಮಾತನಾಡಿ, ಕ್ರೀಡಾಕೂಟಗಳ ಮುಖೇನ ಮಕ್ಕಳನ್ನು ಉತ್ತಮವಾಗಿ ತರಬೇತಿಗೊಳಿಸಿ ತಾಲೂಕು, ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸ್ಪರ್ಧಿಸುವಂತೆ ಸ್ಪೂರ್ತಿ ತುಂಬಬೇಕು. ಕ್ರೀಡೆಗಳು ವಿದ್ಯಾರ್ಥಿಗಳನ್ನು ದೈಹಿಕ ಮತ್ತು ಮಾನಸಿಕವಾಗಿ ಸದೃಢಗೊಳ್ಳಲು ಸಹಕಾರಿಯಾಗುತ್ತವೆ. ಅಲ್ಲದೆ ಕ್ರೀಡೆಯಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವೂ ಇದೆ. ಹಾಗಾಗಿ ವಿದ್ಯಾರ್ಥಿಗಳು ಕ್ರೀಡೆಯನ್ನು ದೈನಂದಿನ ಕ್ರಿಯೆಯಾಗಿ ರೂಢಿಸಿಕೊಳ್ಳಬೇಕು ಎಂದರು.
ವಿವಿಧ ಶಾಲಾ ವಿದ್ಯಾರ್ಥಿಗಳು ಒಟ್ಟಿಗೆ ಸೇರಿ ಪಥ ಸಂಚಲನ ನೆಡೆಸಿದರು. ಗಣ್ಯರು ಗೌರವ ವಂದನೆ ಸ್ವೀಕರಿಸಿದರು. ಬಿಇಒ ಶಿವಮೂರ್ತಿ ಕ್ರೀಡಾಕೂಟದ ಧ್ವಜಾರೋಣ ಮಾಡಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ತಮ್ಮ ಹಕ್ಕುಗಳ ಈಡೇರಿಕೆಗೆ ದೈಹಿಕ ಶಿಕ್ಷಕರು ಕಪ್ಪುಪಟ್ಟಿ ಧರಿಸಿ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.ಕಿರಗಸೂರು ಗ್ರಾಪಂ ಅಧ್ಯಕ್ಷೆ ಚಂದ್ರಮ್ಮ, ಬಿಆರ್.ಸಿ ನಾಗೇಶ್, ದೈಹಿಕ ಪರಿವೀಕ್ಷಕ ಮರಿಸ್ವಾಮಿ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ. ವಿ. ಶಿವಶಂಕರಮೂರ್ತಿ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ರಾಜೇಂದ್ರ ಪ್ರಸಾದ್, ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಸುಬ್ರಮಣ್ಯ, ಮುಖ್ಯಶಿಕ್ಷಕ ಸಿದ್ದರಾಜು, ಗ್ರಾಪಂ ಸದಸ್ಯ ಮಹೇಶ್, ಎಸ್. ಡಿ. ಎಂ.ಸಿ ಅಧ್ಯಕ್ಷ ಮಹದೇವ್, ಸದಸ್ಯ ಮುರುಳಿ, ಸಿ.ಆರ್.ಪಿಗಳಾದ ಶ್ರೀಧರ್, ನವೀನ್, ರೇಖಾ, ಕಲಾವತಿ, ಸುನಿಲ್, ಪಂಕಜ ಚಕ್ರವರ್ತಿ, ಮಂಜುಳಾಬಾಯಿ ಇದ್ದರು.