ಹಿರಿಯರು ದೈಹಿಕ, ಮಾನಸಿಕ ಆರೋಗ್ಯಕ್ಕೆ ಒತ್ತು ಕೊಡಿ

KannadaprabhaNewsNetwork |  
Published : May 13, 2026, 12:30 AM IST
12ಕೆಡಿವಿಜಿ5, 6-ದಾವಣಗೆರೆ ತಾ. ದೊಡ್ಡ ಬಾತಿ ತಪೋವನದಲ್ಲಿ ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ ಆಸರೆ ಯೋಜನೆ ಉದ್ಘಾಟಿಸಿದ ಡಾ.ಎಸ್.ಆರ್.ಹೆಗಡೆ. ಎಸ್ಪಿ ಡಾ.ಎಚ್.ಟಿ. ಶೇಖರ್, ತಪೋವನ ಮುಖ್ಯಸ್ಥ ಡಾ.ಶಶಿಕುಮಾರ ಮೆಹರವಾಡೆ, ಹಿರಿಯ ನಾಗರೀಕರು ಇದ್ದರು. ...................12ಕೆಡಿವಿಜಿ7-ದಾವಣಗೆರೆ ತಾ. ದೊಡ್ಡ ಬಾತಿ ತಪೋವನದಲ್ಲಿ ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ ಆಸರೆ ಯೋಜನೆ ಉದ್ಘಾಟನಾ ಸಮಾರಂಭದಲ್ಲಿ ತಪೋವನದ ಹಿರಿಯ ನಾಗರೀಕರು. | Kannada Prabha

ಸಾರಾಂಶ

ಹಿರಿಯ ನಾಗರೀಕರು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ನಿತ್ಯವೂ ದೈಹಿಕ ಚಟುವಟಿಕೆಗಳಲಲಿ ತೊಡಗಿಕೊಳ್ಳುವ ಮೂಲಕ ತಮ್ಮ ದೈಹಿಕ, ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಹಿರಿಯ ರೇಡಿಯಾಲಾಜಿಸ್ಟ್‌ ಡಾ. ಎಸ್.ಆರ್. ಹೆಗಡೆ ಹೇಳಿದ್ದಾರೆ.

- ಆಸರೆ ಯೋಜನೆ ಉದ್ಘಾಟಿಸಿ ಡಾ.ಎಸ್.ಆರ್‌.ಹೆಗಡೆ । ದೊಡ್ಡಬಾತಿ ತಪೋವನದಲ್ಲಿ ಪೊಲೀಸ್ ಇಲಾಖೆಯಿಂದ ಕಾರ್ಯಕ್ರಮ- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಹಿರಿಯ ನಾಗರೀಕರು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ನಿತ್ಯವೂ ದೈಹಿಕ ಚಟುವಟಿಕೆಗಳಲಲಿ ತೊಡಗಿಕೊಳ್ಳುವ ಮೂಲಕ ತಮ್ಮ ದೈಹಿಕ, ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಹಿರಿಯ ರೇಡಿಯಾಲಾಜಿಸ್ಟ್‌ ಡಾ. ಎಸ್.ಆರ್. ಹೆಗಡೆ ಹೇಳಿದ್ದಾರೆ.

ತಾಲೂಕಿನ ದೊಡ್ಡಬಾತಿ ಗ್ರಾಮದ ತಪೋವನ ಆಯುರ್ವೇದ ಆಸ್ಪತ್ರೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ ಹಿರಿಯ ನಾಗರೀಕರ ಆಸರೆ ಯೋಜನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವಯೋಸಹಜವಾಗಿ ಕಾಣಿಸಿಕೊಳ್ಳುವ ದೈಹಿಕ ಸಮಸ್ಯೆಗಳಿಗಿಂತಲೂ ಮರೆವು ಅತ್ಯಂತ ಅಪಾಯಕಾರಿ, ಗಂಭೀರ ಸಮಸ್ಯೆಯಾಗಿದೆ ಎಂದರು.

ಮಂಡಿ, ಸೊಂಟ ನೋವು, ಕಣ್ಣು ಕಾಣದಿರುವುದು, ಕಿವಿ ಕೇಳಿಸದಂತಹ ಸಮಸ್ಯೆಗಳು ವಯಸ್ಸಾದವರಲ್ಲಿ ಸಾಮಾನ್ಯ. ಆದರೆ, ಬುದ್ಧಿಮಾಂದ್ಯತೆ ಮತ್ತು ಮರೆವು ಮನುಷ್ಯನ ದೈನಂದಿನ ಬದುಕನ್ನೇ ದುಸ್ತರವಾಗಿಸುತ್ತದೆ. ನಮ್ಮ ದೇಶದಲ್ಲಿ ಈ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವುದು ಕಳವಳಕಾರಿ ಸಂಗತಿ ಎಂದು ತಿಳಿಸಿದರು.

ಮರೆವಿನ ಸಮಸ್ಯೆಯಿಂದ ಬಳಲುವವರು ತಮ್ಮ ಸ್ವಂತ ಮಕ್ಕಳು, ಪತ್ನಿ ಅಥವಾ ಆಪ್ತರನ್ನೇ ಗುರುತಿಸಲಾಗದ ಸ್ಥಿತಿ ತಲುಪುತ್ತಾರೆ. ಬೆಳಗ್ಗೆ ಉಪಾಹಾರ ಸೇವಿಸಿದ ಹತ್ತೇ ನಿಮಿಷಕ್ಕೆ ತಾವು ತಿಂಡಿಯನ್ನೇ ತಿಂದಿಲ್ಲವೆಂದು ವಾದಿಸುವಂತಹ ಅನೇಕ ಪ್ರಕರಣಗಳನ್ನು ನನ್ನ ವೃತ್ತಿ ಜೀವನದಲ್ಲಿ ಕಂಡಿದ್ದೇನೆ, ಕೇಳಿದ್ದೇನೆ. ಅಂತಹ ಹಿರಿಯ ಜೀವಗಳಿಗೆ ಕುಟುಂಬದವರು, ಸಮಾಜವು ಪ್ರೀತಿಯಿಂದ ಸ್ಪಂದಿಸಬೇಕು ಎಂದು ಹೇಳಿದರು.

ನೆನಪಿನ ಶಕ್ತಿ ಇರಲಿ, ಬಿಡಲಿ ನಿತ್ಯವೂ ಅಲ್ಪಪ್ರಮಾಣದ ವ್ಯಾಯಾಮ ಅಥವಾ ಓಡಾಟ ಮಾಡುವುದರಿಂದ ದೇಹ, ಮನಸ್ಸು ಸದಾ ಲವಲವಿಕೆಯಿಂದ ಇರುತ್ತದೆ. ಪ್ರಸ್ತುತ ದಿನಗಳಲ್ಲಿ ವೃದ್ಧಾಶ್ರಮಗಳು ಅನಿವಾರ್ಯ ಎನ್ನುವಂತಾಗುತ್ತಿದೆ. ವಿದೇಶದಲ್ಲಿದ್ದ ಇಂತಹ ಸಂಸ್ಕೃತಿ ನಮ್ಮಲ್ಲೂ ಬೇರೂರುತ್ತಿದೆ. ಭಾರತದಂತಹ ದೇಶಗಳಲ್ಲಿ ಸಂಪನ್ಮೂಲಗಳ ಕೊರತೆಯಿಂದ ವೃದ್ಧಾಶ್ರಮಗಳು ಆರ್ಥಿಕವಾಗಿ ಸ್ವಾವಲಂಬಿಯಾಗಲು ಕೆಲವೊಮ್ಮೆ ವ್ಯಾಪಾರಿ ಮನೋಭಾವ ತಳೆಯಬೇಕಾಗುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು.

ಅನೇಕ ದೇಶಗಳಲ್ಲಿ ಅಲ್ಲಿನ ಸರ್ಕಾರಗಳೇ ಹಿರಿಯ ನಾಗರೀಕರಿಗೆ ಸಬ್ಸಿಡಿ ದರದಲ್ಲಿ ಮನೆ ಮತ್ತು ಊಟದ ವ್ಯವಸ್ಥೆ ಮಾಡುತ್ತಿರುವುದು ನಿಜಕ್ಕೂ ಅನುಕರಣೀಯ. ಇದೀಗ ಪೊಲೀಸ್ ಇಲಾಖೆಯಿಂದ ಜಾರಿಗೊಳಿಸಿರುವ ವಿನೂತನ ಆಸರೆ ಯೋಜನೆ ಹಿರಿಯ ನಾಗರೀಕರಿಗೆ ನೆರವಾಗಲಿ. ವೃದ್ಧಾಪ್ಯದಲ್ಲಿ ಜೀವನದ ಬಗ್ಗೆ ಭರವಸೆಯನ್ನೇ ಕಳೆದುಕೊಂಡ ಹಿರಿಯ ಜೀವಗಳಲ್ಲಿ ಬದುಕಿನ ಭರವಸೆ ಮೂಡಿಸಲು ಆಸರೆ ಯೋಜನೆ ಆಸರೆಯಾಗಲಿ ಎಂದು ಡಾ. ಎಸ್.ಆರ್‌.ಹೆಗಡೆ ಹಾರೈಸಿದರು.

ತಪೋವನ ಸಂಸ್ಥೆ ಮುಖ್ಯಸ್ಥ ಡಾ.ಶಶಿಕುಮಾರ ಮೆಹರವಾಡೆ ಮಾತನಾಡಿ, ಜೀವನದಲ್ಲಿ ಪ್ರತಿದಿನ, ಪ್ರತಿ ಕ್ಷಣವೂ ಚಟುವಟಿಕೆಯಿಂದ, ಸಂತೋಷದಿಂದ ಇರಬೇಕು. ಆಹಾರದ ಬಗ್ಗೆ ಅತಿಯಾದ ಆತಂಕ ಬೇಡ. ಪೌಷ್ಟಿಕ ಆಹಾರ ಸೇವನೆ, ನಿಯಮಿತ ವ್ಯಾಯಾಮ, ದೈಹಿಕ ಚಟುವಟಿಕೆಗಳಾದ ನಡಿಗೆ, ಚಪ್ಪಾಳೆ ತಟ್ಟುವುದು, ಧೀರ್ಘವಾಗಿ ಉಸಿರಾಡುವುದರ ಮೂಲಕ ಆರೋಗ್ಯ ಕಾಪಾಡಿಕೊಳ್ಳುವತ್ತ ಗಮನಹರಿಸಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಚ್.ಟಿ. ಶೇಖರ್ ಮಾತನಾಡಿ, ಹಿಂದೆಲ್ಲಾ ಅವಿಭಕ್ತ ಕುಟುಂಬಗಳು ಎಲ್ಲೆಡೆ ಇದ್ದವು. ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರು, ಅತ್ತಿಗೆ, ಭಾವ, ಅಜ್ಜ, ಅಜ್ಜಿ ಹೀಗೆ ತುಂಬು ಕುಟುಂಬದಲ್ಲಿ ಎಲ್ಲರೂ ಒಂದಾಗಿ ಬಾಳುತ್ತಿದ್ದರು. ಆದರೆ, 1991ರ ಜಾಗತೀಕರಣ, ನಗರೀಕರಣದ ನಂತರ ಉದ್ಯೋಗ ಮತ್ತು ಶಿಕ್ಷಣದ ಅನ್ವೇಷಣೆಯಲ್ಲಿ ಜನರು ವಲಸೆ ಹೋಗಲಾರಂಭಿಸಿದ್ದರಿಂದ ಅವಿಭಕ್ತ ಕುಟುಂಬಗಳು ಕಣ್ಮರೆಯಾಗಿ, ವಿಭಕ್ತ ಕುಟುಂಬಗಳಾಗಿ ಬದಲಾಗುತ್ತಿವೆ. ಈಗ ತಂದೆ, ತಾಯಿ, ಒಬ್ಬ ಮಗ ಅಥವಾ ಮಗಳೋ ಎಂಬುದಕ್ಕಷ್ಟೇ ವಿಭಕ್ತ ಕುಟುಂಬ ಸೀಮಿತ ಆಗುತ್ತಿರುವುದು ಆತಂಕದ ಸಂಗತಿ ಎಂದರು.

ಪೊಲೀಸ್ ಉಪಾಧೀಕ್ಷಕರಾದ ರುದ್ರಪ್ಪ ಉಜ್ಜಿನಕೊಪ್ಪ, ಬಿ.ಶರಣ ಬಸವೇಶ್ವರ, ಗಾಯತ್ರಿ, ಸಗರಿ, ಇನ್‌ಸ್ಪೆಕ್ಟರ್ ಎಸ್.ಆರ್.ದೇಸಾಯಿ, ಪೊಲೀಸ್ ಅಧಿಕಾರಿ, ಸಿಬ್ಬಂದಿ, ಹಿರಿಯ ನಾಗರೀಕರು, ತಪೋವನದ ಸಿಬ್ಬಂದಿ ಇದ್ದರು.

- - -

(ಬಾಕ್ಸ್‌)

* ಹೆತ್ತವರು ಕುಟುಂಬದ ಬೇರು, ಮರೆಯದಿರಿ

- ಆರ್ಥಿಕ ಪ್ರಗತಿಗೆ ಕೆಲಸ ಅರಸಿ ಹೋಗುವುದು ತಪ್ಪಲ್ಲ: ಎಸ್ಪಿ ಶೇಖರ್ ಕನ್ನಡಪ್ರಭ ವಾರ್ತೆ ದಾವಣಗೆರೆ ಸಮಾಜದ ಆರ್ಥಿಕ ಪ್ರಗತಿಗಾಗಿ ಜನರು ಕೆಲಸ ಅರಸಿ ಹೋಗುವುದು ತಪ್ಪಲ್ಲ. ಆದರೆ, ಇಂತಹ ಓಟದಲ್ಲಿ ನಮ್ಮ ಕುಟುಂಬದ ಬೇರುಗಳನ್ನು, ನಮಗೆ ಜನ್ಮ ನೀಡಿದ ತಂದೆ- ತಾಯಿಯನ್ನು ಮರೆಯುತ್ತಿರುವುದು ಅತ್ಯಂತ ನೋವಿನ ಸಂಗತಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಚ್.ಟಿ.ಶೇಖರ್ ವಿಷಾದಿಸಿದರು.

ತಾಲೂಕಿನ ದೊಡ್ಡಬಾತಿ ಗ್ರಾಮದ ತಪೋವನ ಆಯುರ್ವೇದ ಆಸ್ಪತ್ರೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ ಹಿರಿಯ ನಾಗರೀಕರ ಆಸರೆ ಯೋಜನೆ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 2011ರ ಅಂಕಿಅಂಶಗಳ ಪ್ರಕಾರ ನಮ್ಮ ದೇಶದಲ್ಲಿ ಶೇ.8.6ರಷ್ಟು ಮಾತ್ರ 60 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿದ್ದರೆ, ಶೇ.27.5ರಷ್ಟು 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವ ಜನರಿದ್ದಾರೆ ಎಂದರು.

- - -

-12ಕೆಡಿವಿಜಿ5, 6: ದಾವಣಗೆರೆ ತಾ. ದೊಡ್ಡ ಬಾತಿ ತಪೋವನದಲ್ಲಿ ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ ಆಸರೆ ಯೋಜನೆಯನ್ನು ಡಾ. ಎಸ್.ಆರ್.ಹೆಗಡೆ ಉದ್ಘಾಟಿಸಿದರು. ಜಿಲ್ಲಾ ಎಸ್‌ಪಿ ಡಾ. ಎಚ್.ಟಿ. ಶೇಖರ್, ತಪೋವನ ಮುಖ್ಯಸ್ಥ ಡಾ.ಶಶಿಕುಮಾರ ಮೆಹರವಾಡೆ, ಹಿರಿಯ ನಾಗರೀಕರು ಇದ್ದರು.

-12ಕೆಡಿವಿಜಿ7: ದಾವಣಗೆರೆ ತಾ. ದೊಡ್ಡ ಬಾತಿ ತಪೋವನದಲ್ಲಿ ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ ಆಸರೆ ಯೋಜನೆ ಉದ್ಘಾಟನಾ ಸಮಾರಂಭದಲ್ಲಿ ತಪೋವನದ ಹಿರಿಯ ನಾಗರೀಕರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಬಲೀಕರಣ ಹೆಸರಲ್ಲಿ ಕೇಂದ್ರ ಬಿಜೆಪಿ ಮಹಿಳೆಗೆ ಮೋಸ: ಸೈಯ್ಯದ್ ಹನೀಫ್
ಮಕ್ಕಳ ಮಾನಸಿಕ ವಿಕಸನಕ್ಕೆ ಬೇಸಿಗೆ ಶಿಬಿರಗಳು ಅವಶ್ಯ