ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಆಗ್ನೇಯ ಪದವೀಧರ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವ ಮೂಲಕ ರಾಜ್ಯ ಸರ್ಕಾರಕ್ಕೆ ಗುರುಗಳು ಮೆಚ್ಚುಗೆ ಮುದ್ರೆ ಒತ್ತಿದ್ದಾರೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಅಭಿಪ್ರಾಯಪಟ್ಟಿದ್ದಾರೆ.ಫಲಿತಾಂಶ ಪ್ರಕಟಗೊಂಡ ನಂತರ ಪತ್ರಿಕಾ ಹೇಳಿಕೆ ನೀಡಿರುವ ಅವರು, ನಲವತ್ತು ವರ್ಷಗಳಿಂದಲೂ ಬಿಜೆಪಿ ಹಿಡಿತ ಸಾಧಿಸಿದ್ದ ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಪ್ರಥಮ ಬಾರಿಗೆ ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಗೆದ್ದಿರುವುದು, ಶಿಕ್ಷಿತ ಮತದಾರರು ಬಿಜೆಪಿ ವಂಚನೆ, ಸುಳ್ಳು ಭರವಸೆ, ಪೊಳ್ಳು ಮಾತು, ದ್ವೇಷದ ಹೇಳಿಕೆಗಳಿಗೆ ಬೇಸತ್ತಿದ್ದಾರೆನ್ನುವುದಕ್ಕೆ ಸಾಕ್ಷಿಯಾಗಿದೆ ಎಂದಿದ್ದಾರೆ.
ರಾಜ್ಯದಲ್ಲಿ ಒಂದು ವರ್ಷದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಯೋಜನೆ ಜಾರಿ, ಶಿಕ್ಷಕರ ಪರ ನೀತಿ, ನೇಮಕಾತಿ, ಶೈಕ್ಷಣಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಶಿಕ್ಷಕರು ಅರಿತಿದ್ದಾರೆ. ಬದಲಾವಣೆ ನಿರ್ಧಾರ ಕೈಗೊಳ್ಳುವ ಮೂಲಕ ಬಿಜೆಪಿ ಪಕ್ಷವೇ ದೊಡ್ಡ ಅಪಾಯ ಎಂಬ ಸಂದೇಶ ನೀಡಿದ್ದಾರೆ.ಕಾಂಗ್ರೆಸ್ ಪಕ್ಷ ಎಲ್ಲ ವರ್ಗದ ಜನರ ಹಿತ ಕಾಯುವ ಹಾಗೂ ಜಾತ್ಯತೀತ ತತ್ವದಡಿ ಆಡಳಿತ ನಡೆಸುವ ಪಕ್ಷ. ದೇಶದಲ್ಲೂ ಕೂಡ ಕಾಂಗ್ರೆಸ್ ಪಕ್ಷದ ಪರ ಅಲೆ ಪ್ರಾರಂಭವಾಗಿದ್ದು, ರಾಹುಲ್ ಗಾಂಧಿ ನಾಯಕತ್ವವನ್ನು ಜನರು ಒಪ್ಪಿಕೊಂಡಿರುವುದು ಲೋಕಸಭಾ ಚುನಾವಣಾ ಫಲಿತಾಂಶದಲ್ಲಿ ಸ್ಪಷ್ಟಗೊಂಡಿದೆ. ಅದರಲ್ಲೂ ಶಿಕ್ಷಣ ಕ್ಷೇತ್ರವನ್ನೇ ವಿಷದ ವರ್ತುಲಕ್ಕೆ ಸಿಲುಕಿಸುವ ಬಿಜೆಪಿ ಪ್ರಯತ್ನಕ್ಕೆ ಶಿಕ್ಷಕ ವರ್ಗ ಈ ಚುನಾವಣೆಯಲ್ಲಿ ತಕ್ಕಪಾಠ ಕಲಿಸುವ ಮೂಲಕ ದ್ವೇಷದ ನಡೆ ಸಹಿಸುವುದಿಲ್ಲ ಎಂಬ ಉತ್ತರ ನೀಡಿದ್ದಾರೆ ಎಂದಿದ್ದಾರೆ.
ನಾಡಿಗೆ ಉತ್ತಮ ಪ್ರಜೆಗಳನ್ನು ಕೊಡುಗೆ ನೀಡುವ ದೇಶದ ನಿರ್ಮಾತೃಗಳಾದ ಶಿಕ್ಷಕರು ಧರ್ಮ, ದೇವರ ಹೆಸರಲ್ಲಿ ಭಾರತೀಯರನ್ನು ಇಬ್ಭಾಗ ಮಾಡುವುದನ್ನು ಸಹಿಸಿಕೊಳ್ಳುವುದಿಲ್ಲ. ಮಕ್ಕಳಿಗೆ ಉತ್ತಮ ಶಿಕ್ಷಣ, ದುಡಿಯುವ ಕೈಗಳಿಗೆ ಕೆಲಸ, ಕೈಗಾರಿಕೆ, ನೀರಾವರಿ ಕ್ಷೇತ್ರ ಬಲವರ್ಧನೆಗಳಷ್ಟೇ ಶಿಕ್ಷಕರ ಆದ್ಯತೆ ವಿಷಯ. ಆದ್ದರಿಂದ ದೇಶದ ಅಭಿವೃದ್ಧಿಗೆ ಬದ್ಧವಾಗಿರುವ ಕಾಂಗ್ರೆಸ್ ಪಕ್ಷವನ್ನು ಶಿಕ್ಷಕರು ಗೆಲ್ಲಿಸಿದ್ದಾರೆ. ಈ ಮೂಲಕ ಉತ್ತಮ ಸಂದೇಶ ನೀಡಿದ್ದಾರೆ ಎಂದು ಆಂಜನೇಯ ಹೇಳಿಕೆಯಲ್ಲಿ ತಿಳಿಸಿದ್ದಾರೆ.