ದ್ವೇಷ ಭಾಷಣ ಸುಳ್ಳು ಸುದ್ದಿ ತಡೆಗೆ ಪ್ರತ್ಯೇಕ ವಿಧೇಯಕ

KannadaprabhaNewsNetwork |  
Published : Jun 19, 2025, 11:49 PM IST
ಸಂಪುಟ ಸಭೆ | Kannada Prabha

ಸಾರಾಂಶ

ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ‘ದ್ವೇಷ ಅಪರಾಧಗಳು ಮತ್ತು ದ್ವೇಷ (ಹೋರಾಟ, ತಡೆಯುವಿಕೆ) ವಿಧೇಯಕ- 2025’ ಕರಡು ಬಗ್ಗೆ ಚರ್ಚಿಸಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದಲ್ಲಿ ದ್ವೇಷ ಭಾಷಣ ಹಾಗೂ ದ್ವೇಷದ ಅಪರಾಧ ತಡೆಗೆ ಪ್ರತ್ಯೇಕ ಕಾಯ್ದೆ ಜಾರಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದ್ದು, ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ‘ದ್ವೇಷ ಅಪರಾಧಗಳು ಮತ್ತು ದ್ವೇಷ (ಹೋರಾಟ, ತಡೆಯುವಿಕೆ) ವಿಧೇಯಕ- 2025’ ಕರಡು ಬಗ್ಗೆ ಚರ್ಚಿಸಲಾಗಿದೆ.

ಗುರುವಾರ ನಡೆದ ಸಂಪುಟ ಸಭೆಯಲ್ಲಿ ಪ್ರಾಥಮಿಕವಾಗಿ ಪ್ರಸ್ತಾಪಿಸಲಾಗಿದ್ದು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಗುವುದು ಎಂದು ತಿಳಿದುಬಂದಿದೆ.

ದ್ವೇಷ ಭಾಷಣವು ದೇಶದ ಜ್ಯಾತ್ಯತೀತ ಸಂರಚನೆಗೆ ಹಾನಿ ಮಾಡುವಷ್ಟು ಸಮರ್ಥವಾಗಿರುವ ಗಂಭೀರ ಅಪರಾಧ ಎಂದು ಸುಪ್ರೀಂ ಕೋರ್ಟ್‌ ಹೇಳಿತ್ತು. ಜತೆಗೆ ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆ ಸೇರಿ ಹಲವೆಡೆ ದ್ವೇಷ ಭಾಷಣ, ಪ್ರಚೋದನೆಗಳು ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ಕೆಲವರನ್ನು ಜಿಲ್ಲೆಯಿಂದ ಗಡಿಪಾರು ಮಾಡಲು ಸಹ ಕ್ರಮ ಕೈಗೊಳ್ಳಲಾಗಿದೆ.3 ವರ್ಷ ಶಿಕ್ಷೆ:

ಇದರ ನಡುವೆಯೇ ದ್ವೇಷ ಭಾಷಣ ಹಾಗೂ ದ್ವೇಷ ಅಪರಾಧ ತಡೆಗೆ ವಿಧೇಯಕ ಜಾರಿಗೆ ಪ್ರಸ್ತಾಪಿಸಿದ್ದು, ದ್ವೇಷ ಭಾಷಣ ಧಾರ್ಮಿಕ, ಜನಾಂಗೀಯ, ಜಾತಿ ಅಥವಾ ಸಮುದಾಯ, ಲಿಂಗ, ಲೈಂಗಿಕ ದೃಷ್ಟಿಕೋನ, ಜನ್ಮಸ್ಥಳ, ಭಾಷಣೆ, ನಿವಾಸ, ಅಂಗವೈಕಲ್ಯ, ಬುಡಕಟ್ಟು ಕುರಿತು ಯಾವುದೇ ವ್ಯಕ್ತಿಗೆ ಹಾನಿ ಮಾಡುವ ಅಥವಾ ದ್ವೇಷವನ್ನು ಉತ್ತೇಜಿಸುವ ಅಥವಾ ಪ್ರಚಾರ ಮಾಡುವ ವ್ಯಕ್ತಿ ಅಥವಾಗ ಗುಂಪಿಗೆ ಮೂರು ವರ್ಷಗಳ ಕಾಲ ಶಿಕ್ಷೆ ವಿಧಿಸಬಹುದು ಅಥವಾ 5 ಸಾವಿರ ದಂಡದ ಜತೆಗೆ ಶಿಕ್ಷೆ ವಿಧಿಸಲು ಪ್ರಸ್ತಾಪಿಸಲಾಗಿದೆ.

ಸುಳ್ಳು ಸುದ್ದಿ ನಿಯಂತ್ರಣಕ್ಕೆ ವಿಧೇಯಕ:ರಾಜ್ಯದಲ್ಲಿ ಸುಳ್ಳು ಸುದ್ದಿ ಹರಡುತ್ತಿರುವವರ ಮೇಲೆ ನಿಗಾ ಇಟ್ಟು ನಿಯಂತ್ರಿಸಲು ತಪ್ಪು ಮಾಹಿತಿ ಹಾಗೂ ಸುಳ್ಳು ಸುದ್ದಿ ಹರಡುವುದನ್ನು ನಿಯಂತ್ರಿಸಲು ವಿಧೇಯಕ ಜಾರಿಗೆ ತರಲು ಚರ್ಚಿಸಲಾಗಿದೆ.

ಗೃಹ ಇಲಾಖೆ ನೀಡಿರುವ ಮಾಹಿತಿ ಪ್ರಕಾರ 2021 ರಿಂದ 2024 ವರೆಗೆ ರಾಜ್ಯದಲ್ಲಿ ಒಟ್ಟು 247 ಸುಳ್ಳು ಸುದ್ದಿ ಪ್ರಕರಣ ವರದಿಯಾಗಿವೆ. ಇವುಗಳನ್ನು ಜಿಲ್ಲಾ ಮಟ್ಟದಲ್ಲಿ ಸಾಮಾಜಿಕ ಜಾಲತಾಣಗಳ ಮಾನಿಟರಿಂಗ್ ಸೆಲ್‌ಗಳನ್ನು ತೆರೆಯಲಾಗಿದೆ. ಇದರ ಮೂಲಕ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇಡಲಾಗುತ್ತಿದೆ.

ಗುಪ್ತ ಮಾಹಿತಿ ಸಿಬ್ಬಂದಿ ಹಾಗೂ ಬೀಟ್‌ ಸಿಬ್ಬಂದಿ ಮೂಲಕ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಆದರೂ ದಿನದಿಂದ ದಿನಕ್ಕೆ ಸುಳ್ಳು ಸುದ್ದಿ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿದ್ದು, ಮುಂದಿನ ಸಂಪುಟ ಸಭೆಯಲ್ಲಿ ನಿರ್ಣಯ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.-ಬಾಕ್ಸ್-

ರೋಹಿತ್ ವೇಮುಲಾ ಕಾಯ್ದೆ ಕುರಿತು ಪ್ರಸ್ತಾಪ

ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ದೌರ್ಜನ್ಯ ತಡೆಯುವ ರೋಹಿತ್ ವೇಮುಲಾ ಕಾಯ್ದೆ ಕುರಿತು ಸಚಿವ ಸಂಪುಟದಲ್ಲಿ ಪ್ರಸ್ತಾಪವಾಗಿದ್ದು, ಕಾಯ್ದೆ ಕುರಿತು ವಿಸ್ತೃತ ಪರಿಶೀಲನೆ ಅಗತ್ಯವಾಗಿರುವ ಹಿನ್ನೆಲೆಯಲ್ಲಿ ಮುಂದಿನ ಸಂಪುಟ ಸಭೆಯಲ್ಲಿ ಚರ್ಚಿಸಲು ತೀರ್ಮಾನಿಸಲಾಗಿದೆ.

ರಾಜ್ಯದಲ್ಲಿ ರೋಹಿತ್‌ ವೇಮುಲ ಕಾಯ್ದೆ ಜಾರಿಗೆ ತರುವಂತೆ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಏ.16 ರಂದು ಪತ್ರ ಬರೆದಿದ್ದರು. ಇದಕ್ಕೆ ಸ್ಪಂದಿಸಿದ್ದ ಸಿದ್ದರಾಮಯ್ಯ ಅವರು ಮುಂದಿನ ಅಧಿವೇಶನದಲ್ಲಿ ಕಾಯ್ದೆ ಜಾರಿಗೊಳಿಸುವ ಭರವಸೆ ನೀಡಿದ್ದರು. ಅದರಂತೆ ರೋಹಿತ್‌ ವೇಮುಲ ಕಾಯ್ದೆ ಸಿದ್ಧಪಡಿಸಿ ಸಂಪುಟ ಮುಂದೆ ತರಲಾಗಿತ್ತು.

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ವಿರೋಧಿ ಘಟಕ ಸ್ಥಾಪನೆ, ಸಾಂಸ್ಥಿಕ ತಾರತಮ್ಯಕ್ಕೆ ಕಠಿಣ ದಂಡ ವಿಧಿಸುವುದು ಸೇರಿ ವಿವಿಧ ವಿಷಯಗಳನ್ನು ಒಳಗೊಂಡ ವಿಧೇಯಕವನ್ನು ಮುಂದಿನ ಸಂಪುಟಸಭೆಯಲ್ಲಿ ಮಂಡಿಸಿ ಅಗತ್ಯ ನಿರ್ಣಯ ಮಾಡುವ ಸಾಧ್ಯತೆಯಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ