ಅನಿವಾಸಿ ಕನ್ನಡಿಗರ ರಕ್ಷಣೆಗೆ ಪ್ರತ್ಯೇಕ ಸಚಿವಾಲಯ: ಡಾ.ಆರತಿ ಕೃಷ್ಣ

KannadaprabhaNewsNetwork |  
Published : Mar 10, 2024, 01:35 AM IST
ಪೊಟೋ: 9ಎಸ್‌ಎಂಜಿಕೆಪಿ02 ಶಿವಮೊಗ್ಗದ ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸರ್ಕಾರದ ಅನಿವಾಸಿ ಭಾರತೀಯ ಕೋಶದ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ಮಾತನಾಡಿದರು. | Kannada Prabha

ಸಾರಾಂಶ

ವ್ಯಾಪಾರ, ಶಿಕ್ಷಣ ಸೇರಿದಂತೆ ನಾನಾ ಕಾರಣಕ್ಕೆ ಹೊರ ದೇಶಗಳಿಗೆ ತೆರಳುವ ಮತ್ತು ಅಲ್ಲಿ ತಾತ್ಕಾಲಿಕವಾಗಿ ನೆಲೆಸಿರುವ ಅನಿವಾಸಿ ಕನ್ನಡಿಗರ ರಕ್ಷಣೆ ಮತ್ತು ಸಾಮಾಜಿಕ ಭದ್ರತೆ ದೃಷ್ಟಿಯಿಂದ ರಾಜ್ಯ ಸರ್ಕಾರ ಪ್ರತ್ಯೇಕ ಸಚಿವಾಲಯವನ್ನು ಆರಂಭಿಸಲು ಮುಂದಾಗಿದೆ ಎಂದು ರಾಜ್ಯ ಸರ್ಕಾರದ ಅನಿವಾಸಿ ಭಾರತೀಯ ಕೋಶದ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ಶಿವಮೊಗ್ಗದಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ವ್ಯಾಪಾರ, ಶಿಕ್ಷಣ ಸೇರಿದಂತೆ ನಾನಾ ಕಾರಣಕ್ಕೆ ಹೊರ ದೇಶಗಳಿಗೆ ತೆರಳುವ ಮತ್ತು ಅಲ್ಲಿ ತಾತ್ಕಾಲಿಕವಾಗಿ ನೆಲೆಸಿರುವ ಅನಿವಾಸಿ ಕನ್ನಡಿಗರ ರಕ್ಷಣೆ ಮತ್ತು ಸಾಮಾಜಿಕ ಭದ್ರತೆ ದೃಷ್ಟಿಯಿಂದ ರಾಜ್ಯ ಸರ್ಕಾರ ಪ್ರತ್ಯೇಕ ಸಚಿವಾಲಯವನ್ನು ಆರಂಭಿಸಲು ಮುಂದಾಗಿದೆ ಎಂದು ರಾಜ್ಯ ಸರ್ಕಾರದ ಅನಿವಾಸಿ ಭಾರತೀಯ ಕೋಶದ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ತಿಳಿಸಿದರು.ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವ್ಯಾಪಾರೋದ್ಯಮ ಸೇರಿದಂತೆ ನಾನಾ ಕಾರಣಕ್ಕೆ ಇವತ್ತು ಸಾಕಷ್ಟು ಮಂದಿ ಕನ್ನಡಿಗರು ಹೊರ ದೇಶಗಳಿಗೆ ಹೋಗುತ್ತಿದ್ದಾರೆ. ವಿಶೇಷವಾಗಿ ಹಕ್ಕಿಪಕ್ಕಿ ಜನಾಂಗದವರು ಕೂಡ ಕಾಂಬೋಡಿಯಾ, ವಿಯೆಟ್ನಾಂ ದೇಶಗಳಿಗೆ ಹೋಗಿ, ಅಲ್ಲಿ ತಮ್ಮ ಗಿಡಮೂಲಿಕೆ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ. ಆದರೆ, ಸಾಕಷ್ಟು ಜನರು ನಕಲಿ ಏಜೆನ್ಸಿ ಮೂಲಕ ಅಲ್ಲಿಗೆ ಹೋಗಿ ತೊಂದರೆ ಅನುಭವಿಸುವಂತಹ ಘಟನೆಗಳು ಕೂಡ ನಡೆದಿವೆ. ಹಾಗಾಗಿ, ಯಾರೇ ಹೊರ ದೇಶಗಳಿಗೆ ಹೋಗುವುದಾದರೆ ಅವರ ವಿವರ ಸರ್ಕಾರದ ಬಳಿಯೂ ಇರಬೇಕು ಎಂಬ ಕಾರಣಕ್ಕೆ ಪ್ರತ್ಯೇಕ ಸಚಿವಾಲಯ ಬೇಕು ಎನ್ನುವುದು ನಮ್ಮ ಉದ್ದೇಶ ಎಂದರು. ಕೇರಳ, ಆಂಧ್ರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಅಲ್ಲಿನ ಸರ್ಕಾರಗಳು ಅನಿವಾಸಿಗಳ ಭದ್ರತೆ ದೃಷ್ಟಿಯಿಂದ ಪ್ರತ್ಯೇಕ ಸಚಿವಾಲಗಳನ್ನು ಆರಂಭಿಸಿವೆ. ಆಯಾ ರಾಜ್ಯಗಳ ಜನರು ಯಾವುದೇ ಉದ್ದೇಶಕ್ಕಾದರೂ ಹೊರ ದೇಶಗಳಿಗೆ ಹೊರಟರೆ, ಸಚಿವಾಲಯಕ್ಕೆ ಅವರ ಮಾಹಿತಿ ನೀಡಬೇಕು. ಅಂತಹದ್ದೇ ವ್ಯವಸ್ಥೆ ರಾಜ್ಯದಲ್ಲೂ ಶುರುವಾದರೆ, ಯಾರು ಎಲ್ಲಿಗೆ ಹೋದರೂ ಸಂಪೂರ್ಣ ಮಾಹಿತಿ ಸರ್ಕಾರದ ಮಟ್ಟದಲ್ಲಿಯೇ ಲಭ್ಯವಾಗಿರುತ್ತದೆ. ಹೊರದೇಶದಲ್ಲಿ ಸಂಕಷ್ಟ ಪರಿಸ್ಥಿತಿಗೆ ಸಿಲುಕಿದಾಗ ಅವರ ನೆರವಿಗೆ ತಕ್ಷಣವೇ ಸ್ಪಂದಿಸಲು ಸಾಧ್ಯವಾಗುತ್ತದೆ ಎಂದರು.

ಕನ್ನಡಿಗರು ಹೊರ ದೇಶಗಳಿಗೆ ನಾನಾ ಕಾರಣಕ್ಕೆ ಹೋಗುವಾಗ ಅವರನ್ನು ತಪ್ಪು ದಾರಿಗೆಳೆಯುವ ನಕಲಿ ಏಜೆನ್ಸಿಗಳು ಇಲ್ಲಿವೆ. ಆ ರೀತಿಯ ನಕಲಿ ಏಜೆನ್ಸಿಗಳ ಮೂಲಕ ಹೊರದೇಶಕ್ಕೆ ಹೋದವರು ಅಲ್ಲಿ ಹಲವು ಬಗೆಯ ತಾಂತ್ರಿಕ ಸಮಸ್ಯೆಗಳಿಗೆ ಸಿಲುಕಿದ್ದನ್ನು ನಾವು ನೋಡಿದ್ದೇವೆ. ಅಂತಹ ಸಂದರ್ಭದಲ್ಲಿ ಅನಿವಾರ್ಯವಾಗಿ ಸರ್ಕಾರವೇ ಮಧ್ಯ ಪ್ರವೇಶಿಸಿ, ಅವರ ರಕ್ಷಣೆ ಕೆಲಸ ಮಾಡಬೇಕಾಗುತ್ತದೆ. ಹಾಗಾಗಿ, ಇಂತಹ ದೋಷಗಳನ್ನು ಸರಿಪಡಿಸಲು ಅನಿವಾಸಿ ಭಾರತೀಯ ಕೋಶದ ಮೂಲಕ ಗುರುತಿನ ಕಾರ್ಡ್ ನೀಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಕಲಬುರಗಿಯಿಂದ ವಿದೇಶಕ್ಕೆ ಹೋಗಿರುವ ಕನ್ನಡಿಗರ ಬಗ್ಗೆ ವಿವರಗಳು ಸಿಕ್ಕಿಲ್ಲ. ರಾಯಭಾರ ಕಚೇರಿ ಸಂಪರ್ಕಿಸುತ್ತೇನೆ. ಮುಂದಿನ ಕ್ರಮ ಕೈಗೊಳ್ಳುತ್ತೇನೆ. ಯಾರೇ ಆಗಲಿ ವಿದೇಶಕ್ಕೆ ಕೆಲಸಕ್ಕೆ ಹೋಗುವವರು ಕರ್ನಾಟಕ ಸರ್ಕಾರದಲ್ಲಿ ಸಚಿವಾಲಯದ ಮಾಹಿತಿ ಪಡೆದು ಹೋಗಬೇಕು ಎಂದರು.

ವಿದೇಶಗಳಲ್ಲಿ ಕೆಲಸಕ್ಕಾಗಿ ಕನ್ನಡಿಗರಿಗೆ ಆಮಿಷ ತೋರಿಸಲಾಗುತ್ತಿದೆ. ಸೆಕ್ಯೂರಿಟಿ ಕೆಲಸ ಎಂದು ಹೇಳಿ ಸೈನ್ಯಕ್ಕೆ ಸೇರಿಸಿಕೊಳ್ಳುವುದು ಸರಿಯಲ್ಲ. ಹಾಗೆಯೇ, ಡೇಟಾ ಎಂಟ್ರಿ ಆಪರೇಟರ್ ಎಂದು ಹೇಳಿ ಹಲವು ಅಕ್ರಮ ಕೆಲಸಗಳನ್ನು ಕೂಡ ಮಾಡಿಸುತ್ತಿದ್ದಾರೆ. ಹಾಗಾಗಿ, ಕನ್ನಡಿಗರು ಮೋಸ ಹೋಗುತ್ತಿದ್ದಾರೆ. ಇದರಿಂದ ತಪ್ಪಿಸಿಕೊಳ್ಳಲು ನಕಲಿ ಏಜೆನ್ಸಿಗಳ ಬಗ್ಗೆ ಎಚ್ಚರವಿರಬೇಕು. ಯಾವುದೇ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಸಂಪರ್ಕ ಪಡೆಯಬೇಕು ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಎಸ್. ಸುಂದರೇಶ್, ಉಪಾಧ್ಯಕ್ಷ ಎಸ್.ಟಿ. ಚಂದ್ರಶೇಖರ್, ಪ್ರಮುಖರಾದ ಸಿ.ಎಸ್. ಚಂದ್ರಭೂಪಾಲ್, ಆಫ್ರೀದಿ, ಮಂಜುನಾಥ್ ಬಾಬು, ಚಂದನ್, ಪದ್ಮನಾಭ್, ಕೃಷ್ಣಪ್ಪ, ಶಿ.ಜು.ಪಾಶ ಮತ್ತಿತರರು ಇದ್ದರು.

- - - ಬಾಕ್ಸ್‌ ಗೀತಾ ಶಿವರಾಜಕುಮಾರ್‌ ಗೆಲ್ತಾರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅತ್ಯುತ್ತಮವಾಗಿ ಆಡಳಿತ ನಡೆಸುತ್ತಿದೆ. ಎಲ್ಲ ಗ್ಯಾರಂಟಿಗಳು ಬಡವರ ತಲುಪುತ್ತಿವೆ. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಹೆಚ್ಚಿನ ಸ್ಥಾನ ಪಡೆಯಲಿದೆ. ಶಿವಮೊಗ್ಗ ಕ್ಷೇತ್ರಕ್ಕೆ ಗೀತಾ ಶಿವರಾಜ್‌ಕುಮಾರ್ ಅವರನ್ನು ಆಯ್ಕೆ ಮಾಡಿರುವುದು ಸಂತೋಷದ ವಿಷಯ. ಅವರು ಗೆಲ್ಲುತ್ತಾರೆ ಎಂಬ ವಿಶ್ವಾಸವಿದೆ ಎಂದು ರಾಜ್ಯ ಸರ್ಕಾರದ ಅನಿವಾಸಿ ಭಾರತೀಯ ಕೋಶದ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ಹೇಳಿದರು.

ರಾಹುಲ್ ಗಾಂಧಿ ಅವರು ಈಗಾಗಲೇ ಕೇಂದ್ರ ಸರ್ಕಾರದಲ್ಲಿನ ಅನೇಕ ಸಮಸ್ಯೆಗಳನ್ನು ಜನರ ಮುಂದಿಟ್ಟಿದ್ದಾರೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಉದ್ಯೋಗ ಸೃಷ್ಟಿ ಮತ್ತು ಉದ್ಯೋಗ ಭರವಸೆ ಸಿಗಲಿದೆ. ಕೇಂದ್ರ ಸಚಿವಾಲಯದಲ್ಲಿರುವ 10 ಲಕ್ಷ ಹುದ್ದೆಗಳನ್ನು ಕಾಂಗ್ರೆಸ್ ಪಕ್ಷ ತುಂಬಲಿದೆ ಎಂದರು.

- - - -9ಎಸ್‌ಎಂಜಿಕೆಪಿ02:

ಶಿವಮೊಗ್ಗದ ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸರ್ಕಾರದ ಅನಿವಾಸಿ ಭಾರತೀಯ ಕೋಶದ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಮತಾ ಬ್ಯಾನರ್ಜಿ ಘೋರ ಪರಾಭವ
ದಾವಣಗೆರೆ ದಕ್ಷಿಣದಲ್ಲಿ ಸೋಲು ಎದುರಾಗಿದ್ರಿಂದ ನೋವು: ಬಿಎಸ್‌ವೈ