ಕನ್ನಡಪ್ರಭ ವಾರ್ತೆ ದಾವಣಗೆರೆ
ದೇವಸ್ಥಾನದಲ್ಲಿ ದೇವರ ವಿಗ್ರಹದ ಮೇಲಿದ್ದ ಬೆಳ್ಳಿ ಮೂರ್ತಿ, ಛತ್ರಿ ಚಾಮರಗಳು, ಪಾದುಕೆಗಳು ಸೇರಿದಂತೆ 800 ಗ್ರಾಂ ತೂಕದ ಸುಮಾರು 1.50 ಲಕ್ಷ ರು. ಮೌಲ್ಯದ ಬೆಳ್ಳಿ ಆಭರಣಗಳನ್ನು ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ, ಆಭರಣಗಳನ್ನು ಮಾಯಕೊಂಡ ಪೊಲೀಸರು ಜಪ್ತಿ ಮಾಡಿದ್ದಾರೆ.
ದಾವಣಗೆರೆ ನಗರದ ಆರ್.ವಿ.ಪ್ರವೀಣ (30), ಸಂತೋಷ (40) ಬಂಧಿತ ಆರೋಪಿಗಳು. ತಾಲೂಕಿನ ಮಾಯಕೊಂಡಪೊಲೀಸ್ ಠಾಣೆಯ ಹುಚ್ಚವ್ವನಹಳ್ಳಿ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಏ.30ರಂದು ಬೆಲಿಗ್ಗೆ ದೇವರ ಮೂರ್ತಿ, ಛತ್ರಿ ಚಾಮರಗಳು, ಪಾದುಕೆಗಳು ಸೇರಿದಂತೆ 1.50 ಲಕ್ಷ ಮೌಲ್ಯದ ಬೆಳ್ಳಿ ಆಭರಣಗಳು ಕಳುವಾಗಿದ್ದ ಬಗ್ಗೆ ಗ್ರಾಮದ ಉಮೇಶ ಹುಚ್ಚವ್ವನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.ಗ್ರಾಮಾಂತರ ಡಿವೈಎಸ್ಪಿ ಬಿ.ಎಸ್.ಬಸವರಾಜ ಮಾರ್ಗದರ್ಶನದಲ್ಲಿ ಮಾಯಕೊಂಡ ಸಿಪಿಐ ರಾಘವೇಂದ್ರ ನೇತೃತ್ವದ ಪಿಎಸ್ಐ ಎಸ್.ಬಿ.ಅಜಯ್, ಸಿಬ್ಬಂದಿ ಒಳಗೊಂಡ ತಂಡ ಆರೋಪಿಗಳನ್ನು ಪತ್ತೆ ಮಾಡಿ, ಬಂಧಿಸಿದೆ. ಠಾಣೆ ಸಿಬ್ಬಂದಿಯಾದ ಅಣ್ಣಯ್ಯ, ರಾಮಕೃಷ್ಣ, ನಾಗರಾಜ, ರಾಜು ಲಮಾಣಿ, ಪರಶುರಾಮ, ದಾದಾಪೀರ್, ಚಾಲಕರಾದ ದಾದಾಪೀರ್ ಇತರರನ್ನು ಒಳಗೊಂಡ ತಂಡವು ದೇವಸ್ಥಾನದ ಕಳವು ಪ್ರಕರಣ ಬೇಧಿಸಿ, ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ. ಅಧಿಕಾರಿ, ಸಿಬ್ಬಂದಿ ಕಾರ್ಯಕ್ಕೆ ಎಸ್ಪಿ ಎಚ್.ಟಿ.ಶೇಖರ, ಎಎಸ್ಪಿ ಪರಮೇಶ್ವರ ಹೆಗಡೆ ಪ್ರಶಂಸಿದ್ದಾರೆ.
ಮಾಯಕೊಂಡ ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡ ಮಾಗಡಿ ಗ್ರಾಮದ ಮನೆಯೊಂದರಲ್ಲಿ ಕಳ್ಳತನವಾಗಿದ್ದ ಪ್ರಕರಣವನ್ನು ಪೊಲೀಸರು ಬಂಧಿಸಿ, ಓರ್ವ ಮಹಿಳೆ ಸೇರಿ ಇಬ್ಬರು ಆರೋಪಿಗಳನ್ನು ಬಂಧಿಸಿ, 3.20 ಲಕ್ಷ ರು. ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ ಘಟನೆ ವರದಿಯಾಗಿದೆ.
ಬಂಧಿತರಿಂದ 3.20 ಲಕ್ಷ ರು. ಮೌಲ್ಯದ ಸ್ವತ್ತನ್ನು ಜಪ್ತು ಮಾಡಲಾಗಿದೆ. ಮನೆ ಕಳವು ಪ್ರಕರಣ ಭೇದಿಸಿದ ಮಾಯಕೊಂಡ ಠಾಣೆ ಅಪರಾಧ ವಿಭಾಗದ ಸಿಬ್ಬಂದಿಯಾದ ಎಎಸ್ಐ ಹೇಮ್ಲನಾಯ್ಕ, ಅಣ್ಣಯ್ಯ, ರಾಮಕೃಷ್ಣ, ಸಲ್ಮಾ, ಭವಾನಿ, ರಾಜು ಲಮಾಣಿ, ಪರಶುರಾಮ, ದಾದಾಪೀರ್ ಕಾರ್ಯಾಚರಣೆ ನಡೆಸಿತು. ಅಧಿಕಾರಿ, ಸಿಬ್ಬಂದಿ ಕಾರ್ಯಕ್ಕೆ ಎಸ್ಪಿ ಡಾ.ಎಚ್.ಟಿ.ಶೇಖರ, ಎಎಸ್ಪಿ ಪರಮೇಶ್ವರ ಹೆಗಡೆ ಶ್ಲಾಘಿಸಿದ್ದಾರೆ.