ಹಗರಿಬೊಮ್ಮನಹಳ್ಳಿ: ಸ್ವಪಕ್ಷೀಯರಿಂದಲೇ ದುರಾಡಳಿತದ ಆರೋಪ ಹೊತ್ತಿದ್ದ ಮತ್ತು ಅವಿಶ್ವಾಸ ಎದುರಿಸುವ ಭೀತಿಯಲ್ಲಿದ್ದ ಅಧ್ಯಕ್ಷ ಮರಿರಾಮಣ್ಣ ನೀಡಿದ್ದ ರಾಜೀನಾಮೆ ಶನಿವಾರ ಅಂಗೀಕಾರವಾಗಿದ್ದು, ಪುರಸಭೆಯ ಹಂಗಾಮಿ ಅಧ್ಯಕ್ಷೆಯಾಗಿ ಉಪಾಧ್ಯಕ್ಷೆ ಸೆರೆಗಾರ್ ನೇತ್ರಾವತಿ ಅವರಿಗೆ ಬುಧವಾರ ಅಧಿಕಾರ ಹಸ್ತಾಂತರವಾಯಿತು.
ಸಾಮಾನ್ಯ ಸಭೆ ಕರೆಯದೆ 2026-27 ಬಜೆಟ್ ಪೂರ್ವಭಾವಿ ಸಭೆ ಗೊತ್ತುಪಡಿಸಿದಾಗ ಕೆರಳಿದ ಸದಸ್ಯರು, ಸದಸ್ಯ ಗಣೇಶ್ ನೇತೃತ್ವದಲ್ಲಿ ಸಂಘಟಿತರಾಗಿ ಬಜೆಟ್ ಸಭೆ ರದ್ದುಪಡಿಸುವಂತೆ ಆಗ್ರಹಿಸಿ ಸಾಮಾನ್ಯ ಸಭೆ ನಡೆಸಲು ಒತ್ತಾಯಿಸಿದ್ದರು.
ಸ್ವಪಕ್ಷೀರಿಂದಲೇ ದಾಳಿಗೊಳಗಾದರೂ ತಮ್ಮದೇ ನಡವಳಿಕೆ ಸರಿ ಎಂದೇ ಮರಿರಾಮಣ್ಣನವರು ಮುಂದುವರಿದಾಗ ಅವರ ಏಕ ಚಕ್ರಾಧಿಪತ್ಯ ಕೊನೆಗಾಣಿಸಲು ಸದಸ್ಯರು ವಿಧಿ ಇಲ್ಲದೇ ಬಿಜೆಪಿ ಸದಸ್ಯರ ಬೆಂಬಲದೊಂದಿಗೆ ಅವಿಶ್ವಾಸ ನಿರ್ಣಯ ಮಂಡಿಸುವ ಹಂತಕ್ಕೆ ಮುಂದಾದರು.ಮರಿರಾಮಣ್ಣನವರ 17 ತಿಂಗಳ ಅವಧಿಯಲ್ಲಿ ಅನುಷ್ಠಾನಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಪಟ್ಟಿ, ಮಂಜೂರಾದ ಬಿಲ್ಲುಗಳು, ಗುತ್ತಿಗೆದಾರರ ವಿವರ ಹಾಗೂ ಪಾವತಿಸಿದ ಮೊತ್ತ ಜೊತೆಗೆ ಇತರೇ ಆಡಳಿತಾತ್ಮಕ ವಿಷಯಗಳನ್ನು ಸಾಮಾನ್ಯ ಸಭೆಯಲ್ಲಿ ಮಂಡಿಸಿ ಚರ್ಚಿಸಿದ ನಂತರವೇ ಕಾಮಗಾರಿಗಳ ಮೊತ್ತವನ್ನು ಪಾವತಿಸಬೇಕು ಎಂದು ಮುಖ್ಯಾಧಿಕಾರಿಗಳಿಗೆ ಪಕ್ಷಾತೀತವಾಗಿ ಮನವಿ ಸಲ್ಲಿಸಿದಾಗ ಮಾಜಿ ಶಾಸಕ ಭೀಮಾನಾಯ್ಕ ಮಧ್ಯ ಪ್ರವೇಶಿಸಿದ್ದರು. ಮರಿ ರಾಮಣ್ಣನವರು ಪಕ್ಷದ ಹಿತಾಸಕ್ತಿ ಕಡೆಗಣಿಸುತ್ತಿದ್ದಾರೆ ಎಂದು ಮನಗಂಡ ಭೀಮಾನಾಯ್ಕ ಮರಿರಾಮಣ್ಣನವರ ರಾಜಿನಾಮೆಗೆ ಸೂಚಿಸಿದಾಗ ವಿಧಿ ಇಲ್ಲದೇ ಮಾರ್ಚ್ 24ರಂದು ಬಜೆಟ್ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಸಂಜೆ ಹೊಸಪೇಟೆಯ ಸಹಾಯಕ ಆಯುಕ್ತರಿಗೆ ರಾಜಿನಾಮೆ ಸಲ್ಲಿಸಿದ್ದರು.