ಸರಣಿ ಕಳ್ಳತನ: ಬಂಗಾರ,ಬೆಳ್ಳಿ, ನಗದು ದೋಚಿ ಪರಾರಿ

KannadaprabhaNewsNetwork |  
Published : Aug 12, 2026, 02:45 AM IST
ಪೋಟೊಗಳು11.13 ಕುಷ್ಟಗಿ ತಾಲೂಕಿನ ಗುಮಗೇರ ಗ್ರಾಮದಲ್ಲಿ ಹನುಮೇಶ ಗುಮಗೇರಿಯ ಮನೆಯಲ್ಲಿ ಟ್ರಿಜರಿಯಲ್ಲಿನ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿರುವದು.11.14 ಕುಷ್ಟಗಿ ತಾಲೂಕಿನ ಹಿರೇಮನ್ನಾಪೂರು ಗ್ರಾಮದಲ್ಲಿ ಕಳ್ಳತನ ನಡೆದ ಹಿನ್ನಲೆಯಲ್ಲಿ ಶ್ವಾನದಳದವರು ಆಗಮಿಸಿ ಶೋಧ ಕಾರ್ಯ ನಡೆಸಿದರು. | Kannada Prabha

ಸಾರಾಂಶ

ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪುರ ಅವರ ಆಪ್ತ ಸಹಾಯಕ, ಗುಮಗೇರಿ ಗ್ರಾಮದ ಹನಮೇಶ ಗುಮಗೇರಿ ಮನೆಯಲ್ಲಿಯೂ ಕಳ್ಳತನ ನಡೆದಿದೆ

ಕುಷ್ಟಗಿ: ತಾಲೂಕಿನ ಹಿರೇಮನ್ನಾಪುರ, ಗುಮಗೇರಿ ಹಾಗೂ ನಿಡಸೇಸಿ ಗ್ರಾಮಗಳಲ್ಲಿ ಸೋಮವಾರ ರಾತ್ರಿ ಸರಣಿ ಕಳ್ಳತನ ನಡೆದಿರುವುದು ವರದಿಯಾಗಿದ್ದು, ಬಂಗಾರ, ಬೆಳ್ಳಿ ಆಭರಣ ಹಾಗೂ ನಗದು ಹಣ ದೋಚಿಕೊಂಡು ಕಳ್ಳರು ಪರಾರಿಯಾಗಿದ್ದಾರೆ. ಒಂದೇ ರಾತ್ರಿ ಮೂರು ಗ್ರಾಮಗಳಲ್ಲಿ ಕಳ್ಳತನ ನಡೆದಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ಹಿರೇಮನ್ನಾಪುರ ಗ್ರಾಮದ ನಾಗರಾಜ ದುರಗಪ್ಪ ನಿಡಗುಂದಿ ಮನೆಯ ಬೀಗ ಮುರಿದು ಒಳನುಗ್ಗಿದ ಕಳ್ಳರು 5 ಗ್ರಾಂ ಬಂಗಾರದ ಜುಮುಕಿ, 5 ಗ್ರಾಂ ಬೋರಮಳ ಸರ, 10 ತೊಲಿ ಬೆಳ್ಳಿ ಕಾಲುಚೈನು ಹಾಗೂ ₹18 ಸಾವಿರ ನಗದು ದೋಚಿದ್ದಾರೆ. ದೂರು ಹಿನ್ನೆಲೆಯಲ್ಲಿ ಕೊಪ್ಪಳದಿಂದ ಶ್ವಾನದಳ ಹಾಗೂ ಬೆರಳಚ್ಚು ತಜ್ಞರನ್ನು ಕರೆಸಿ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಇದೇ ಗ್ರಾಮದಲ್ಲಿ ಮತ್ತೊಂದು ಮನೆಯಲ್ಲಿಯೂ ಕಳ್ಳತನ ನಡೆದಿದ್ದು, ಕಳುವಾದ ವಸ್ತುಗಳ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಮದುವೆ ತಯಾರಿಯ ನಡುವೆ ಕನ್ನ: ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪುರ ಅವರ ಆಪ್ತ ಸಹಾಯಕ, ಗುಮಗೇರಿ ಗ್ರಾಮದ ಹನಮೇಶ ಗುಮಗೇರಿ ಮನೆಯಲ್ಲಿಯೂ ಕಳ್ಳತನ ನಡೆದಿದೆ.

ಹನಮೇಶ ಅವರ ಮಗನ ಮದುವೆ ತಯಾರಿ ಹಿನ್ನೆಲೆ ಕುಟುಂಬ ಬೆಂಗಳೂರಿಗೆ ತೆರಳಿತ್ತು. ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ ಕಳ್ಳರು ರಾತ್ರಿ ಮನೆಯ ಬಾಗಿಲು ಒಡೆದು ಒಳನುಗ್ಗಿ ಟ್ರೆಜರಿ ಒಡೆದು ವಸ್ತು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಸುಮಾರು ಒಂದು ತೊಲಿ ಬಂಗಾರದ ಆಭರಣ ಹಾಗೂ ಬೆಳ್ಳಿ ಸಾಮಗ್ರಿ ಕಳುವಾಗಿವೆ ಎಂದು ಹನಮೇಶ ತಿಳಿಸಿದ್ದಾರೆ.

ಸ್ಥಳಕ್ಕೆ ಸಿಪಿಐ ವಿಶ್ವನಾಥ ಹಿರೇಗೌಡ, ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳ್ಳರ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ನಿಡಸೇಸಿಯಲ್ಲೂ ಕಳ್ಳತನ: ನಿಡಸೇಸಿ ಗ್ರಾಮದ ಶರಣಮ್ಮ ಅವರ ಕುಟುಂಬ ಸಮೇತ ತಿರುಪತಿಗೆ ತೆರಳಿದ್ದ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ ಕಳ್ಳರು ಮನೆಗೆ ನುಗ್ಗಿದ್ದಾರೆ ಎನ್ನಲಾಗಿದೆ. ಇಲ್ಲಿ ಸುಮಾರು ಒಂದು ತೊಲಿ ಬಂಗಾರ ಹಾಗೂ ₹1 ಲಕ್ಷ ನಗದು ದೋಚಲಾಗಿದೆ ಎಂದು ತಿಳಿದುಬಂದಿದೆ.

ಈ ಕುರಿತು ಇನ್ನೂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಆಗ್ರಹ: ಮೂರು ಗ್ರಾಮಗಳಲ್ಲಿ ಸರಣಿ ಕಳ್ಳತನ ನಡೆದಿರುವ ಹಿನ್ನೆಲೆ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದ್ದು, ಕಳ್ಳರನ್ನು ಶೀಘ್ರ ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಲ್ಲ ಮೀನುಗಾರ ಸಮುದಾಯಗಳು ಸಂಘಟಿತವಾಗಲಿ: ಗುಂಡು ಐನಾಪುರ
ನಾಟಿ ಹಬ್ಬ ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆ