ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ/ಮಂಗಳೂರು
ಶ್ರೀ ಕ್ಷೇತ್ರದಲ್ಲಿ ಜಾತ್ರೆ ಸಂಪನ್ನವಾದರೂ ಜನಜಾತ್ರೆ ಮುಂದುವರಿದಿದೆ. ಸುಬ್ರಹ್ಮಣ್ಯಕ್ಕೆ ಭಾನುವಾರದಂತೆ ಸೋಮವಾರವೂ ಭಕ್ತ ಸಾಗರವೇ ಹರಿದು ಬಂದಿತ್ತು. ಲಕ್ಷಕ್ಕೂ ಅಧಿಕ ಮಂದಿ ಶ್ರೀ ದೇವರ ದರುಶನ ಮಾಡಿ ಪ್ರಸಾದ ಸ್ವೀಕರಿಸಿದರು. ಜಾತ್ರಾ ಸಮಯಕ್ಕಿಂತಲೂ ಅಧಿಕ ಮಂದಿ ಸೋಮವಾರವೂ ಆಗಮಿಸಿದ್ದರು.
ಭಾನುವಾರ ರಾತ್ರಿ ಶ್ರೀ ದೇವರ ಜಾತ್ರಾ ಮಹೋತ್ಸವ ಸಮಾಪನದ ದಿನ ಹಿನ್ನೆಲೆ ನೀರಿನಲ್ಲಿ ಬಂಡಿ ಉತ್ಸವ ನೆರವೇರಿತು. ಈ ಸಂದರ್ಭ ಶ್ರೀ ದೇವಳದ ಹೊರಾಂಗಣ ಪ್ರವೇಶಕ್ಕೂ ಹೆಚ್ಚಿನ ತ್ರಾಸ ಪಡಬೇಕಾಯಿತು.ಶ್ರೀ ದೇವರ ದರುಶನಕ್ಕಾಗಿ ಮಾರುದ್ದದ ಸರದಿ ಸಾಲಿನಲ್ಲಿ ಸಾಗಿ ಬಂದು ಭಕ್ತರು ಶ್ರೀ ದೇವರ ದರುಶನ ಪಡೆದು ಪ್ರಸಾದ ಸ್ವೀಕರಿಸಿದರು. ಶ್ರೀ ದೇವಳದ ಹೊರಾಂಗಣದಲ್ಲಿ ಸುಮಾರು ೮ ಸಾಲುಗಳಲ್ಲಿ ಭಕ್ತರು ಶ್ರೀ ದೇವರ ದರುಶನಕ್ಕೆ ತೆರಳಿದರು. ಷಣ್ಮುಖ ಪ್ರಸಾದ ಭೋಜನ ಶಾಲೆ ಮಾತ್ರವಲ್ಲದೆ ಆದಿಸುಬ್ರಹ್ಮಣ್ಯ ಭೋಜನ ಶಾಲೆಯಲ್ಲಿ ಬಫೆ ಮಾದರಿಯಲ್ಲಿ ಭೋಜನ ಪ್ರಸಾದ ವಿತರಣೆಗೆ ವ್ಯವಸ್ಥೆ ಮಾಡಿತ್ತು. ಸುಬ್ರಹ್ಮಣ್ಯ ಪೊಲೀಸರು ದೇವಳದ ಭದ್ರತಾ ಸಿಬ್ಬಂದಿ, ದೇವಳದ ಸಿಬ್ಬಂದಿ, ಗೃಹರಕ್ಷಕ ದಳದವರು ಭಕ್ತರಿಗೆ ಬೇಕಾದ ಸೂಕ್ತ ಮಾರ್ಗದರ್ಶನವನ್ನು ನೀಡಿದರು.
* ಪುಣ್ಯ ಸ್ನಾನಕ್ಕೂ ಜನಸಾಗರಕುಮಾರಧಾರ ನದಿಯಲ್ಲಿ ಪುಣ್ಯ ಸ್ನಾನ ಮಾಡಲು ಸೋಮವಾರ ಮುಂಜಾನೆ ಭಕ್ತರ ದಂಡೇ ಆಗಮಿಸಿತ್ತು. ಕುಮಾರಧಾರ ಸ್ನಾನಘಟ್ಟವು ಭಕ್ತರಿಂದ ತುಂಬಿ ತುಳುಕಿತ್ತು. ಇಲ್ಲಿ ಭಕ್ತರಿಗೆ ಧ್ವನಿವರ್ಧಕದ ಮೂಲಕ ವಿಶೇಷ ಮಾಹಿತಿಗಳನ್ನು ಬಿತ್ತರಿಸುವ ಕಾರ್ಯವು ನಿರಂತರವಾಗಿ ಶ್ರೀ ದೇವಳದಿಂದ ಮಾಡಲಾಯಿತು.
ದೇವಸ್ಥಾನದ ಒಳಾಂಗಣ, ಹೊರಾಂಗಣ, ದೇವಳದ ಕಲ್ಯಾಣ ಮಂಟಪ, ರಥಬೀದಿ, ಆದಿಸುಬ್ರಹ್ಮಣ್ಯ, ಕುಮಾರಧಾರ ಮೊದಲಾದೆಡೆ ಭಕ್ತಸಾಗರವೇ ಕಂಡು ಬಂತು. ಹೆಚ್ಚಿನ ಪ್ರಮಾಣದಲ್ಲಿ ಜನರು ಸೇರಿದ್ದರೂ ಶ್ರೀ ದೇವಳದ ವತಿಯಿಂದ ವ್ಯವಸ್ಥಿತವಾಗಿ ಪ್ರಸಾದವನ್ನು ಹಾಗೂ ಭೋಜನವನ್ನು ವಿತರಿಸಲಾಯಿತು.ಬೆಳಗ್ಗೆ ೬ ಗಂಟೆಯಿಂದಲೇ ಭಕ್ತರು ಮಾರುದ್ದದ ಸರದಿ ಸಾಲಿನಲ್ಲಿ ತೆರಳಿ ದೇವರ ದರ್ಶನ ಪಡೆದರು. ಆಶ್ಲೇಷ ಬಲಿ ಸೇವೆಗೆ ಮತ್ತು ಸೇವೆಗಳ ಸಂಕಲ್ಪಕ್ಕಾಗಿ ಕೂಡ ಅಧಿಕವಾದ ಸರದಿಯ ಸಾಲು ಕಂಡು ಬಂತು. ಜಾತ್ರೆ ಬಳಿಕ ಸೋಮವಾರ ಪ್ರಧಾನ ಸೇವೆಯಾದ ಸರ್ಪಸಂಸ್ಕಾರ ಆರಂಭವಾದುದರಿಂದ ಆದಿಸುಬ್ರಹ್ಮಣ್ಯ ಸರ್ಪಸಂಸ್ಕಾರ ಯಾಗಶಾಲಾ, ಆದಿಸುಬ್ರಹ್ಮಣ್ಯ ಭೋಜನಶಾಲಾ ಪರಿಸರದಲ್ಲಿ ಭಕ್ತ ಸಂದಣಿ ಅಧಿಕವಾಗಿತ್ತು.
* ದಾಖಲೆ ಪ್ರಮಾಣದ ಅನ್ನದಾನಕುಕ್ಕೆಯಲ್ಲಿ ಅನ್ನದಾನ ಶ್ರೇಷ್ಠವಾಗಿರುವುದರಿಂದ ಸೋಮವಾರವೂ ದಾಖಲೆ ಪ್ರಮಾಣದಲ್ಲಿ ಭಕ್ತರು ಭೋಜನ ಪ್ರಸಾದ ಸ್ವೀಕರಿಸಿದ್ದಾರೆ. ಷಣ್ಮುಖ ಪ್ರಸಾದ ಭೋಜನ ಶಾಲೆ, ಗಣಪತಿ ದೇವಸ್ಥಾನ, ಶೃಂಗೇರಿ ಮಠ ಮತ್ತು ಆದಿಸುಬ್ರಹ್ಮಣ್ಯ ಭೋಜನ ಶಾಲೆಯಲ್ಲಿ ಭಕ್ತರು ಅನ್ನದಾನ ಸ್ವೀಕರಿಸಿದ್ದಾರೆ. ಬೆಳಗ್ಗೆ ೧೦.೩೦ರಿಂದ ಸಂಜೆ ೪.೩೦ರ ತನಕ ನಿರಂತರವಾಗಿ ಭೋಜನ ವಿತರಣೆಯಾಯಿತು. ರಾತ್ರಿ ೭.೩೦ರಿಂದ ೧೧ ಗಂಟೆಯ ತನಕವೂ ಪ್ರಸಾದ ಭೋಜನವನ್ನು ಭಕ್ತರು ಸ್ವೀಕರಿಸಿದರು.
* ಕೊಠಡಿಗಳಿಲ್ಲದೆ ಸಮಸ್ಯೆ:ಶ್ರೀ ದೇವಳದ ವಸತಿ ಗೃಹಗಳು, ಖಾಸಗಿ ವಸತಿಗೃಹಗಳು ತುಂಬಿತ್ತು. ಈ ಕಾರಣದಿಂದಾಗಿ ದೂರದೂರಿನ ಭಕ್ತರು ಸುಳ್ಯ, ಉಪ್ಪಿನಂಗಡಿ, ಪುತ್ತೂರು ಮೊದಲಾದೆಡೆ ಕೊಠಡಿಗಳನ್ನು ಪಡೆದು ವಾಸ್ತವ್ಯ ಹೂಡಿದ್ದರು. ಶ್ರೀ ದೇವಳದಿಂದ ಆದಿಸುಬ್ರಹ್ಮಣ್ಯ ಭೋಜನಶಾಲೆ, ಷಣ್ಮುಖ ಪ್ರಸಾದ ಭೋಜನ ಶಾಲೆ ಮೊದಲಾದೆಡೆ ಭಕ್ತರಿಗೆ ರಾತ್ರಿ ವಾಸ್ತವ್ಯ ಹೂಡಲು ವ್ಯವಸ್ಥೆ ಮಾಡಲಾಗಿತ್ತು. ಹಾಗಿದ್ದರೂ ಇಲ್ಲಿಯೂ ಸ್ಥಳಾವಕಾಶ ಕೊರತೆ ಬಂದಾಗ ರಥಬೀದಿಯಲ್ಲಿ, ನೆರಳಿನ ಚಪ್ಪರದ ಅಡಿಯಲ್ಲಿ, ಕಲ್ಯಾಣ ಮಂಟಪ, ಆಡಳಿತ ಕಚೇರಿ ಬಳಿ ಆಶ್ರಯ ಪಡೆದುಕೊಂಡರು. ಕೊಠಡಿಯ ಸಮಸ್ಯೆಯಿಂದಾಗಿ ಭಕ್ತರು ಹೆಚ್ಚಿನ ತೊಂದರೆ ಪಡಬೇಕಾಯಿತು.ಭಕ್ತರೊಂದಿಗೆ ಅವರನ್ನು ಕರೆತಂದ ವಾಹನಗಳ ಸಂಖ್ಯೆಯು ಅಧಿಕವಾಗಿ ಕ್ಷೇತ್ರದಲ್ಲಿ ಕಂಡು ಬಂದಿತ್ತು. ಈ ಕಾರಣದಿಂದಾಗಿ ಬಿಲದ್ವಾರ ಪಾರ್ಕಿಂಗ್, ಸವಾರಿ ಮಂಟಪ ಪಾರ್ಕಿಂಗ್, ಹನುಮಂತ ಗುಡಿ ಸಮೀಪದ ಪಾರ್ಕಿಂಗ್, ಹಳೆಯ ಅರಣ್ಯ ಇಲಾಖೆ ಕಚೇರಿ ಬಳಿಯ ಪಾರ್ಕಿಂಗ್, ಅಕ್ಷರಾ ವಸತಿ ಗೃಹದ ಸಮೀಪದ ಪಾರ್ಕಿಂಗ್, ಪ್ರಾಥಮಿಕ ಶಾಲಾ ಆಟದ ಮೈದಾನ, ಆದಿಸುಬ್ರಹ್ಮಣ್ಯ, ವಾಹನಗಳಿಂದ ತುಂಬಿತ್ತು. ಪಾರ್ಕಿಂಗ್ ಸ್ಥಳ ತುಂಬಿದ ಕಾರಣ ಅನಿವಾರ್ಯವಾಗಿ ಕುಮಾರಧಾರದಿಂದ ಇಂಜಾಡಿ ತನಕ, ಬೈಪಾಸ್ ರಸ್ತೆ, ನೂಚಿಲ ರಸ್ತೆ, ಸರಕಾರಿ ಬಸ್ ನಿಲ್ದಾಣ ಬಳಿ ರಸ್ತೆ, ಆದಿಸುಬ್ರಹ್ಮಣ್ಯ ರಸ್ತೆ, ದೇವರಗದ್ದೆ ರಸ್ತೆಗಳ ಇಕ್ಕೆಲಗಳಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಲಾಗಿತ್ತು. ಅಧಿಕ ವಾಹನಗಳ ಆಗಮನದಿಂದಾಗಿ ಆಗಾಗ್ಗೆ ರಸ್ತೆಯಲ್ಲಿ ವಾಹನ ದಟ್ಟಣೆ ಕಂಡು ಬರುತ್ತಿತ್ತು.