ತುಳುವಿಗೆ ಮಾನ್ಯತೆ ನೀಡಲು ಗಂಭೀರ ಪರಿಶೀಲನೆ: ಸಿಎಂ

KannadaprabhaNewsNetwork | Published : Jan 12, 2025 1:19 AM

ಸಾರಾಂಶ

ಸುಪ್ರೀಂ ಕೋರ್ಟ್ ಈ ಹಿಂದೆ ಕಂಬಳವನ್ನು ನಿಷೇಧಿಸಿತ್ತು. ಇದನ್ನು ತೆರವುಗೊಳಿಸಲು ಸರ್ಕಾರ ಶ್ರಮಿಸಿದ್ದರಿಂದ ಕಂಬಳ ಮತ್ತೆ ನಡೆಯುವಂತಾಗಿದೆ. ಇದು ಕರಾವಳಿಯ ಜನಪದ ಸಂಸ್ಕೃತಿಗೆ ನಮ್ಮ ಸರ್ಕಾರ ಕೊಟ್ಟ ಕೊಡುಗೆ ಎಂದು ಸಿದ್ದರಾಮಯ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ರಾಜ್ಯಭಾಷೆಯನ್ನಾಗಿ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಗಂಭೀರ ಪರಿಶೀಲನೆ ನಡೆಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ವಿಧಾನಸಭೆ ಸ್ಪೀಕರ್ ಯು.ಟಿ‌. ಖಾದರ್ ನೇತೃತ್ವದಲ್ಲಿ, ನರಿಂಗಾನ ಕಂಬಳ ಸಮಿತಿ ವತಿಯಿಂದ ಮೂರನೇ ವರ್ಷದ ನರಿಂಗಾನ ಕಂಬಳೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಅವರ ಬೇಡಿಕೆಯಂತೆ ತುಳು ಭಾಷೆಗೆ ಮಾನ್ಯತೆ ನೀಡುವ ವಿಚಾರವನ್ನು ಗಂಭೀರವಾಗಿ ಪರಿಗಣಿಸುವುದಾಗಿ ಭರವಸೆ ನೀಡಿದರು.ತುಳುನಾಡಿನ ಸಾಂಪ್ರದಾಯಿಕ ಕ್ರೀಡೆಯಾಗಿ ಬಹಳಷ್ಟು ಜನಪ್ರಿಯತೆ ಪಡೆದಿರುವ ಕಂಬಳವನ್ನು ಉಳಿಸಿ ಬೆಳೆಸುವ ಪ್ರಯತ್ನದ ಭಾಗವಾಗಿ ಪ್ರತಿ ಕಂಬಳಕ್ಜೂ ತಲಾ ೫ ಲಕ್ಷ ರು. ಅನುದಾನವನ್ನು ನಮ್ಮ ಸರ್ಕಾರ ನೀಡಿದೆ. ಬೆಂಗಳೂರು ನಗರದೊಳಗೆ ಸರ್ಕಾರದ 1.5 ಕೋಟಿ ರು. ಅನುದಾನದೊಂದಿಗೆ ಕಂಬಳ ಆಯೋಜನೆ ಮಾಡಲಾಗಿದೆ. ಕಂಬಳ‌ ಕ್ರೀಡೆ ಉಳಿಸಿ ಬೆಳೆಸಲು ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಹೇಳಿದರು.ಕ್ರೀಡೆಗೆ ಯಾವ ಜಾತಿ, ಧರ್ಮ ಇಲ್ಲ. ಎಲ್ಲ ಜಾತಿ, ಧರ್ಮದವರು ಸೇರಿಕೊಂಡು ಕಂಬಳ ಕ್ರೀಡೆಯನ್ನು ಆಯೋಜಿಸಿಕೊಂಡು ಬರುತ್ತಿದ್ದಾರೆ. ಕಂಬಳ ನಡೆಯುವ ಗ್ರಾಮದ ಸುತ್ತಲಿನ ಎಲ್ಲ ಹಳ್ಳಿಗಳ ಜನ ಭಾಗವಹಿಸುತ್ತಾರೆ. ಬಹುತ್ವದ ದೇಶ ಇದು, ಎಲ್ಲರೂ ಪರಸ್ಪರ ಪ್ರೀತಿಸಬೇಕೇ ಹೊರತು ದ್ವೇಷ ಮಾಡಬಾರದು ಎಂದು ಕಿವಿಮಾತು ಹೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಸಿದ್ಧಾಂತದಲ್ಲಿ ನಂಬಿಕೆ ಇಟ್ಟುಕೊಂಡು ಸರ್ಕಾರ ಕೆಲಸ ಮಾಡುತ್ತಿದೆ. ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಪ್ರಯತ್ನವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದರು.ಐದು ಗ್ಯಾರಂಟಿ ಯೋಜನೆಗಳನ್ನು ಯಾವ ಜಾತಿ ಧರ್ಮ ಆಧಾರಿತವಾಗಿ ಮಾಡಿಲ್ಲ. ಎಲ್ಲ ಜಾತಿ ಧರ್ಮದ ಬಡವರಿಗಾಗಿ ಈ ಕಾರ್ಯಕ್ರಮಗಳನ್ನು ನೀಡುತ್ತಿದ್ದೇವೆ. 1.21 ಕೋಟಿ ಮಹಿಳೆಯರಿಗೆ ಆರ್ಥಿಕ ಶಕ್ತಿ ಕೊಡುವ ಮೂಲಕ‌ ಅವರ ಆರ್ಥಿಕ‌, ಸಾಮಾಜಿಕ ಶಕ್ತಿ ಹೆಚ್ಚಿಸುವ ಕಾರ್ಯಕ್ರಮಗಳನ್ನು ಇಡೀ ದೇಶದಲ್ಲಿ ಮೊದಲಿಗೆ ಕೊಟ್ಟಿದ್ದು ಕಾಂಗ್ರೆಸ್ ಸರ್ಕಾರ. ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಸಿ, ಇದು ಕೇಂದ್ರದ ಯೋಜನೆಯಾದರೂ ತಿಂಗಳಿಗೆ 10 ಸಾವಿರ ರು. ಗೌರವಧನ ಸಿಗುವಂತೆ ಮಾಡುವ ಜವಾಬ್ದಾರಿಯನ್ನು ನಮ್ಮ ಸರ್ಕಾರ ವಹಿಸಿಕೊಂಡಿದೆ ಎಂದು ಹೇಳಿದರು.ಕಂಬಳಕ್ಕೆ ಮರುಚಾಲನೆ ನೀಡಿದ್ದೇವೆ:ಸುಪ್ರೀಂ ಕೋರ್ಟ್ ಈ ಹಿಂದೆ ಕಂಬಳವನ್ನು ನಿಷೇಧಿಸಿತ್ತು. ಇದನ್ನು ತೆರವುಗೊಳಿಸಲು ಸರ್ಕಾರ ಶ್ರಮಿಸಿದ್ದರಿಂದ ಕಂಬಳ ಮತ್ತೆ ನಡೆಯುವಂತಾಗಿದೆ. ಇದು ಕರಾವಳಿಯ ಜನಪದ ಸಂಸ್ಕೃತಿಗೆ ನಮ್ಮ ಸರ್ಕಾರ ಕೊಟ್ಟ ಕೊಡುಗೆ ಎಂದು ಸಿದ್ದರಾಮಯ್ಯ ಹೇಳಿದರು.ಉಳ್ಳಾಲಕ್ಕೆ ಸಾವಿರ ಕೋಟಿ ಅನುದಾನ:ಕರ್ನಾಟಕ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ, ಉಳ್ಳಾಲ ಕ್ಷೇತ್ರಕ್ಕೆ ಇಷ್ಟು ಚಿಕ್ಕ ಅವಧಿಯಲ್ಲಿ ಒಂದು ಸಾವಿರ ಕೋಟಿ ರುಪಾಯಿಗೂ ಅಧಿಕ ಅನುದಾನವನ್ನು ಸರ್ಕಾರ ನೀಡಿದ್ದು, ಈ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿದೆ. ಕೇವಲ ರಸ್ತೆ ಅಭಿವೃದ್ಧಿಗಾಗಿ ಪ್ರತಿ ಗ್ರಾಮಕ್ಕೆ ಒಂದೂವರೆ ಕೋಟಿ ರೂಪಾಯಿಗಳಷ್ಟು ಅನುದಾನ ದೊರೆತಿದೆ. ನಾನು ಸ್ಪೀಕರ್ ಆಗಿರುವ ಕಾರಣದಿಂದಲೇ ಇಷ್ಟು ದೊಡ್ಡ ಅನುದಾನ ಬರಲು ಸಾಧ್ಯವಾಗಿದೆ ಎಂದು ಹೇಳಿದರು.ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಪೌರಾಡಳಿತ ಸಚಿವ ರಹೀಮ‌್ ಖಾನ್, ಶಾಸಕ ಅಶೋಕ್ ರೈ, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ, ಮಂಜುನಾಥ ಭಂಡಾರಿ, ನಸೀರ್ ಅಹಮದ್, ಮಾಜಿ ಸಚಿವ ರಮಾನಾಥ ರೈ, ಪ್ರಮುಖರಾದ ಕಣಚೂರು ಮೋನು, ಹರೀಶ್ ಕುಮಾರ್, ರಕ್ಷಿತ್ ಶಿವರಾಂ, ಇನಾಯತ್ ಅಲಿ, ಪ್ರಶಾಂತ್ ಕಾಜವ, ಶಾಹುಲ್ ಹಮೀದ್, ಆರ್.ಪದ್ಮರಾಜ್, ಶಕುಂತಳಾ ಶೆಟ್ಟಿ ಮತ್ತಿತರರು ಇದ್ದರು.ಗೇರು ನಿಗಮ ಅಅಧ್ಯಕ್ಷೆ ಮಮತಾ ಗಟ್ಟಿ ನೇತೃತ್ವದಲ್ಲಿ ಮಹಿಳೆಯರು ಆರತಿ ಬೆಳಗಿ ಸಿಎಂ ಅವರನ್ನು ಬರಮಾಡಿಕೊಂಡರು. ಹುಲಿವೇಷ ಕುಣಿತವನ್ನು ಸಿಎಂ ವೀಕ್ಷಿಸಿದರು. ವೇದಿಕೆಯಲ್ಲೆ ತುಳುನಾಡಿನ‌ ಶೈಲಿಯ ಪೇಟಾವನ್ನು ಸಿಎಂಗೆ ಕಟ್ಟಲಾಯಿತು.ನರಿಂಗಾನ ಕಂಬಳ‌ ಸಮಿತಿ ಕಾರ್ಯಾಧ್ಯಕ್ಷ ಪ್ರಶಾಂತ್ ಕಾಜವ ಮಿತ್ತಕೋಡಿ ಸ್ವಾಗತಿಸಿದರು.

ಖಾದರ್ ಸ್ಪೀಕರ್ ಆಗಲು ಒಪ್ಪಿರಲಿಲ್ಲ: ಸಿಎಂಯುಟಿ ಖಾದರ್ ಅವರು ವಿಧಾನಸಭೆ ಸ್ಪೀಕರ್ ಆಗಲು ಆರಂಭದಲ್ಲಿ ಒಪ್ಪಿರಲಿಲ್ಲ. ಆದರೆ ಹೈಕಮಾಂಡ್‌ನವರು ಖಾದರ್ ಅವರೇ ಈ ಹುದ್ದೆಗೆ ಯೋಗ್ಯ ವ್ಯಕ್ತಿ ಎನ್ನುವ ತೀರ್ಮಾನ ಮಾಡಿದ್ದರು. ಈ ವಿಚಾರವನ್ನು ನಾನು ಖಾದರ್ ಅವರಲ್ಲಿ ಹೇಳಿದಾಗ ತನ್ನನ್ನು ಮಂತ್ರಿ ಮಾಡಿ, ಈ ಹುದ್ದೆ ಬೇಡ ಎಂದಿದ್ದರು. ಆದರೆ ಈಗ ಪ್ರೋಟೋಕಾಲ್ ಪ್ರಕಾರ ಮುಖ್ಯಮಂತ್ರಿಯಾದ ನನಗಿಂತ ಖಾದರ್ ಅವರ ಹುದ್ದೆ ದೊಡ್ಡದಾಗಿದೆ. ರಾಜಕಾರಣದಲ್ಲಿ ಯಾವುದೂ ಶಾಶ್ವತವಲ್ಲ ಎಂದು ಸಿದ್ದರಾಮಯ್ಯ ಹೇಳಿದರು.ಯು.ಟಿ.ಖಾದರ್ ಅವರು ಸ್ಪೀಕರ್ ಆದ ಬಳಿಕ ತಮ್ಮ ಕ್ಷೇತ್ರದ ಅಭಿವೃದ್ಧಿಗೆ 1000 ಕೋಟಿಯಷ್ಟು ಅನುದಾನ ತಂದಿದ್ದಾರೆ. ಕ್ಷೇತ್ರದ ಬಗ್ಗೆ ಅವರಿಗೆ ಅಷ್ಟೊಂದು ಪ್ರೀತಿ ಇದೆ ಎಂದರು.ಕೋಣಗಳ ಮೈದಡವಿದ ಮುಖ್ಯಮಂತ್ರಿಉದ್ಘಾಟನಾ ಸಮಾರಂಭದ ಬಳಿಕ ಸಿಎಂ ಸಿದ್ದರಾಮಯ್ಯ ಅವರು ಕಂಬಳ ಕರೆಯ ಕಡೆಗೆ ತೆರಳಿ ಕೋಣಗಳ ಮೈ ಸವರಿ ಫೋಟೋಗೆ ಪೋಸ್ ನೀಡಿ ಸಂಭ್ರಮಿಸಿದರು. ಯುಟಿ ಖಾದರ್ ಅವರು ಮುಖ್ಯಮಂತ್ರಿಗೆ ಕಂಬಳದ ಬೆಳ್ಳಿನೊಗ ಹಾಗೂ ಬೆಳ್ಳಿಯ ಕಂಬಳ ಬೆತ್ತ ನೀಡಿದ್ದು, ಬೆತ್ತ ಹಿಡಿದು ಸಿಎಂ ಫೋಸ್ ನೀಡಿದರು.

ಅಣ್ಣಾಮಲೈರಿಂದ ಏನು ನಿರೀಕ್ಷೆ ಮಾಡಲು ಸಾಧ್ಯ: ಸಿಎಂನಕ್ಸಲರ ಶರಣಾಗತಿ ಕುರಿತು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಣ್ಣಾಮಲೈ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿದ್ದ ಸಂದರ್ಭ ಸರ್ಕಾರಿ ನೌಕರರಾಗಿದ್ದರು. ಈಗ ರಾಜಕೀಯದಲ್ಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಅವರಿಂದ ನಾವೇನು ನಿರೀಕ್ಷೆ ಮಾಡಲು ಸಾಧ್ಯ ಎಂದು ಟೀಕಿಸಿದ್ದಾರೆ.

ಉಳ್ಳಾಲ ತಾಲೂಕು ನರಿಂಗಾನ ಕಂಬಳೋತ್ಸವದಲ್ಲಿ ಭಾಗವಹಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಆರು ನಕ್ಸಲರು ಶರಣಾಗಿದ್ದು ಅವರನ್ನು ಕಾಡಿನಿಂದ ನ್ಯಾಯಾಲಯಕ್ಕೆ ಕರೆತಂದು, ಅಲ್ಲಿಂದ ನಾಡಿಗೆ ಕರೆತರುವ ಪ್ರಯತ್ನ ಮಾಡಲಾಗಿದೆ. ನಕ್ಸಲರು ಶಸ್ತ್ರಾಸ್ತ್ರ ಹೋರಾಟ ನಿಲ್ಲಿಸಿ ಮುಖ್ಯವಾಹಿನಿಗೆ ಬಂದಿದ್ದಾರೆ. ಶಾಂತಿಯುತ ಹೋರಾಟಕ್ಕೆ ನಮ್ಮ ತಕರಾರೇನಿಲ್ಲ. ಸಂವಿಧಾನದಲ್ಲಿ ಶಾಂತಿಯುತ ಹೋರಾಟಕ್ಕೆ ಅವಕಾಶವಿದ್ದು, ಅದರಂತೆ ಹೋರಾಟ ಮಾಡಿದರೆ ಅದಕ್ಕೆ ಸಹಕಾರವಿದೆ ಎಂದು ಮುಖ್ಯಮಂತ್ರಿ ಹೇಳಿದರು.ಕಂಬಳದ ಕುರಿತು ಯೋಜನೆ ರೂಪಿಸುವ ಕುರಿತು ಪರಿಶೀಲಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Share this article