ಕನ್ನಡಪ್ರಭ ವಾರ್ತೆ ಮೂಡಲಗಿ
ಪಟ್ಟಣದ ಆರ್‌ಡಿಎಸ್ ಶಿಕ್ಷಣ ಸಂಸ್ಥೆ ಆವರಣದ ಪ್ರೊ.ಕೆ.ಜಿ. ಕುಂದಣಗಾರ ವೇದಿಕೆಯಲ್ಲಿ ಬೆಳಗಾವಿ ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.
ಮಾತೃಭಾಷೆಯಲ್ಲಿ ಓದುವ, ಬರೆಯುವ, ಮಾತನಾಡುವ ಮಗು ಸಹಜವಾಗಿಯೇ ಕಲಿತದ್ದನ್ನೆಲ್ಲ ಅರಗಿಸಿಕೊಂಡು ಜ್ಞಾನ, ವಿಜ್ಞಾನ, ತಂತ್ರಜ್ಞಾನಗಳಲ್ಲಿ ನೈಜ ನೈಪುಣ್ಯತೆ ಮೆರೆಯುತ್ತದೆ. ಸೃಜನಾತ್ಮಕ ಶಕ್ತಿಯನ್ನೂ ಪಡೆಯುತ್ತದೆ. ಇವರಿಂದ ಕನ್ನಡ ಕಲಿಕಾ ಮಾಧ್ಯಮವನ್ನೇ ಕಸಿದುಕೊಂಡರೆ ಭಾಷೆ ಇಲ್ಲ, ಭಾಷೆ ಇಲ್ಲವಾದರೆ ಸಂಸ್ಕೃತಿಯಿಲ್ಲ, ಸಂಸ್ಕೃತಿ ಇಲ್ಲವಾದರೆ ಬದುಕೇ ಇಲ್ಲ. ಅದು ಇದ್ದೂ ಸತ್ತಂತಹ ಸ್ಥಿತಿ. ಹೀಗಾಗಿ ಕನ್ನಡ ಭಾಷೆ ಉಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಗಂಭೀರವಾಗಿ ಚಿಂತನೆ ಮಾಡಬೇಕಿದೆ ಎಂದು ಹೇಳಿದ ಅವರು, ಖಾಸಗಿ ಶಾಲೆಗಳ ಆಂಗ್ಲಭಾಷಾ ವ್ಯಾಮೋಹವೇ ಈ ಎಲ್ಲ ಸಮಸ್ಯೆಯ ಮೂಲ. ಅದಕ್ಕೆ ಭಾಷಾ ಮಾಧ್ಯಮಗಳು ಹಿಡಿದ ವಿವಾದದ ಹಾದಿಯೂ ಕಾರಣ. 1ರಿಂದ 4ನೇ ತರಗತಿವರೆಗೆ ಕನ್ನಡವೇ ಕಡ್ಡಾಯವಾಗಿ ಶಿಕ್ಷಣ ಮಾಧ್ಯಮವಾಗಬೇಕು. ಆದರೆ, ಸರಿಯಾಗಿ ಅನುಷ್ಠಾನ ಆಗುತ್ತಿಲ್ಲ. ಕನ್ನಡ ಕಡ್ಡಾಯದ ವಿರುದ್ಧ ಬಂದಿರುವ ಸುಪ್ರೀಂ ಕೋರ್ಟ್ ತೀರ್ಪು ಕರ್ನಾಟಕದ ಪಾಲಿಗೆ ಮರಣ ಶಾಸನವಾಗಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಬಹುಪಾಲು ಉದ್ಯಮಗಳು ಹೊರಗಿನವರವುಗಳೇ ಆಗಿದ್ದು, ಕನ್ನಡಿಗರು ಉದ್ಯೋಗ ವಂಚಿತರಾಗಿದ್ದಾರೆ. ಇದನ್ನು ಸರಿಪಡಿಸಿ ಆಯೋಗಗಳು ನೀಡಿರುವ ವರದಿಯನ್ನು ಕಟ್ಟುನಿಟ್ಟಾಗಿ ಅಲ್ಲದಿದ್ದರೂ ತುಸು ಮಟ್ಟಿಗಾದರೂ ಅನುಷ್ಠಾನಕ್ಕೆ ತರಬೇಕು ಎಂದು ಸಲಹೆ ನೀಡಿದರು.ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಾಳಾಸಾಹೇಬ ಲೋಕಾಪುರ ಮಾತನಾಡಿ, ಕನ್ನಡ ಭಾಷೆ ಇಂದು ಬಿಕ್ಕಟ್ಟಿನಲ್ಲಿದೆ. ವ್ಯವಹಾರ, ಸಂವಹನದಲ್ಲಿ ಕನ್ನಡ ಮರೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಸಾಪ ಜಿಲ್ಲಾಧ್ಯಕ್ಷೆ ಮಂಗಳಾ ಮೆಟಗುಡ್ಡ ಆಶಯ ನುಡಿಗಳನ್ನಾಡಿದರು. ತಾಲೂಕು ಅಧ್ಯಕ್ಷ ಡಾ.ಸಂಜಯ ಶಿಂಧಿಹಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸ್ಪರ್ಧಾತ್ಮಕ ಜಗತ್ತಿನಲ್ಲಿ ಅನೇಕ ವಿಷಯಗಳ ಮಧ್ಯೆ ಕನ್ಮಡ ಭಾಷೆಯನ್ನು ಮರೆಯುವಂತಾಗಬಾರದು.ಬೇರೆ ಭಾಷೆಯ ಮಾತನಾಡಬೇಕಾದ ಅನಿವಾರ್ಯತೆ ಇದೆ. ಪ್ರಾದೇಶಿಕ ಭಾಷೆಗೆ ಆದ್ಯತೆ ನೀಡುವುದರ ಜತೆಗೆ ಉಳಿದ ಭಾಷೆಗಳನ್ನು ಕಲಿಯಬೇಕು. ಕನ್ನಡ ಶಿಕ್ಷಣ ಸಂಸ್ಥೆಗಳನ್ನು ಉಳಿಸಬೇಕಾದ ಅಗತ್ಯವಿದೆ.
-ಈರಣ್ಣ ಕಡಾಡಿ ರಾಜ್ಯಸಭಾ ಸದಸ್ಯ