ಅಶೋಕ ಡಿ. ಸೊರಟೂರ
ಪಟ್ಟಣದ ಉಪನೋಂದಣಿ ಕಚೇರಿಯಲ್ಲಿ ಕಳೆದ 3- 4 ದಿನಗಳಿಂದ ಸರ್ವರ್ ಸಮಸ್ಯೆಯಿಂದಾಗಿ ಒಂದೂ ಆಸ್ತಿಯೂ ನೋಂದಣಿಯಾಗದೆ ಸಾರ್ವಜನಿಕರು ಕಾಗದಪತ್ರ ಹಿಡಿದು ಅಲೆಯುವಂತಾಗಿದೆ. ಬೇರೆ ಬೇರೆ ಗ್ರಾಮಗಳಿಂದ ವಿವಿಧ ಕಾರ್ಯಗಳಿಗೆ ಉಪನೋಂದಣಿ ಕಚೇರಿಗೆ ಆಗಮಿಸಿದ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳು ಆಗದೆ ಬರಿಗೈಯಲ್ಲಿ ವಾಪಸ್ಸಾಗುವಂತಾಗಿದೆ. ಸರ್ವರ್ ಇಲ್ಲದೆ ಕಂಪ್ಯೂಟರ್ ಮುಂದೆ ಕುಳಿತು ಉಪನೋಂದಣಿ ಕಚೇರಿಯ ಸಿಬ್ಬಂದಿ ಸುಮ್ಮನೇ ಕಾಲ ಕಳೆಯುಂತಾಗಿದೆ.
ಇಂಟರ್‌ನೆಟ್ ಜಾಲವನ್ನು ಕಳೆದ 3- 4 ದಿನಗಳಿಂದ ಸರಿಪಡಿಸಲು ಆಗದೆ ಇರುವುದು ಸಾರ್ವಜನಿಕರಿಗೆ ಸಾಕಷ್ಟು ಕಿರಿಕಿರಿ ಉಂಟು ಮಾಡಿದೆ. ಆಸ್ತಿ ನೋಂದಣಿ ಸೇರಿದಂತೆ ವಿವಿಧ ಕಾರ್ಯಗಳು ಮನೆ ಮಠಗಳನ್ನು ಬಿಟ್ಟು ಬಂದ ಸಾರ್ವಜನಿಕರು ಕಚೇರಿಯ ಗೋಡೆಗಳನ್ನು ನೋಡುತ್ತ ಕುಳಿತುಕೊಳ್ಳುವಂತಾಗಿದೆ.ವಿವಿಧ ಕಾರ್ಯಗಳಿಗೆ ಬ್ಯಾಂಕ್‌ನಲ್ಲಿ ಮಾಡಿದ ಸಾಲದ ಬೋಜಾ ಪಹಣಿಯಲ್ಲಿ ದಾಖಲಾಗಿರುತ್ತದೆ. ಈ ಬೋಜಾವನ್ನು ಪಹಣಿಯಿಂದ ತೆಗೆದುಹಾಕಲು ಈಗ ಹೊಸ ವ್ಯವಸ್ಥೆ ಮಾಡಿದ್ದಾರೆ. ಈ ವ್ಯವಸ್ಥೆಯಲ್ಲಿ ನೀವು ಬೋಜಾ ಕಡಿಮೆ ಮಾಡಲು ನೋಂದಣಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಿ ಬ್ಯಾಂಕ್ ಮ್ಯಾನೇಜರ್ ಅವರ ಮೊಬೈಲ್‌ಗೆ ಬರುವ ಒಟಿಪಿ ಪಡೆದು ನೋಂದಾಯಿಸಬೇಕು. ಹೀಗೆ ಸಾಕಷ್ಟು ಕಿರಿಕಿರಿ ಮಾಡುವ ವೇಳೆ ಸರ್ವರ್ ಸಮಸ್ಯೆ ಉಂಟಾಗಿ ಪದೇ ಪದೇ ಮ್ಯಾನೇಜರ್ ಒಟಿಪಿ ಹೇಳುವ ಕಿರಿಕಿರಿಯಿಂದ ಕೆಲವು ಸಲ ಫೋನ್ ಪಿಕ್ ಮಾಡುವುದಿಲ್ಲ. ಬ್ಯಾಂಕಿನಲ್ಲಿನ ಸಮಸ್ಯೆ ಬಗೆಹರಿಸಲು ಪರದಾಡುತ್ತಿರುವ ಮ್ಯಾನೇಜರ್ ಅವರಿಗೆ ಒಟಿಪಿ ಕೇಳುವ ರೈತರಿಗೆ ಉತ್ತರಿಸಲು ಆಗುವುದಿಲ್ಲ. ಸರ್ಕಾರ ಇಂತಹ ಸಮಸ್ಯೆಗಳ ಬಗ್ಗೆ ಪುನರ್ ಪರಿಶೀಲಿಸಿ ಅಧಿಕಾರಿ ಹಾಗೂ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸುವ ಕಾರ್ಯ ಮಾಡಿ ಇನ್ನಷ್ಟು ಸರಳೀಕರಣಗೊಳಿಸುವುದು ಸೂಕ್ತ ಎಂದು ಸಾರ್ವಜನಿಕರು ತಮ್ಮ ಅಳಲು ತೋಡಿಕೊಂಡರು.
ಕಳೆದ 3- 4 ದಿನಗಳಿಂದ ಉಪನೋಂದಣಿ ಕಚೇರಿಗೆ ಆಸ್ತಿ ಖರೀದಿ ಕಾಗದ ಮಾಡಿಸಲು ಬಂದು ಹೋಗುತ್ತಿದ್ದೇವೆ. ಉಪನೋಂದಣಿ ಕಚೇರಿಯಲ್ಲಿ ಸರ್ವರ್ ಸಮಸ್ಯೆಯಿಂದ ಯಾವುದೇ ಕೆಲಸವಾಗುತ್ತಿಲ್ಲ. ಕಳೆದ 3-4 ದಿನಗಳಿಂದ ಹೆಂಡತಿ ಮಕ್ಕಳನ್ನು ಕರೆದುಕೊಂಡು ಬಂದು ಇಲ್ಲಿ ಕುಳಿತು ವಾಪಸ್ ಹೋಗುತ್ತಿದ್ದೇವೆ. ಇದರಿಂದ ಸಮಯ, ಹಣ ವ್ಯರ್ಥವಾಗುತ್ತಿದ್ದರೂ ಇದರೆ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಈ ಕುರಿತು ಅಧಿಕಾರಿಗಳನ್ನು ಕೇಳಿದರೆ ಸರ್ವರ್ ಸಮಸ್ಯೆ ಎಲ್ಲ ಕಡೆ ಇರುವುದರಿಂದ ನಮ್ಮಿಂದ ಏನೂ ಮಾಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಸರ್ಕಾರ ಕೂಡಲೆ ನೋಂದಣಿ ಕಚೇರಿಯಲ್ಲಿನ ಸರ್ವರ್ ಸಮಸ್ಯೆ ಕೂಡಲೆ ಬಗೆಹರಿಸಬೇಕು ಎಂದು ಪುರಸಭೆಯ ಮಾಜಿ ಸದಸ್ಯ ನಾಗಪ್ಪ ಓಂಕಾರಿ ಹಾಗೂ ರವಿ ಬಸವರಾಜ ಬೂದಿಹಾಳ ಆಗ್ರಹಿಸಿದರು.