ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಆಹಾರ ಇಲಾಖೆಯು ಸರ್ವರ್ ಮೇಲ್ದಜೆಗೆ ಏರಿಸುತ್ತಿರುವ ಹಿನ್ನೆಲೆಯಲ್ಲಿ ಆಹಾರ ವಿತರಣೆಗೆ ಸರ್ವರ್ ಇಲ್ಲದೆ ನ್ಯಾಯಬೆಲೆ ಅಂಗಡಿ ಮಾಲೀಕರು ಪರದಾಡುತ್ತಿದ್ದರೆ, ಮತ್ತೊಂದೆಡೆ ಪಡಿತರ ಚೀಟಿದಾರರು ಸಮಯಕ್ಕೆ ಅಕ್ಕಿ ಸಿಗದೆ ಪರಿತಪಿಸುವಂತಾಗಿದೆ.ಅಕ್ಟೋಬರ್ ಮುಗಿಯುತ್ತಾ ಬಂದರೂ ಇದುವರೆಗೂ ಜಿಲ್ಲೆ ಸೇರಿದಂತೆ ರಾಜ್ಯದಾದ್ಯಂತ ಕಾರ್ಡು ದಾರರಿಗೆ ಅನ್ನಭಾಗ್ಯ ಯೋಜನೆಯ ಅಕ್ಕಿಸಿಕ್ಕಿಲ್ಲ, ಅ.21ರ ಬಳಿಕ ಸರ್ವರ್ ಲಭ್ಯವಾಗಲಿದೆ ನಂತರ ಅಕ್ಕಿ ವಿತರಿಸ ಬಹುದು ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದರು. ಆದರೆ ತಿಂಗಳಾಂತ್ಯ ಸಮೀಪಿಸುತ್ತಿದ್ದರೂ ಅಕ್ಕಿ ಪೂರೈಸಿಲ್ಲ.ಪಡಿತರ ವಿತರಣೆ ವಿಳಂಬಸೋಮವಾರದಿಂದ ನ್ಯಾಯಬೆಲೆ ಅಂಗಡಿಗಳು ತೆಗೆದಿದ್ದರಿಂದ ಪಡಿತರ ಅಕ್ಕಿ ಸಿಗುತ್ತದೆ ಎಂದು ಬೆಳಗ್ಗೆಯಿಂದ ಕಾದವರಲ್ಲಿ ಕೆಲವರಿಗೆ ಸಂಜೆಯ ವೇಳೆಗೆ ಸಿಕ್ಕಿದೆ. ಉಳಿದವರು ಪಡಿತರ ಸಿಗದೆ ವಾಪಸ್ಸಾದರು. ಮಂಗಳವಾರವೂ ಸಹಾ ಇದೆ ತರಹ ಪುನರಾವರ್ತನೆಯಾಯಿತು.
ಸರ್ವರ್ ಪ್ರಾಯೋಗಿ ಹಂತದಲ್ಲಿದೆ. ಇದರಿಂದ ಪಡಿತರದಲ್ಲಿ ಸಿಗುವ ಅಕ್ಕಿಯನ್ನೇ ನಂಬಿಕೊಂಡಿರುವ ಬಡವರಿಗೆ ಅಕ್ಕಿ ಸಿಗದೆ ವಂಚಿತರಾಗುವಂತಾಗಿದೆ. ಇದರಿಂದ ನ್ಯಾಯಬೆಲೆ ಅಂಡಗಿಗಳ ಮಾಲೀಕರೂ ಆತಂಕಗೊಳ್ಳುವಂತಾಗಿದೆ. ತಿಂಗಳಕೊನೆಯಲ್ಲಿ ಹೇಗಪ್ಪ ಆಹಾರಪದಾರ್ಥಗಳನ್ನು ವಿತರಿಸುವುದು ಎಂಬ ಚಿಂತೆಗೀಡಾಗಿದ್ದಾರೆ. ಪಡಿತರ ಅಂಗಡಿಗಳಿಗೆ ಬೀಗಸರ್ವರ್ ಸಮಸ್ಯೆಯಿಂದಾಗಿ ಪಡಿತರ ಅಂಗಡಿಗಳಿಗೆ ಬೀಗ ಜಡಿದಿದ್ದೇವೆ. ರಾಗಿ ಗೋದಾಮಿನಲ್ಲಿ ದಾಸ್ತಾನಿಲ್ಲವೆಂದು ಮೊದಲು 15 ದಿನ ಅಕ್ಕಿ ಎತ್ತುವಳಿಗೆ ಅವಕಾಶ ನೀಡಿಲ್ಲ. ಬಳಿಕ ಮಳೆ ಕಾರಣದಿಂದ ರಾಗಿ ಸಹ ಹಾಸನದಿಂದ ನಗರಕ್ಕೆ ಬಾರದೆ ಮತ್ತಷ್ಟು ವಿಳಂಬವಾಯಿತು. ನಮಗೆ ಮೊದಲಿದ್ದ ಹಳೇ ಸರ್ವರ್ ನೀಡಿದರೆ ಉತ್ತಮ ಅದರಿಂದ ಕಾರ್ಡ್ ದಾರರಿಗೆ ಪಡಿತರ ವಿತರಿಸಿ ನೆಮ್ಮದಿಯಾಗಿರಬಹುದು. ಹೊಸ ಸರ್ವರ್ ನಿಂದ ಜನರ ಬಳಿ ಬೈಸಿಕೊಳ್ಳುವುದೇ ಆಗಿದೆ ಎಂಬುದು ಬಹುತೇಕ ಪಡಿತರ ವಿತರಕರ ಅಭಿಪ್ರಾಯವಾಗಿದೆ.
ಇತ್ತ ಆಹಾರ ಇಲಾಖೆ ಅಧಿಕಾರಿಗಳು ಮಾತ್ರ ಸಮಸ್ಯೆ ನೀಗಿಸಲು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ ಕಾಯಿರಿ ಎಂಬ ಉತ್ತರ ನೀಡುತ್ತಿದ್ದಾರೆ. ಆದರೆ ಯಾವಾಗ ಹೊಸ ಸರ್ವರ್ ಕಾರ್ಯರೂಪಕ್ಕೆ ಬರಲಿದೆ ಎಂಬುದನ್ನು ಸ್ಪಷ್ಟವಾಗಿಲ್ಲ.