ಕನ್ನಡಪ್ರಭ ವಾರ್ತೆ ಕಮಲನಗರರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಗೃಹಲಕ್ಷ್ಮೀ, ಅನ್ನಭಾಗ್ಯ ಲಾಭ ಪಡೆದುಕೊಳ್ಳಲು ಆಧಾರಿನಲ್ಲಿ ಆಗಿರುವ ಲೋಪ ಸರಿಪಡಿಸಿಕೊಳ್ಳಲು ಪಟ್ಟಣದ ತಹಶೀಲ್ ಕಛೇರಿಯಲ್ಲಿರುವ ಆಧಾರ ಸೇವಾ ಕೇಂದ್ರ ಕಳೆದ 5 ದಿನಗಳಿಂದ ಸ್ಥಗಿತಗೊಂಡಿದ್ದರಿಂದ ಸಾರ್ವಜನಿಕರು ಪರದಾಡುವಂತಾಗಿದೆ.ಕಮಲನಗರ ಪಟ್ಟಣದಲ್ಲಿರುವ 5 ಆಧಾರ ಕೇಂದ್ರಗಳು ಸ್ಥಗಿತಗೊಂಡಿವೆ. ಇದರಲ್ಲಿ ತಹಶಿಲ್ದಾರ್ ಕಚೇರಿ, ಅಂಚೆ ಕಚೇರಿ ಇವು ಎರಡು ಕಳೆದ ಒಂದೂವರೆ ವರ್ಷದಿಂದ ಬಂದ್ ಆಗಿದೆ. ಬಿ.ಎಸ್.ಎನ್.ಎಲ್. ಕಚೇರಿಯಲ್ಲಿರುವ ಕೇಂದ್ರ 5 ತಿಂಗಳಿನಿಂದ ಮುಚ್ಚಲ್ಪಟ್ಟಿದೆ. ಹಾಗೂ ಕೃಷ್ಣಾ ಗ್ರಾಮೀಣ ಬ್ಯಾಂಕ್ನಲ್ಲಿರುವ ಕೇಂದ್ರ ಕಳೆದ 2 ವರ್ಷದಿಂದ ಬಂದ್ ಆಗಿರುತ್ತದೆ. ಹೀಗಾಗಿ ಇರುವ ಒಟ್ಟು 4 ಕೇಂದ್ರಗಳು ಸ್ಥಗಿತವಾಗಿವೆ. ಇದರಿಂದ ಆಧಾರನಲ್ಲಿ ಹೆಸರು ತಿದ್ದುಪಡಿ, ಮೊಬೈಲ್ ಸಂಖ್ಯೆ ಸೇರ್ಪಡೆ, ವಿಳಾಸ ಬದಲಾವಣೆ, ಹೊಸ ಆಧಾರ ಕಾರ್ಡ ಮಾಡಿಸುವ ಕೆಲಸಕ್ಕೆ ತಿವ್ರ ತೊಂದರೆ ಆಗುತ್ತಿದೆ.ಗ್ಯಾರಂಟಿ ಕೈ ತಪ್ಪುವ ಭೀತಿ:ಅನ್ಯಭಾಗ್ಯದ 5 ಕೆ.ಜಿ ಅಕ್ಕಿ ಹಣ ಕುಟುಂಬದ ಯಜಮಾನಿ ಆಧಾರ ಲಿಂಕ್ ಇರುವ ಬ್ಯಾಂಕ್ ಖಾತೆಗೆ ಹಾಕಲಾಗಿದೆ. ಗೃಹ ಲಕ್ಷ್ಮೀ ಯೋಜನೆ ಮಾಸಿಕ ಯೋಜನೆ 2000 ರು.ಕುಟುಂಬದ ಯಜಮಾನಿ ಖಾತೆಗೆ ಹಾಕಲಾಗುತ್ತದೆ. ಇದರಿಂದ ಆಧಾರ ಕಾರ್ಡ್‌ಗೆ ಕೊಟ್ಟಿರುವ ಮೊಬೈಲ್ ನಂಬರ್ ಬ್ಯಾಂಕ್ ಅಕೌಂಟ್‌ಗೆ ನೀಡಿರುವ ನಂಬರ್ ಒಂದೆ ಆಗಿರಬೇಕು. ಇದರಲ್ಲಿ ಕೊಂಚ ವ್ಯತ್ಯಾಸವಾದರೂ ಗ್ಯಾರಂಟಿ ಕೈತಪ್ಪುವ ಭೀತಿ ಇದೆ. ಹೀಗಾಗಿ ಜನರು ಆಧಾರ ಕೇಂದ್ರಗಳಿಗೆ ಮುಗಿ ಬಿದ್ದಿದ್ದಾರೆ.ಸಾರ್ವಜನಿಕರಿಂದ ನಿತ್ಯ ಅಲೆದಾಟ:ಆಧಾರ ಲೋಪ ಸರಿಪಡಿಸಲು ಸೇವಾ ಕೇಂದ್ರಗಳಿಗೆ ಜನ ಅಲೆದಾಡುತಿದ್ದಾರೆ. ಬೆಳಗ್ಗೆ 8 ಗಂಟೆಯಿಂದಲೇ ಕೆಂದ್ರದ ಮುಂದೆ ಕುಳಿತುಕೊಳ್ಳುತಿದ್ದಾರೆ ದಿನಕ್ಕೆ 40 ರಿಂದ 50 ಆಧಾರ್ ಸರಿಪಡಿಸಲು ಸಾಧ್ಯವಾಗುತ್ತದೆ. ಹೀಗಾಗಿ ಜನರು ರೋಸಿ ಹೋಗಿದ್ದಾರೆ. ತಾಲೂಕಿನ ಠಾಣಾ ಕುಶನೂರ ಗ್ರಾಮದಲ್ಲಿರುವ ಆಧಾರ ಕೇಂದ್ರದಲ್ಲಿ ಮೊದಲು ಬಂದವರಿಗೆ ದಿನಕ್ಕೆ 25 ಟೋಕನ್ ವಿತರಿಸಲಾಗುತ್ತದೆ. ಅವರಿಗೆ ದಿನಾಂಕ ನಿಗದಿ ಮಾಡಲಾಗಿದೆ. ಅದರಂತೆ ಬಂದು ಆಧಾರ ಮಾಡಿಕೊಳ್ಳುತಿದ್ದಾರೆ. ಮಧ್ಯಾಹ್ನದ ನಂತರ ಬಂದವರಿಗೂ ಆಧಾರ್ ಮಾಡಿಕೊಡಲಾಗುತ್ತದೆ ಎಂಬುದಾಗಿ ಆಧಾರ ಮಾಡುವ ಸಿಬ್ಬಂದಿ ತಿಳಿಸಿದ್ದಾರೆ.