ಕನ್ನಡಪ್ರಭ ವಾರ್ತೆ ಬೀದರ್
ಬೇಡಿಕೆಗಳ ಈಡೇರಿಕೆಯತ್ತ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರುತ್ತಿರುವುದನ್ನು ಖಂಡಿಸಿ ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರು ಹಾಗೂ ಬೀದಿ ವಿದ್ಯುತ್ ದೀಪ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲ ಸೇವೆಗಳನ್ನು ಸ್ಥಗಿತಗೊಳಿಸಿ ಬರುವ ಅ.4ರಿಂದ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದೇವೆ ಎಂದು ಗ್ರಾಮ ಪಂಚಾಯತ್ ಅಧಿಕಾರಿಗಳ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಶರತಕುಮಾರ ಅಭಿಮಾನ ತಿಳಿಸಿದರು.ಶನಿವಾರ ಇಲ್ಲಿನ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಮತ್ತು ನೌಕರರ ಎಲ್ಲಾ ವೃಂದ ಸಂಘಗಳು ಹಾಗೂ ಗ್ರಾಪಂ ಸದಸ್ಯರ ಒಕ್ಕೂಟದ ನೇತೃತ್ವದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರಕ್ಕೆ ಆಗ್ರಹಿಸಲಾಗುವುದು ಎಂದರು.
ಗ್ರಾಮ ಪಂಚಾಯತಿ, ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು, ಗ್ರಾಮ ಪಂಚಾಯತಿಯ ಎಲ್ಲ ಸಿಬ್ಬಂದಿ ವರ್ಗ ಕಾರ್ಯನಿರ್ವಹಣೆಯಲ್ಲಿ ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ಪರಿಹರಿಸುವಂತೆ ಹಾಗೂ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಸರ್ಕಾರ ಮತ್ತು ಇಲಾಖೆಗೆ ಹಲವಾರು ವರ್ಷಗಳಿಂದ ಮನವಿ ಸಲ್ಲಿಸಿದರೂ ಸ್ಪಂದಿಸದೆ ಪ್ರತಿ ಸಮಸ್ಯೆಗೂ ಪಿಡಿಒ ಹಾಗೂ ಸಿಬ್ಬಂದಿಗಳನ್ನು ನೇರ ಹೊಣೆಗಾರ ಮಾಡುತ್ತಿರುವ ಸರ್ಕಾರ ಮತ್ತು ಇಲಾಖೆಯ ಧೋರಣೆಯನ್ನು ಖಂಡಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಕ್ಟೋಬರ್ 4ರಿಂದ ರಾಜ್ಯದಾದ್ಯಂತ ಗ್ರಾಪಂ ಸೇವೆಗಳನ್ನು ನಿಲ್ಲಿಸಿ ಅನಿರ್ದಿಷ್ಟಾವಧಿ ಹೋರಾಟ ಕೈಗೊಳ್ಳಲಾಗುವುದು ಎಂದರು.1993 ರ ಪಂಚಾಯತ್ ರಾಜ್ ಕಾಯ್ದೆ ಪ್ರಕರಣ 4ರ ಅನುಸಾರ 5,000 ದಿಂದ 7000 ವರೆಗಿನ ಜನ ಸಂಖ್ಯೆಯುಳ್ಳ ಗ್ರಾಮ ಅಥವಾ ಗ್ರಾಮಗಳ ಗುಂಪಿಗೆ ಒಂದು ಗ್ರಾಮ ಪಂಚಾಯಿತಿ ಎಂದು ಘೋಷಣೆ ಮಾಡಲಾಗಿದೆ, ಆದರೆ ಇಂದಿನ ಪರಿಸ್ಥಿತಿಯಲ್ಲಿ ಜನಸಂಖ್ಯೆ ಬಹುತೇಕ ಎರಡ್ಮೂರು ಪಟ್ಟು ಹೆಚ್ಚಾಗಿದೆ. ಆದರೆ ಗ್ರಾಮ ಪಂಚಾಯಿತಿಗೆ ನಿಗದಿಪಡಿಸಿದ ಸಿಬ್ಬಂದಿಗಳ ಸಂಖ್ಯೆ ಹಾಗೂ ಮಾದರಿಯು 30 ವರ್ಷಗಳಷ್ಟು ಹಳೆಯದ್ದಾಗಿದೆ. ಮೂಲಸೌಕರ್ಯಗಳು ಕೂಡ ಯಾವುದೇ ಬದಲಾವಣೆ ಆಗಿಲ್ಲ, ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ವೃಂದ ಮತ್ತು ನೇಮಕಾತಿ ನಿಯಮಗಳನ್ನು ರಚಿಸುವಾಗ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಸಲ್ಲಿಸಿದ ಯಾವುದೇ ಆಕ್ಷೇಪಣೆ ಸಲಹೆಗಳನ್ನು ಪರಿಗಣಿಸದೆ ಅಂತಿಮಗೊಳಿಸಿ ರೂಪಿಸಲಾಗಿದೆ ಎಂದು ಆರೋಪಿಸಿದರು.
ಇಲಾಖೆಯ ಹಂತದಲ್ಲಿ ಯಾವುದೇ ಆದೇಶಗಳನ್ನು ಹೊರಡಿಸುವ ಮುನ್ನ ಅನುಷ್ಠಾನ ಮಾಡುವ ಅಧಿಕಾರಿಗಳ ಸಮಸ್ಯೆಯನ್ನು ಕಾನೂನಿನ ತೊಡಕುಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತಿಲ್ಲ. ಹಾಗಾಗಿ ಈ ಎಲ್ಲ ಸಮಸ್ಯೆಯ ನೋವನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಅನುಭವಿಸುವಂತಹಾಗಿದೆ ಎಂದರು.ಪಂಚಾಯತ ಅಭಿವೃದ್ಧಿ ಅಧಿಕಾರಿ ಹುದ್ದೆಯನ್ನು ಗೆಜೆಟೆಡ್ ಗ್ರೂಪ್ ಬಿ ವೃಂದಕ್ಕೆ ಮೇಲ್ದರ್ಜೆಗೇರಿಸುವುದನ್ನು ನಿರ್ಲಕ್ಷಿಸಲಾಗಿದೆ. ಶೋಷಣೆಗಳು ಹೆಚ್ಚಾಗಿದ್ದು, ಪಿಡಿಒಗಳು ಒತ್ತಡಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ. ಅನಾರೋಗ್ಯಕ್ಕೀಡಾಗಿದ್ದಾರೆ. ಸಾಮೂಹಿಕ ರಾಜೀನಾಮೆಗೆ ತಯಾರಿ ನಡೆಸುತ್ತಿದ್ದಾರೆ, ಇಂತಹ ಸಮಯದಲ್ಲಿ ಇದು ಕೊನೆಯ ಅವಕಾಶ ಎಂಬ ನಂಬಿಕೆಯಲ್ಲಿ ಸೆ.30ರ ಒಳಗೆ ನಮ್ಮ ಬೇಡಿಕೆಗಳು ಈಡೇರದಿದ್ದಲ್ಲಿ ಅ.2ರಿಂದ ಎಲ್ಲ ವೃಂದ ಸಂಘಗಳು ಹಾಗೂ ಗ್ರಾಪಂ ಸದಸ್ಯರ ಒಕ್ಕೂಟ ಸೇರಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಈ ವೇಳೆ ಸಂಘದ ಜಿಲ್ಲಾ ಖಜಾಂಚಿ ದೇವಪ್ಪ ಚಾಂಬಾಳೆ ಮಾತನಾಡಿದರು.ಉಪಾಧ್ಯಕ್ಷರಾದ ಶಿವಕುಮಾರ ಸೀತಾ, ಚಂದ್ರಕಾಂತ ಸ್ವಾಮಿ, ವಿವೇಕ ಸ್ವಾಮಿ, ಚುನಾಯಿತ ಪ್ರತಿನಿಧಿಗಳ ಮಹಾ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಶ್ರೀನಿವಾಸ ಹಣಮಂತವಾಡಿ, ಕ್ಲರ್ಕ ಕಂ ಡಿಇಒ ಸಂಘದ ಜಿಲ್ಲಾಧ್ಯಕ್ಷ ಸಂಜುಕುಮಾರ ಶೇರಿಕಾರ, ಬಿಲ್ ಕಲೆಕ್ಟರ ಸಂಘದ ಜಿಲ್ಲಾಧ್ಯಕ್ಷ ರವಿಕಿರಣ ಭಂಗೂರೆ ಸೇರಿ ಇತರರು ಇದ್ದರು.
ವಿವಿಧ ಬೇಡಿಕೆಗಳು
*7 ವರ್ಷ ಪೂರೈಸಿ ಕತರ್ವ್ಯ ನಿರ್ವಹಿಸುತ್ತಿರುವ ಪಿಡಿಒ ಗಳನ್ನು ಬೇರೆ ತಾಲೂಕಿಗೆ ವರ್ಗಾವಣೆ ಮಾಡುವ ನಿಯಮವನ್ನು ಕೈಬಿಡಬೇಕು.*ರಾಜ್ಯದ ಎಲ್ಲಾ ಪಿಡಿಒ ಗಳ ಹುದ್ದೆಯನ್ನು ಗೆಜೆಟೆಡ್ ಗ್ರೂಪ್ ಬಿ ದರ್ಜೆಗೆ ಉನ್ನತಿಕರಿಸಬೇಕು.
*ಖಾತ್ರಿ ಯೋಜನೆ ಗುರಿ ನಿಗದಿ ಕೈಬಿಡಲಿ. ಗ್ರಾಪಂಗಳಿಗೆ ಸಿಬ್ಬಂದಿ ನೇಮಕ ಮಾಡಲಿ.*ವಿಷಯ ನಿರ್ವಾಹಕರನ್ನು ನೇಮಿಸುವುದು ಹಾಗೂ ತಾಂತ್ರಿಕ ಸಿಬ್ಬಂದಿಯನ್ನು ಒದಗಿಸುವುದು.
*ಪಿಡಿಒ ಜೇಷ್ಠತಾ ಪಟ್ಟಿ ಹಾಗೂ ಬಡ್ತಿಯಲ್ಲಿನ ಸಮಸ್ಯೆಗಳನ್ನು ತುರ್ತಾಗಿ ಪರಿಹರಿಸುವುದು.* ಕಾರ್ಯದರ್ಶಿಗಳ ಬೇಡಿಕೆ, ದ್ವೀತೀಯ ದರ್ಜೆ ಲೆಕ್ಕ ಸಹಾಯಕರ ಬೇಡಿಕೆ, ಕ್ಲರ್ಕ ಕಂ ಡಾಟಾ ಎಂಟ್ರಿ ಆಪರೇಟರಗಳ, ಕರ ವಸೂಲಿಗಾರರ ಸೇರಿ ಇತರರ ಈಡೇರಿಸಬೇಕು.