ಗ್ರಾಮೀಣ ಪ್ರಥಮ ಚಿಕಿತ್ಸಕರ ಸೇವೆ ಶ್ಲಾಘನೀಯ

KannadaprabhaNewsNetwork |  
Published : Oct 06, 2026, 02:15 AM IST
ಕುರುಗೋಡು 02 ತಾಲ್ಲೂಕಿನ ದಮ್ಮೂರು ಗ್ರಾಮದಲ್ಲಿ ಜರುಗಿದ ಗ್ರಾಮೀಣ ಪ್ರಥಮ ಚಿಕಿತ್ಸಕರ ಸಮಾವೇಶದಲ್ಲಿ ಬಳ್ಳಾರಿ ಮಹಾನರ ಪಾಲಿಕೆ ಮೇಯರ್ ಗಾದೆಪ್ಪ ಮಾತನಾಡಿದರು. | Kannada Prabha

ಸಾರಾಂಶ

ಆಂಧ್ರಪ್ರದೇಶದ ಮಾದರಿಯಲ್ಲಿ ರಾಜ್ಯದಲ್ಲಿರುವ ಗ್ರಾಮೀಣ ಪ್ರಥಮ ಚಿಕಿತ್ಸಕರಿಗೆ ಆರು ತಿಂಗಳ ತರಬೇತಿ ನೀಡಿ ಸೇವೆಯನ್ನು ಅಧಿಕೃತಗೊಳಿಸುವ ಅಗತ್ಯವಿದೆ.

ಕುರುಗೋಡು: ಗ್ರಾಮೀಣ ಭಾಗದ ಬಡ ರೋಗಿಗಳ ಜೀವರಕ್ಷಕರಾಗಿ ಗ್ರಾಮೀಣ ಪ್ರಥಮ ಚಿಕಿತ್ಸಕರು ಸೇವೆ ಸಲ್ಲಿಸುತ್ತಿದ್ದಾರೆ ಎಂದು ಬಳ್ಳಾರಿ ಮಹಾನರ ಪಾಲಿಕೆ ಮೇಯರ್ ಗಾದೆಪ್ಪ ಹೇಳಿದರು.

ತಾಲ್ಲೂಕಿನ ದಮ್ಮೂರು ಗ್ರಾಮದ ವೆಂಕಾವಧೂರ ಆಶ್ರಮದಲ್ಲಿ ಭಾನುವಾರ ಆಯೋಜಿಸಿದ್ದ ಗ್ರಾಮೀಣ ಪ್ರಥಮ ಚಿಕಿತ್ಸಕರ ಜಿಲ್ಲಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಈ ವರ್ಷ ಮಳೆಯಾಗದೆ ತೀವ್ರ ಬರದ ಛಾಯೆ ಆವರಿಸಿದೆ. ಬಡಜನರು ಜೀವನ ಸಾಗಿಸುವುದು ಒಂದು ಸವಾಲಾಗಿದೆ. ಈ ಪರಿಸ್ಥಿತಿಯಲ್ಲಿ ಅನಾರೋಗ್ಯ ಸಮಸ್ಯೆ ಎದುರಾದರೆ ನಗರ ಪ್ರದೇಶಗಳಿಗೆ ತೆರಳಿ ಅಧಿಕ ಹಣ ವೆಚ್ಚಮಾಡಿ ಚಿಕಿತ್ಸೆ ಪಡೆಯುವುದು ಕನಸಿನ ಮಾತಾಗಿದೆ. ಗ್ರಾಮೀಣ ಭಾಗದ ರೋಗಿಗಳ ಪಾಲಿಗೆ ವರದಾನವಾಗಿರುವ ಗ್ರಾಮೀಣ ಪ್ರಥಮ ಚಿಕಿತ್ಸಕರ ಸೇವೆಯಲ್ಲಿ ಸರ್ಕಾರ ಅಧಿಕೃತಗೊಳಿಸಬೇಕಾಗಿದೆ. ಗ್ರಾಮೀಣ ಪ್ರಥಮ ಚಿಕಿತ್ಸಕರ ನಿಯೋಗದೊಂದಿಗೆ ಆರೋಗ್ಯ ಸಚಿವರನ್ನು ಭೇಟಿಮಾಡಿ ಸಮಸ್ಯೆಗೆ ಪರಿಹಾರ ದೊರಕಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.

ಗ್ರಾಮೀಣ ಪ್ರಥಮ ಚಿಕಿತ್ಸಕರ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಎಂ.ಎಸ್. ಕದ್ದಿಮನಿ ಮಾತನಾಡಿ, ಆಂಧ್ರಪ್ರದೇಶದ ಮಾದರಿಯಲ್ಲಿ ರಾಜ್ಯದಲ್ಲಿರುವ ಗ್ರಾಮೀಣ ಪ್ರಥಮ ಚಿಕಿತ್ಸಕರಿಗೆ ಆರು ತಿಂಗಳ ತರಬೇತಿ ನೀಡಿ ಸೇವೆಯನ್ನು ಅಧಿಕೃತಗೊಳಿಸುವ ಅಗತ್ಯವಿದೆ. ರಮೇಶ್ ಕುಮಾರ್ ಆರೋಗ್ಯ ಸಚಿವರಾಗಿದ್ದ ಸಂದರ್ಭದಲ್ಲಿ ಒಂದು ಸುತ್ತಿನ ಮಾತುಕತೆ ನಡೆದಿತ್ತು. ನಿರ್ಧಾರ ಪ್ರಕಟಿಸುವ ಮೊದಲು ಸರ್ಕಾರ ವಿಸರ್ಜನೆಗೊಂಡ ಪರಿಣಾಮ ನನೆಗುದಿಗೆಬಿದ್ದಿದೆ. ಸರ್ಕಾರ ಸ್ಪಷ್ಟ ನಿರ್ಧಾರ ತೆಗೆದುಕೊಂಡು ಗ್ರಾಮೀಣ ಪ್ರಥಮ ಚಿಕಿತ್ಸಕರ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.

ರಾಜ್ಯ ಕೋರ್ ಕಮಿಟಿ ಅಧ್ಯಕ್ಷ ಆರ್. ಸಿದ್ದಾರೆಡ್ಡಿ ಮಾತನಾಡಿ, ಗ್ರಾಮೀಣ ಭಾಗದ ರೋಗಿಗಳ ನೋವು-ನಲಿವುಗಳಿಗೆ ಕೂಡಲೇ ಸ್ಪಂದಿಸುವ ಗ್ರಾಮೀಣ ಪ್ರಥಮ ಚಿಕಿತ್ಸಕರ ಸೇವೆಯನ್ನು ರಾಜ್ಯದಲ್ಲಿ ಅಧಿಕೃತಗೊಳಿಸುವ ಅಗತ್ಯವಿದೆ. ಗ್ರಾಮೀಣ ಪ್ರಥಮ ಚಿಕಿತ್ಸಕರನ್ನು ಅವರ ಕುಟುಂಬ ಅವಲಂಭಿಸಿದೆ. ಅವರನ್ನು ನಕಲಿ ಎಂದು ಹೇಳಿ ಅವಮಾನ ಮಾಡುವ ಬದಲು ಆಂಧ್ರ ಮಾದರಿಯಲ್ಲಿ ಬ್ರಡ್ಜ್ ಕೋರ್ಸ್ ತರಬೇತಿ ನೀಡಿ ಸೇವೆಯನ್ನು ಅಧಿಕೃತಗೊಳಿಸಬೇಕು ಎಂದು ಒತ್ತಾಯಿಸಿದರು.

ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ಆರ್. ಪಾಟೀಲ್, ಜಿಲ್ಲಾ ಅಧ್ಯಕ್ಷ ರಮೇಶ್ ಕುಮಾರ್, ಜಿಲ್ಲಾ ಪ್ರಧಾನಕಾರ್ಯದರ್ಶಿ ಪಾಂಡುರಂಗನ ಗೌಡ, ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಆದಿನಾರಾಯಣ ರೆಡ್ಡಿ ಮತ್ತು ರಘುರಾಮಕೃಷ್ಣ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಕರೆಗೆ ₹50 ಸಾವಿರ ಪರಿಹಾರ ಕೊಡಿ
ಹರಪನಹಳ್ಳಿಯಲ್ಲಿ ಕೇಂದ್ರ ಬರ ಅಧ್ಯಯನ ತಂಡಕ್ಕೆ ಒಣಗಿದ ಬೆಳೆಗಳ ದರ್ಶನ