ಪ್ರತಿಫಲಾಪೇಕ್ಷೆ ಇಲ್ಲದೆ ಹೃದಯ ವೈಶಾಲ್ಯದಿಂದ ಸ್ವಾಮಿಯ ಸೇವೆ ಮಾಡುತ್ತಿರುವೆ: ಡಾ. ಹೆಗ್ಗಡೆ

KannadaprabhaNewsNetwork | Published : Nov 27, 2024 1:00 AM

ಸಾರಾಂಶ

ಕಳೆದ ಕೆಲವು ವರ್ಷಗಳಿಂದ ಧರ್ಮಸ್ಥಳಕ್ಕೆ ಬೇಕಾದಷ್ಟು ಅಕ್ಕಿ, ತರಕಾರಿಗಳನ್ನು ಭಕ್ತರೇ ಕಾಣಿಕೆಯಾಗಿ ಅರ್ಪಿಸುತ್ತಿದ್ದಾರೆ. ಹಾಗಾಗಿ ತಾವು ಖರೀದಿಸುವ ಅವಶ್ಯಕತೆ ಇಲ್ಲ ಎಂದು ಡಾ. ವೀರೇಂದ್ರ ಹೆಗ್ಗಡೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ ಸತ್ಯ, ಧರ್ಮ, ನ್ಯಾಯ ಮತ್ತು ನೀತಿಯ ಮಾರ್ಗದಲ್ಲಿ ನಡೆದು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಹೃದಯ ವೈಶಾಲ್ಯದಿಂದ ಕಾಯಕದ ಮೂಲಕ ತಾನು ಸಂತೋಷದಿಂದ ನಿತ್ಯವೂ ಶ್ರೀ ಮಂಜುನಾಥ ಸ್ವಾಮಿಯ ಸೇವೆ ಮಾಡುತ್ತಿರುವುದಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಅವರು ಮಂಗಳವಾರ ಲಕ್ಷದೀಪೋತ್ಸವ ಸಂದರ್ಭದಲ್ಲಿ ಉಜಿರೆಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆಯಲ್ಲಿ ಶ್ರದ್ಧಾ ಭಕ್ತಿಯಿಂದ ಬಂದ ೨೫ ಸಾವಿರಕ್ಕೂ ಹೆಚ್ಚು ಭಕ್ತರನ್ನು ಉದ್ದೇಶಿಸಿ ಮಾತನಾಡಿದರು. ತಮಗೆ ಸುಖ-ದುಃಖ ಮತ್ತು ಪಾಪ - ಪುಣ್ಯದ ಭಯ ಹಾಗೂ ಚಿಂತೆ ಇಲ್ಲ. ಎರಡನ್ನೂ ತಾವು ಸಮಾನವಾಗಿ ಸ್ವೀಕರಿಸಿ ಶ್ರೀ ಸ್ವಾಮಿಯ ಸನ್ನಿಧಿಗೆ ಅರ್ಪಿಸಿ ನಿಶ್ಚಿಂತೆಯಿಂದ ಇರುತ್ತೇನೆ. ಲಕ್ಷಾಂತರ ಮಂದಿ ಭಕ್ತರ ಹಾಗೂ ಅಭಿಮಾನಿಗಳ ಪ್ರೀತಿ-ವಿಶ್ವಾಸ ಮತ್ತು ಗೌರವವೇ ತಮಗೆ ಶ್ರೀರಕ್ಷೆಯಾಗಿದೆ ಎಂದರು.೨೦೨೫ ರ ಜನವರಿ ೭ ಮತ್ತು ೮ ರಂದು ಉಪರಾಷ್ಟ್ರಪತಿಗಳನ್ನು ಆಹ್ವಾನಿಸಲಾಗಿದ್ದು, ನೂತನ ಸರತಿ ಸಾಲಿನ (ಕ್ಯೂ ಕಾಂಪ್ಲೆಕ್ಸ್) ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ಅಂದು ೬೦ ಸಾವಿರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಗುವುದು ಎಂದ ಹೆಗ್ಗಡೆ ಅವರು, ಉಡುಪಿಯಲ್ಲಿ ಎಸ್.ಡಿ.ಎಮ್. ಆಯುರ್ವೇದ ಕಾಲೇಜಿನ ನೂತನ ಕಟ್ಟಡ ನಿರ್ಮಾಣ ಪೂರ್ಣಗೊಂಡಿದ್ದು ಸದ್ಯದಲ್ಲಿಯೇ ಉದ್ಘಾಟಿಸಲಾಗುವುದು ಎಂದು ಪ್ರಕಟಿಸಿದರು.

ಕಳೆದ ಕೆಲವು ವರ್ಷಗಳಿಂದ ಧರ್ಮಸ್ಥಳಕ್ಕೆ ಬೇಕಾದಷ್ಟು ಅಕ್ಕಿ, ತರಕಾರಿಗಳನ್ನು ಭಕ್ತರೇ ಕಾಣಿಕೆಯಾಗಿ ಅರ್ಪಿಸುತ್ತಿದ್ದಾರೆ. ಹಾಗಾಗಿ ತಾವು ಖರೀದಿಸುವ ಅವಶ್ಯಕತೆ ಇಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಕತ್ತಲಿನಿಂದ ಬೆಳಕಿನೆಡೆಗೆ, ಅಜ್ಞಾನದಿಂದ ಸುಜ್ಞಾನದ ಕಡೆಗೆ ಸಾಗುವುದೇ ಲಕ್ಷದೀಪೋತ್ಸವದ ಉದ್ದೇಶವಾಗಿದೆ. ೧೨ವರ್ಷಗಳ ಹಿಂದೆ ಉಜಿರೆಯಿಂದ ಧರ್ಮಸ್ಥಳಕ್ಕೆ ಲಕ್ಷದೀಪೋತ್ಸವ ಸಂದರ್ಭದಲ್ಲಿ ಆರಂಭಿಸಿದ ಪಾದಯಾತ್ರೆಯಲ್ಲಿ ವರ್ಷದಿಂದ ವರ್ಷಕ್ಕೆ ಪಾದಯಾತ್ರೆಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಶಾಸಕ ಹರೀಶ್ ಪೂಂಜ ಶುಭಾಶಂಸನೆ ಮಾಡಿದರು.

ಹೇಮಾವತಿ ವೀ. ಹೆಗ್ಗಡೆ, ಅನಿತಾ ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಉಜಿರೆಯ ಶರತ್‌ಕೃಷ್ಣ ಪಡ್ವೆಟ್ನಾಯ, ಸೋನಿಯಾ ಯಶೋವರ್ಮ, ಬೆಳ್ತಂಗಡಿ ರೋಟರಿಕ್ಲಬ್ ಅಧ್ಯಕ್ಷ ಪೂರನ್‌ವರ್ಮ ಉಪಸ್ಥಿತರಿದ್ದರು.ಬೆಳ್ತಂಗಡಿಯ ವಕೀಲ ಬಿ.ಕೆ. ಧನಂಜಯ ರಾವ್ ಸ್ವಾಗತಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಸುರೇಂದ್ರ ವಂದಿಸಿದರು. ಶ್ರೀನಿವಾಸ ರಾವ್ ಧರ್ಮಸ್ಥಳ ಕಾರ್ಯಕ್ರಮ ನಿರ್ವಹಿಸಿದರು.

Share this article