ಉಡುಪಿ: ಹಸಿರು ಕಾನನದ ನಡುವೆ ಮೇಲೆ ಪಂಚದುರ್ಗಾಪರಮೇಶ್ವರಿ, ಕೆಳಗೆ ಮುಖ್ಯಪ್ರಾಣ ದೇವರು ಇರುವ ಪರಿಪೂರ್ಣ ದೈವಿ ಪ್ರಭಾವವಿರುವ ಕ್ಷೇತ್ರ ಇಂದ್ರಾಳಿ. ಇದರ ಜೀರ್ಣೋದ್ಧಾರದ ಫಲ ಇಡೀ ಸಮಾಜಕ್ಕೆ ಸಿಗಲಿದೆ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು. ಅವರು ಇಲ್ಲಿನ ಇಂದ್ರಾಳಿಯಲ್ಲಿ ಸಂಪೂರ್ಣ ಜೀರ್ಣೋದ್ಧಾರಗೊಂಡ ಮುಖ್ಯ ಪ್ರಾಣ ದೇವರ ಗುಡಿಯಲ್ಲಿ ಶನಿವಾರ ಅಷ್ಟಬಂಧ ಪುನಃಪ್ರತಿಷ್ಠೆಯ ಸಂದರ್ಭ ನಡೆದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ಇಂದಿನ ಯುವ ಜನತೆಯಲ್ಲಿ ಅಪಾರ ಶಕ್ತಿ ಸಾಮರ್ಥ್ಯಗಳಿವೆ. ಆದರೆ ಅದರ ಬಳಕೆ ಹೇಗೆ ಮಾಡಬೇಕು ಎನ್ನುವುದು ಅವರಿಗೆ ಗೊತ್ತಿಲ್ಲ, ರಾವಣನಲ್ಲೂ ಅಪಾರ ದೈಹಿಕ ಬಲವಿತ್ತು, ಹನುಮಂತನಲ್ಲಿಯೂ ಅಪಾರ ದೈಹಿಕ ಬಲ ಇತ್ತು. ಆದರೆ ಹನುಮಂತನಿಗೆ ದೈಹಿಕ ಬಲವನ್ನು ಹೇಗೆ ಸದ್ಬಳಕೆ ಮಾಡಿಕೊಳ್ಳಬೇಕು ಎನ್ನುವ ಅರಿವಿತ್ತು. ಆದ್ದರಿಂದಲೇ ಇಂದಿನ ಯುವ ಜನತೆಗೆ ದೇಶ ಸೇವೆ ಮತ್ತು ಈಶ ಸೇವೆಯನ್ನು ಹೇಗೆ ಮಾಡಬೇಕು ಎನ್ನುವುದಕ್ಕೆ ಮುಖ್ಯಪ್ರಾಣ ದೇವರು ಮಾದರಿ ಯಾಗಿದ್ದಾರೆ ಎಂದು ಶ್ರೀಗಳು ಹೇಳಿದರು. ಇದೇ ಸಂದರ್ಭ ಕನ್ನಡ ಹನುಮಾನ್ ಚಾಲೀಸವನ್ನು ಬಿಡುಗಡೆ ಮಾಡಿದ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ಒಂದು ದೇವಾಲಯ ಜೀರ್ಣೋದ್ಧಾರ ಆದರೆ ಆ ಊರು ಸಮೃದ್ಧವಾಗಿದೆ. ಅಲ್ಲಿನ ಜನರಿಗೆ ದೇವರ ಆ ಸಾಮಾರ್ಥ್ಯ ಕೊಟ್ಟಿದ್ದಾನೆ ಎಂದರ್ಥ. ದೇವಾಲಯಗಳ ಜೀರ್ಣೋದ್ಧಾರ ಆ ಊರಿನ ಒಗ್ಗಟ್ಟನ್ನು ತೋರಿಸುತ್ತದೆ. ಇಂದ್ರಾಳಿಯಲ್ಲಿ ಅದು ಸಾಬೀತಾಗಿದೆ ಎಂದರು. ವಿಶ್ವದಲ್ಲಿ ಯುದ್ಧದ ವಾತಾವರಣವಿದ್ದರೂ ನಮ್ಮ ದೇಶದಲ್ಲಿ ಅದರಲ್ಲೂ ಕರಾವಳಿಯಲ್ಲಿ ಅದರ ಪರಿಣಾಮ ತಟ್ಚಿಲ್ಲ. ಕಾರಣ ಇಲ್ಲಿರುವ ಧಾರ್ಮಿಕ ವಾತಾವರಣ, ಈ ಮಣ್ಣಿನ ಗುಣ ಅದು ಎಂದರಲ್ಲದೆ, ಯುದ್ಧದ ವಾತಾವರಣ ಶೀಘ್ರ ಶಮನವಾಗಲಿ ಎಂದು ಈ ಸಂದರ್ಭದಲ್ಲಿ ಎಲ್ಲರೂ ಪ್ರಾರ್ಥಿಸೋಣ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ಧ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಸ್ವಾಗತಿಸಿದರು, ವಿದ್ವಾಂಸ ದಾಮೋದಕ ಶರ್ಮ ಧಾರ್ಮಿಕ ಉಪನ್ಯಾಸ ನೀಡಿದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಭೂಪತಿ ಶೆಟ್ಟಿ ಇಂದ್ರಾಳಿ, ಪ್ರಧಾನ ಕಾರ್ಯದರ್ಶಿ ರತ್ನಾಕರ ಇಂದ್ರಾಳಿ, ಬ್ರಹ್ಮಕಲಶೋತ್ಸವ ಸಮಿತಿ ಗೌರವಾದ್ಯಕ್ಷ ಉದ್ಯಮಿ ಪುರುಷೋತ್ತಮ ಪಿ. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸೀತಾರಾಮ ನಾಯಕ್ ಉಪಸ್ಥಿತರಿದ್ದರು. ಇಂದು ಬ್ರಹ್ಮಕಲಶೋತ್ಸವ: ಶನಿವಾರ ಮುಂಜಾನೆ 6.48ರ ಸಮುಹೂರ್ತದಲ್ಲಿ ಮುಖ್ಯಪ್ರಾಣ ದೇವರ ಅಷ್ಟಬಂಧಪೂರ್ವಕ ಪುನಃಪ್ರತಿಷ್ಠೆ ನಡೆಯಿತು, ಮಧ್ಯಾಹಗ್ನ 12.30ಕ್ಕೆ ಮಹಾಅನ್ನಸಂತರ್ಪಣೆಯಲ್ಲಿ ಸಾವಿರಾರು ಮಂದಿ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.
ಇಂದು 9.15ರ ಸುಮೂರ್ತದಲ್ಲಿ ಮುಖ್ಯಪ್ರಾಣ ದೇವರಿಗೆ ಬ್ರಹ್ಮಕುಂಬಾಭಿಷೇಕ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 7 ಗಂಟೆಗೆ ಮಹಾರಂಗಪೂಜೆ ಜರುಗಲಿದೆ.