ಬಸವಕಲ್ಯಾಣದಲ್ಲಿ ಅಧಿವೇಶನ: ಸಚಿವ ಖಂಡ್ರೆ ಇಂಗಿತ

KannadaprabhaNewsNetwork | Published : Dec 10, 2024 12:30 AM

ಸಾರಾಂಶ

ಸುವರ್ಣ ವಿಧಾನಸೌಧದಲ್ಲಿ ಅನುಭವಮಂಟಪದ ತೈಲವರ್ಣ ಚಿತ್ರವನ್ನು ಅನಾವಣ ಮಾಡಿದ್ದಕ್ಕಾಗಿ ಬಸವ ಅನುಯಾಯಿಗಳ ಪರವಾಗಿ ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಧನ್ಯವಾದ ಅರ್ಪಿಸಿದರು.

ಬೆಳಗಾವಿ, ವಿಧಾನಸಭೆ

ಬಸವಕಲ್ಯಾಣದ ಆಧುನಿಕ ಅನುಭವ ಮಂಟಪದಲ್ಲಿ ಮುಂದಿನ ದಿನಮಾನದಲ್ಲಿ ಇಲ್ಲಿ ವಿಧಾನಮಂಡಳದ ಅಧಿವೇಶನವನ್ನೂ ನಡೆಸಬಹುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸುವರ್ಣಸೌಧದಲ್ಲಿ ಸೋಮವಾರ ಅನುಭವ ಮಂಟಪ ತೈಲ ವರ್ಣಚಿತ್ರ ಅನಾವರಣ ಕುರಿತಾದ ಚರ್ಚೆಯನ್ನು ಭಾಗಿಯಾಗಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಸಂಕಲ್ಪ ಮಾಡಿದ್ದು, 2025ರ ಅಂತ್ಯಕ್ಕೆ ಆಧುನಿಕ ಅನುಭವ ಮಂಟಪ ಲೋಕಾರ್ಪಣೆ ಆಗಲಿದೆ ಎಂದು ತಿಳಿಸಿದರು.

770 ಕಂಬದಲ್ಲಿ ಶರಣರ ವಚನ:

ಪ್ರಸ್ತುತ ಪ್ರಗತಿಯಲ್ಲಿರುವ ಆಧುನಿಕ ಅನುಭವ ಮಂಟಪ ಕಾಮಗಾರಿಯ ಬಗ್ಗೆ ವಿವರಿಸಿದ ಈಶ್ವರ ಖಂಡ್ರೆ, ಇಲ್ಲಿ 770 ಕಂಬಗಳಲ್ಲಿ ಎಲ್ಲ ಶರಣರ ವಚನಗಳನ್ನು ಕೆತ್ತಿಸಲಾಗುವುದು ಎಂದೂ ತಿಳಿಸಿದರು.

ಬಸವಕಲ್ಯಾಣ ಅಭಿವೃದ್ಧಿ ಆಗಬೇಕು, ಜಗತ್ತಿಗೆ ಮಾದರಿ ಆಗಬೇಕು ಎಂಬ ಬೇಡಿಕೆ 2002ರಲ್ಲಿಯೇ ನಮ್ಮದಾಗಿತ್ತು. ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರ ರಚನೆಯಾಯಿತು. ಧರ್ಮಸಿಂಗ್ ಅವರ ಕಾರ್ಯಕಾಲದಲ್ಲಿ ಅದಕ್ಕೆ ಶಾಸನಸಭೆಯಲ್ಲಿ ಅನುಮೋದನೆ ಪಡೆಯಿತು. 2004ರಲ್ಲಿ ಅಲ್ಲಿನ ಗುಹೆಗಳ ಅಭಿವೃದ್ಧಿ ಕೆಲಸ ಆಯಿತು ಎಂದರು.

2016-17ರಲ್ಲಿ ತಾವು ಬೀದರ್ ಉಸ್ತುವಾರಿ ಸಚಿವರಾಗಿದ್ದಾಗ ನೂತನ ಆಧುನಿಕ ಅನುಭವ ಮಂಟಪ ನಿರ್ಮಾಣ ಮಾಡಬೇಕು ಎಂಬ ಜನರ ಬೇಡಿಕೆಯ ಬಗ್ಗೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿಳಿಸಿದಾಗ ಅವರು, ಅದಕ್ಕೆ ಸಮ್ಮತಿಸಿ, ಗೊ.ರು. ಚನ್ನಬಸಪ್ಪ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದರು ಎಂದು ಹೇಳಿದರು.

2018ರಲ್ಲಿ ಆಯವ್ಯಯದಲ್ಲಿ ಸಿದ್ದರಾಮಯ್ಯ ಅವರು ಬಸವ ಕಲ್ಯಾಣದ ಅಭಿವೃದ್ಧಿಗೆ, ಆಧುನಿಕ ಅನುಭವ ಮಂಟಪಕ್ಕೆ 100 ಕೋಟಿ ರೂ. ಹಂಚಿಕೆ ಮಾಡಿದರು, ನಂತರ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪನವರು 200 ಕೋಟಿ ರೂ. ನೀಡಿದರು. ಈಗ ಮತ್ತೆ ಸಿದ್ದರಾಮಯ್ಯ ಅವರು 100 ಕೋಟಿ ರು.. ಹಂಚಿಕೆ ಮಾಡಿದ್ದು, 628 ಕೋಟಿ ರು.ಗಳ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಸದನಕ್ಕೆ ತಿಳಿಸಿದರು.

ಇತಿಹಾಸದ ಸ್ಮರಣೆ:

ಬಸವಕಲ್ಯಾಣದಲ್ಲಿ ಅಂದಿನ ಮೈಸೂರು ಮಹಾರಾಜರಾಗಿದ್ದ ಜಯ ಚಾಮರಾಜೇಂದ್ರ ಒಡೆಯರ್‌ ಅನುಭವ ಮಂಟಪದ ಪುನರ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು, ನಂತರ ಅಂದಿನ ಮುಖ್ಯಮಂತ್ರಿ ಬಿ.ಡಿ.ಜತ್ತಿ ಅವರು, ಅನುಭವ ಮಂಟಪ ಪುನರ್ ನಿರ್ಮಾಣ ಕಾರ್ಯಕ್ಕೆ ಭೂಮಿಪೂಜೆ ಮಾಡಿದರು ಎಂದ ಅವರು, ಭಾಲ್ಕಿಯ ಹಿರೇಮಠ ಸಂಸ್ಥಾನದ ಪಟ್ಟಾಧ್ಯಕ್ಷರಾದ ಶ್ರೀ ಶ್ರೀ ಚನ್ನಬಸಪ್ಪ ಪಟ್ಟದೇವರು ನಂತರ ಈಗಿರುವ ಅನುಭವ ಮಂಟಪ ನಿರ್ಮಾಣ ಮಾಡಿದ ಘಟನಾವಳಿ ವಿವರಿಸಿದರು.

ಇನ್ನು ಇದೇ ವೇಳೆ ಸುವರ್ಣ ವಿಧಾನಸೌಧದಲ್ಲಿ ಅನುಭವಮಂಟಪದ ತೈಲವರ್ಣ ಚಿತ್ರವನ್ನು ಅನಾವಣ ಮಾಡಿದ್ದಕ್ಕಾಗಿ ಬಸವ ಅನುಯಾಯಿಗಳ ಪರವಾಗಿ ಧನ್ಯವಾದ ಅರ್ಪಿಸಿದರು.

Share this article