ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣದ ಕುವೆಂಪು ಪ್ರತಿಮೆ ಆವರಣದಲ್ಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಆಯೋಜಿಸಿದ್ದ ಸಾಮಾಜಿಕ ಪರಿವರ್ತನೆ ಹರಿಕಾರ ಅರಸು ಅವರ ೧೧೧ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು. ಜಾತಿ ಮತ್ತು ಪಕ್ಷಗಳ ಕಾರಣಕ್ಕಾಗಿ ವಿಭಜನೆಗೊಳ್ಳುತ್ತಿರುವ ಹಿಂದುಳಿದ ಸಮುದಾಯಗಳು ಶೇ.೧೯ರಷ್ಟು ಮೀಸಲಾತಿಯನ್ನು ಪಡೆಯುತ್ತಿದ್ದು, ಇದನ್ನು ಶೇ.೩೨ಕ್ಕೆ ಏರಿಸುವ ನಿಟ್ಟಿನಲ್ಲಿ ಗಂಭೀರ ಹೋರಾಟ ನಡೆಯಬೇಕಿದೆ ಎಂದು ಪ್ರತಿಪಾದಿಸಿದರು.
ಹಿಂದುಳಿದ ಸಮುದಾಯದ ಕೆಲವು ಜನರಲ್ಲಿ ಮೀಸಲಾತಿಯ ಕುರಿತು ಅಪಪ್ರಚಾರ ಮಾಡಲಾಗುತ್ತಿದ್ದು, ಇದರ ಪ್ರಭಾವಕ್ಕೊಳಗಾದ ಕೆಲವು ಹಿಂದುಳಿದ ಸಮುದಾಯಗಳು ಮೀಸಲಾತಿಯನ್ನು ವಿರೋಧಿಸುವವರ ಸಾಲಿನಲ್ಲಿ ನಿಲ್ಲುತ್ತಿರುವುದು ದುರಂತವಾಗಿದೆ. ಈ ಕಾಲಮಾನದಲ್ಲಿ ಮೀಸಲಾತಿ ಇಲ್ಲದಿದ್ದರೆ ಹಿಂದುಳಿದವರು ಉದ್ಯೋಗ, ಶಿಕ್ಷಣ ಮತ್ತು ರಾಜಕೀಯ ಕ್ಷೇತ್ರದಲ್ಲಿ ಉನ್ನತಿಯನ್ನು ಹೊಂದಲು ಸಾಧ್ಯವಾಗುವುದಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕು ಎಂದರು.ರಾಜಕೀಯವಾಗಿ ಪ್ರಬುದ್ಧತೆಯನ್ನು ಸಾಧಿಸಿರುವ ಸಮುದಾಯಗಳು ವರ್ಗವಾರು ಮೀಸಲಾತಿಯನ್ನು ಪಡೆಯುವಲ್ಲಿ ಒಗ್ಗಟ್ಟನ್ನು ಪ್ರದರ್ಶಿಸಿದಂತೆ ಹಿಂದುಳಿದ ಸಮಾಜಗಳು ಕೂಡ ಪಕ್ಷಾತೀತವಾಗಿ ಒಗ್ಗೂಡಿ ಮೀಸಲಾತಿಯನ್ನು ಪಡೆಯುವ ಮತ್ತು ಹೆಚ್ಚಿಸಿಕೊಳ್ಳುವ ಹೋರಾಟವನ್ನು ಮಾಡಬೇಕು ಎಂದರು.