ಹಾನಗಲ್ಲ: ಕಡ್ಡಾಯವಾಗಿ ಪ್ರತಿ ಸೋಮವಾರ ಟಾಸ್ಕ್ ಫೋರ್ಸ್ ಸಮಿತಿ ಸಭೆ ನಡೆಸಬೇಕು. ತಕ್ಷಣ ಕಂಟ್ರೋಲ್ ರೂಂ ಆರಂಭಿಸಿ ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸಿ ಎಂದು ಶಾಸಕ ಶ್ರೀನಿವಾಸ ಮಾನೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಲೂಕಿನಲ್ಲಿ ಯಾವುದೇ ಗ್ರಾಮದಲ್ಲಿಯೂ ಸಹ ಕೊಳವೆ ಬಾವಿ ಕೊರೆಯಿಸಬೇಕಾದರೂ ಕಡ್ಡಾಯವಾಗಿ ಟಾಸ್ಕ್‌ಫೋರ್ಸ್ ಸಮಿತಿಯ ಗಮನಕ್ಕೆ ತರಬೇಕು. ಅನಗತ್ಯವಾಗಿ ಕೊಳವೆ ಬಾವಿ ಕೊರೆಯಿಸಿ ಹಣ ಪೋಲು ಮಾಡುವ ಬದಲಿಗೆ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆ ಆಧಾರದಲ್ಲಿ ಪಡೆದು ಪೂರೈಕೆಗೆ ಮುಂದಾಗಿ. ಕೊಳವೆ ಬಾವಿಗಳಿಂದ ನೀರು ಪೂರೈಸಲು ಪೈಪ್‌ಲೈನ್ ಅಳತೆ ಹೆಚ್ಚಿದ್ದರೆ ಅಂಥಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಿ. ಕುಡಿಯುವ ನೀರಿನ ಸಮಸ್ಯೆಯನ್ನು ಯಾವುದೇ ಕಾರಣಕ್ಕೂ ಅಲಕ್ಷಿಸುವಂತಿಲ್ಲ ಎಂದು ಶ್ರೀನಿವಾಸ ಮಾನೆ ಹೇಳಿದರು.
ತಹಸೀಲ್ದಾರ್, ತಾಪಂ ಇಒ, ಗ್ರಾಮೀಣ ನೀರು ಸರಬರಾಜು ಇಲಾಖೆಯ ಎಇಇ ನಿತ್ಯವೂ ಕನಿಷ್ಠ ಅರ್ಧ ಗಂಟೆ ಒಂದೆಡೆ ಸೇರಿ ಚರ್ಚೆ ಕೈಗೊಳ್ಳಿ. ಸಮಸ್ಯೆಗಳಿರುವ ಗ್ರಾಮಗಳ ಮಾಹಿತಿ ಪಡೆದು ಪರಿಹಾರದ ಕ್ರಮಗಳನ್ನು ಪರಾಮರ್ಶಿಸಿ. ಚುನಾವಣೆ ನೀತಿ ಸಂಹಿತೆ ಬರುವುದರಿಂದ ಅಧಿಕಾರಿಗಳೇ ಹೆಚ್ಚಿನ ಕಾಳಜಿ, ಮುತುವರ್ಜಿ ವಹಿಸಬೇಕು ಎಂದು ಸೂಚಿಸಿದ ಶಾಸಕ ಮಾನೆ ಅವಶ್ಯವಿದ್ದಲ್ಲಿ ಪೈಪ್‌ಲೈನ್ ಅಳವಡಿಸಲು ಈಗಾಗಲೇ ೨೫ ಲಕ್ಷ ರು. ಅನುದಾನ ಬಿಡುಗಡೆಯಾಗಿದ್ದು, ಇನ್ನೂ ೨೦ ಲಕ್ಷ ರು. ಶೀಘ್ರ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.ತಹಸೀಲ್ದಾರ್ ಎಸ್. ರೇಣುಕಮ್ಮ ಮಾತನಾಡಿ, ತಾಲೂಕಿನಲ್ಲಿ ಈಗಾಗಲೇ ೧೦ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆ ಆಧಾರದಲ್ಲಿ ಪಡೆದು ನೀರು ಪೂರೈಸಲಾಗುತ್ತಿದೆ. ಕೊಳವೆ ಬಾವಿಗಳಲ್ಲಿ ಅಂತರ್ಜಲ ಪ್ರಮಾಣ ಕಡಿಮೆಯಾಗುತ್ತಿರುವುದರಿಂದ ಪೂರೈಕೆ ಸವಾಲಿನಿಂದ ಕೂಡಿದೆ. ಆದರೂ ಕೂಡ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ಕಾಳಜಿ ವಹಿಸಲಾಗಿದೆ ಎಂದು ತಿಳಿಸಿದರು.