- 200 ಕೋಟಿ ರು ವೆಚ್ಚದಲ್ಲಿ ಕೃಷಿ ಭಾಗ್ಯ ಯೋಜನೆಗೆ ಸಂಪುಟ ಅನುಮೋದನೆ
ರಾಜ್ಯದಲ್ಲಿ 100 ಹೈಟೆಕ್ ಹಾರ್ವೆಸ್ಟ್ ಹಬ್ ಸ್ಥಾಪನೆ ಸೇರಿದಂತೆ 200 ಕೋಟಿ ರು. ವೆಚ್ಚದಲ್ಲಿ ಕೃಷಿ ಭಾಗ್ಯ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಶೀಘ್ರದಲ್ಲಿಯೇ ಅನುಷ್ಠಾನಗೊಳಿಸಲಾಗುವುದು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ತಾಲೂಕಿನ ದೇವಲಾಪುರದ ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿ ಜಿಲ್ಲಾಡಳಿತ, ಕೃಷಿ ಮತ್ತು ಜಲಾನಯನ ಇಲಾಖೆ ಆಯೋಜಿಸಿದ್ದ ಜಲಾನಯನ ಮೇಳ ಹಾಗೂ ಪ್ರಧಾನ ಮಂತ್ರಿ ಸಿಂಚಾಯಿ ಯೋಜನೆಯಡಿ ಫಲಾನುಭವಿಗಳಿಗೆ ಪರಿಕರ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ರಾಜ್ಯದ 223 ತಾಲೂಕುಗಳು ಬರಪೀಡಿತ ಎಂದು ಘೋಷಣೆಯಾಗಿದೆ. 17 ಸಾವಿರ ಕೋಟಿ ರು. ಪರಿಹಾರ ಕೋರಿದ್ದೇವೆ. ಆದರೆ, ಕೇಂದ್ರ ಸರ್ಕಾರದಿಂದ ಈವರೆಗೂ ಯಾವುದೇ ನೆರವು ಮತ್ತು ಪೂರಕವಾದ ಸ್ಪಂದನೆ ದೊರೆತಿಲ್ಲ. ರೈತರ ಪರ ರಾಜ್ಯ ಸರ್ಕಾರ 1500 ಕೋಟಿ ರು. ವಿಮೆ ಹಣ ಮಾಡಿದ್ದು, ಈಗಾಗಲೇ ರೈತರಿಗೆ 230 ಕೋಟಿ ರು. ವಿಮೆ ಪಾವತಿಯಾಗಿದೆ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು. ಚುನಾವಣೆಯಲ್ಲಿ ಯೋಗ್ಯರನ್ನು ಆಯ್ಕೆ ಮಾಡುವ ಅಧಿಕಾರ ಜನರ ಕೈಯಲ್ಲಿರುತ್ತದೆ. ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು. ಅವಕಾಶ ಸಿಕ್ಕಾಗ ಜನರಿಗೆ ಸಹಾಯ ಮಾಡಬೇಕು. ನೀವು ನೀಡಿರುವ ಜವಾಬ್ದಾರಿಯನ್ನು ಅತ್ಯಂತ ಕಾಳಜಿವಹಿಸಿ ಮಾಡುತ್ತಿದ್ದೇನೆ ಎಂದರು.
ರಾಜ್ಯದಲ್ಲಿ ಕೃಷಿ, ಶಿಕ್ಷಣ, ಪಶು ಇಲಾಖೆ ಸೇರಿದಂತೆ ಬಹುತೇಕ ಎಲ್ಲ ಇಲಾಖೆಗಳಲ್ಲಿಯೂ ಸಾವಿರಾರು ಹುದ್ದೆಗಳು ಖಾಲಿಯಿದ್ದು, 13 ಸಾವಿರ ಶಿಕ್ಷಕರ ನೇಮಕಾತಿ ಮಾಡಲಾಗುವುದು. ಅಂತೆಯೇ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೂ ಅಗತ್ಯ ಕ್ರಮ ವಹಿಸಲಾಗುವುದು. ಹೇಮಾವತಿ ಜಲಾಶಯದಿಂದ ಜಿಲ್ಲೆಗೆ ನೀರು ಹರಿಸುವ ನಾಲೆಗಳ ದುರಸ್ಥಿಗೆ ಕ್ರಮ ವಹಿಸಲಾಗುತ್ತಿದೆ ಎಂದರು.
ಜಲಾನಯನ ಕಾರ್ಯಕ್ರಮದಡಿ ರೈತರ ಜೀವನೋಪಾಯ ಚಟುವಟಿಕೆ, ಉತ್ಪಾದನಾ ಪದ್ಧತಿ ಹಾಗೂ ಖುಷ್ಕಿ ತೋಟಗಾರಿಕೆ ಘಟಕದಡಿ ಹಿಟ್ಟಿನ ಗಿರಣಿ, ಎಣ್ಣೆ ಗಾಣ, ಹಪ್ಪಳ ತಯಾರಿಸುವ ಯಂತ್ರ, ನಾಟಿಕೋಳಿ, ಫೈಬರ್ ದೋಟಿ, ಲ್ಯಾಡರ್ ಸೇರಿದಂತೆ ವಿವಿಧ ಬಗೆಯ ಹಣ್ಣಿನ ಸಸಿಗಳನ್ನು ವಿತರಿಸಲಾಯಿತು.
ಸಮಾರಂಭಕ್ಕೆ ಆಗಮಿಸಿದ ನಿರ್ಮಲಾನಂದನಾಥ ಶ್ರೀಗಳು ಮತ್ತು ಸಚಿವ ಎನ್.ಚಲುವರಾಯಸ್ವಾಮಿ ಅವರನ್ನು ದೇವಲಾಪುರ ಮುಖ್ಯರಸ್ತೆಯಿಂದ ವೇದಿಕೆವರೆಗೆ ಪೂರ್ಣಕುಂಭ ಸ್ವಾಗತ ಮತ್ತು ವಿವಿಧ ಜಾನಪದ ಕಲಾತಂಡಗಳೊಂದಿಗೆ ಎತ್ತಿನ ಗಾಡಿಯಲ್ಲಿ ಮೆರವಣಿಗೆ ಮೂಲಕ ಕರೆತರಲಾಯಿತು.
ನಾಗಮಂಗಲ ತಾಲೂಕಿನ ದೇವಲಾಪುರದಲ್ಲಿ ನಡೆದ ಸಮಾರಂಭದಲ್ಲಿ ಆದಿಚುಂಚನಗರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥಸ್ವಾಮೀಜಿ ಮತ್ತು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ರೈತರಿಗೆ ಪರಿಕರಗಳನ್ನು ವಿತರಿಸಿದರು.