ಧಾರವಾಡ:
ಜಿಲ್ಲಾ ಪಂಚಾಯಿತಿಯಲ್ಲಿ ಸೋಮವಾರ ಜಿಲ್ಲೆಯ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಅವರು, ಪೌತಿ ಖಾತೆಯಲ್ಲಿ ಮಾರ್ಚ್‌ಯೊಳಗೆ ಗುರಿಮೀರಿ ಸಾಧನೆ ಮಾಡುವ ಗ್ರಾಮ ಆಡಳಿತ ಅಧಿಕಾರಿಗಳಿಗೆ ಹಾಗೂ ಗ್ರಾಮ ಸಹಾಯಕರಿಗೆ ಕಂದಾಯ ಇಲಾಖೆಯಿಂದ ₹ 5 ಕೋಟಿ ಪ್ರೋತ್ಸಾಹ ಧನ ವಿತರಿಸಲಾಗುತ್ತದೆ ಎಂದರು.
ಜಿಲ್ಲೆಯಲ್ಲಿ ಹಕ್ಕುಪತ್ರ ವಿತರಣೆಗೆ 5,378 ಅರ್ಜಿ ಸಲ್ಲಿಕೆಯಾಗಿದ್ದು, 4,331 ಅರ್ಜಿ ಅನುಮೋದಿಸಿ ವಿತರಣೆಗೆ ಸಿದ್ಧಪಡಿಸಲಾಗಿದೆ. ಬಾಕಿ ಇರುವ 915 ಅರ್ಜಿಗಳ ವಿಲೇವಾರಿಗೆ ಕ್ರಮ ವಹಿಸಬೇಕು ಎಂದರು. ಜಿಲ್ಲೆಯಲ್ಲಿ ಆಧಾರ ಸೇಡಿಂಗ್ ಪ್ರಗತಿಯಲ್ಲಿದ್ದು ಶೇ. 85.80ರಷ್ಟು ಗುರಿ ಸಾಧಿಸಲಾಗಿದೆ. ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ 9 ಮೇಲ್ಮನವಿ, ಉಪವಿಭಾಗಧಿಕಾರಿಗಳ ನ್ಯಾಯಾಲಯದಲ್ಲಿ 11, ವಿವಿಧ ತಹಸೀಲ್ದಾರ್ ನ್ಯಾಯಾಲಯಗಳಲ್ಲಿ 69 ಪ್ರಕರಣಗಳು ಬಾಕಿ ಇದ್ದು ಶೀಘ್ರದಲ್ಲಿ ಇತ್ಯರ್ಥಪಡಿಸಲು ಸೂಚಿಸಿದ ಸಚಿವರು, ಭೂಸುರಕ್ಷಾ ಯೋಜನೆ, ಲ್ಯಾಂಡ್‍ಬಿಟ್ ಯೋಜನೆ, ಇ-ಆಫೀಸ್ ಯೋಜನೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲು ತಿಳಿಸಿದರು.ನಕಾಶೆ ರಸ್ತೆ ಅಭಿವೃದ್ಧಿ:
ರಾಜ್ಯದ ವಿವಿಧೆಡೆ ಹೊಲದ ರಸ್ತೆ ಸಮಸ್ಯೆ ಎದುರಾಗಿದ್ದು, ನಕಾಶೆಯಲ್ಲಿ ಇರುವ ರಸ್ತೆ ಸುಧಾರಣೆ ಮಾಡುವುದು ನಮ್ಮ ಕರ್ತವ್ಯ. ಆದರೆ, ದಾಖಲೆ ಇಲ್ಲದೇ ರೂಢಿಗತ ಅಥವಾ ವಾಡಿಕೆಗಳ ರಸ್ತೆಗಳಿದ್ದಲ್ಲಿ, ಇವು ಪ್ರಸ್ತುತ ಸಮಸ್ಯೆಗೆ ತಂದೊಡ್ಡಿವೆ. ಹೀಗಾಗಿ ಜಮೀನಿಗೆ ಹೋಗಿ ಬರಲು ರೈತರ ಪರವಾಗಿ ಆದೇಶಿಸಲು ತಹಸೀಲ್ದಾರ್‌ಗೆ ಸೂಚಿಸಲಾಗಿದೆ ಎಂದರು.ಭೂ ಗ್ಯಾರಂಟಿ:
ರಾಜ್ಯದಲ್ಲಿ ದಶಕಗಳಿಂದ ದಾಖಲೆ ರಹಿತ ವಸತಿ ಪ್ರದೇಶಗಳಿದ್ದು ತಾಂಡಾ, ಹಟ್ಟಿ, ಗುಂಪು ಜೀವನವಿದೆ. ಅವರು ವಾಸಿಸುವ ಪ್ರದೇಶ, ಗ್ರಾಮಕ್ಕೆ ಈಗ ಕಂದಾಯ ಗ್ರಾಮದ ಸ್ಥಾನಮಾನ ನೀಡುತ್ತಿದ್ದು ಮನೆಗಳಿಗೆ ಹಕ್ಕುಪತ್ರ ಕೊಡಲಾಗುತ್ತಿದೆ. ಎರಡೂವರೆ ವರ್ಷದಲ್ಲಿ 2.20 ಲಕ್ಷ ದಾಖಲೆ ರಹಿತ ಮನೆಗಳಿಗೆ ಹಕ್ಕುಪತ್ರ ಕೊಟ್ಟಿದ್ದೇವೆ ಎಂದ ಸಚಿವರು, ಈಗಾಗಲೇ ಹೊಸಪೇಟೆಯಲ್ಲಿ 1.11 ಲಕ್ಷ ಹಕ್ಕುಪತ್ರ ನೀಡಿದ್ದು ಫೆ. 13ರಂದು ಹಾವೇರಿಯಲ್ಲಿ ಮತ್ತೆ 1.10 ಡಿಜಿಟಲ್ ಹಕ್ಕುಪತ್ರ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.ಸಭೆಯಲ್ಲಿ ಶಾಸಕರಾದ ಎನ್.ಎಚ್. ಕೋನರಡ್ಡಿ, ಎಫ್.ಎಚ್. ಜಕ್ಕಪ್ಪನವರ ಮಾತನಾಡಿದರು. ಪ್ರಭಾರ ಜಿಲ್ಲಾಧಿಕಾರಿ ಭುವನೇಶ ಪಾಟೀಲ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಐಎಎಸ್ ಪ್ರೋಬೆಷನರಿ ಅಧಿಕಾರಿ ರೀತಿಕಾ ವರ್ಮಾ, ಉಪವಿಭಾಗಾಧಿಕಾರಿ ಶಾಲಂ ಹುಸೇನ, ತಹಸೀಲ್ದಾರ್‌ರು, ತಾಪಂ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳಿದ್ದರು.ಬೆರಳ ತುದಿಯಲ್ಲಿ ದಾಖಲೆ....
ಕಂದಾಯ ಇಲಾಖೆಯಲ್ಲಿ ಒಂದು ದೃಢೀಕೃತ ದಾಖಲೆ ಪಡೆಯಲು ರೈತರು, ಸಾರ್ವಜನಿಕರು ಕಚೇರಿಗೆ ಅಲೆದು ಕೊನೆಗೆ ಮಧ್ಯವರ್ತಿಗಳಿಗೆ ಹಣ ಕೊಟ್ಟು ದಾಖಲೆ ಪಡೆದುಕೊಳ್ಳಬೇಕಿದೆ. ಅಲ್ಲದೇ, ದಾಖಲೆ ಕಳೆದಿವೆ ಅಥವಾ ನಕಲು ಮಾಡಲಾಗುತ್ತಿದೆ ಎಂಬ ದೂರುಗಳು ಸಹ ನಮ್ಮ ಎದುರು ಬಂದಿದ್ದವು. ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಲು ಭೂ ಸುರಕ್ಷಾ ಯೋಜನೆ ಜಾರಿಗೊಳಿಸಿದ್ದು ಈ ವರೆಗೆ 64.50 ಕೋಟಿ ಪುಟಗಳ ದಾಖಲೆಗಳನ್ನು ಸ್ಕ್ಯಾನ್ ಮಾಡಲಾಗಿದೆ. ಇನ್ಮುಂದೆ ಯಾವುದೇ ದಾಖಲೆ ಪಡೆದುಕೊಳ್ಳಲು ಯಾರೂ ಕಚೇರಿಗೆ ಅಲೆದಾಡುವ ಸಂದರ್ಭವಿಲ್ಲ. ದೃಢೀಕೃತ ದಾಖಲೆಯನ್ನು ಆನ್‌ಲೈನ್ ಮೂಲಕವೇ ಪಡೆದುಕೊಳ್ಳಬಹುದು. ಬೆರಳ ತುದಿಯಲ್ಲಿಯೇ ದಾಖಲೆಗಳು ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಸಚಿವ ಬೈರೇಗೌಡ ಹೇಳಿದರು.