ಬಳ್ಳಾರಿ: ಕಲಬುರಗಿ ವ್ಯಾಪ್ತಿಯ ಏಳು ಜಿಲ್ಲೆಗಳಲ್ಲಿನ ರಂಗಕಲಾವಿದರನ್ನು ಜತೆಗೂಡಿಸಿ ರಂಗನಾಟಕ ಉಳಿಯುವಿಕೆ ಮತ್ತು ಬೆಳೆಸುವಿಕೆಗೆ ಅನಿಸಿಕೆ-ಅಭಿಪ್ರಾಯಗಳನ್ನು ಸಂಗ್ರಹಿಸಲು ‘ರಂಗದಂಗಳದಲ್ಲಿ ಮಾತುಕತೆ’ ಸಭೆ ಏರ್ಪಡಿಸಲು ನಿರ್ಧರಿಸಲಾಗಿದೆ ಎಂದು ಕಲಬುರಗಿ ರಂಗಾಯಣದ ನಿರ್ದೇಶಕಿ ಡಾ. ಸುಜಾತಾ ಜಂಗಮಶೆಟ್ಟಿ ತಿಳಿಸಿದರು.
ಕಲಬುರಗಿ ರಂಗಾಯಣವು ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳಿಗೂ ಹೊಂದಿಕೊಂಡಿದೆ. ಕಲಬುರಗಿ ರಂಗಾಯಣವನ್ನು ಕ.ಕ. ಭಾಗದ ಹೋಬಳಿ ಮಟ್ಟದಲ್ಲಿಯೂ ತಲುಪಬೇಕು ಎಂಬುದು ಕಲಬುರಗಿ ರಂಗಾಯಣದ ಮುಖ್ಯ ಉದ್ದೇಶವಾಗಿದೆ. ಪ್ರಸ್ತುತದಲ್ಲಿ ರಂಗಭೂಮಿಯು ಅಳಿವಿಂಚಿನಲ್ಲಿದೆ. ರಂಗಕಲೆಯನ್ನು ಮತ್ತು ರಂಗಭೂಮಿ ಕಲಾವಿದರನ್ನು ಪ್ರೋತ್ಸಾಹಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಯುವಪೀಳಿಗೆಯು ಸಹ ರಂಗ ಪ್ರವೇಶಿಸಲು ಶಾಲಾ-ಕಾಲೇಜುಗಳಲ್ಲಿ ನಾಟಕ ರಂಗದ ಕುರಿತು ಅರಿವು ಸಂವಾದ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಹೇಳಿದರು.
ಬಳ್ಳಾರಿ ಜಿಲ್ಲೆ ರಂಗಭೂಮಿಯ ತವರೂರರಾಗಿದೆ. ಬಳ್ಳಾರಿ ಜಿಲ್ಲೆಗೆ ಡಾ. ಜೋಳದರಾಶಿ ದೊಡ್ಡನಗೌಡ, ರಾಘವ, ಬೆಳಗಲ್ಲು ವೀರಣ್ಣ, ಸುಭದ್ರಮ್ಮ ಮಾನ್ಸೂರು ಸೇರಿದಂತೆ ಹಲವಾರು ಗಣ್ಯರ ಕೊಡುಗೆ ಅಪಾರವಿದೆ. ಈ ಭಾಗದ ಬಯಲಾಟ, ದೊಡ್ಡಾಟ ಮತ್ತು ತೊಗಲು ಗೊಂಬೆಯಾಟ ರಂಗಕಲೆಯನ್ನು ಉಳಿಸುವ ಮತ್ತು ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ. ಕಲೆ ಕುರಿತು ತರಬೇತಿ ನೀಡಲು, ಕಲೆ ಉಳಿಸಲು ಒಂದು ವಾರದ ಶಿಬಿರ ಆಯೋಜಿಸಲಾಗುವುದು. ಇದರಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ಸಹ ಭಾಗವಹಿಸಲು ಒಲವು ತೋರಿಸುತ್ತಿದ್ದು, ಅವರಿಗೂ ಸಹ ಅವಕಾಶ ಕಲ್ಪಿಸಬೇಕಿದೆ ಎಂದರು.ಗಡಿಭಾಗದ ಮರಾಠಿ, ತೆಲುಗು ಭಾಷೆ ರಂಗಭೂಮಿಯೊಂದಿಗೆ ಹೊಂದಿಕೊಂಡು ನಾಟಕ ಶಿಬಿರ ಹಮ್ಮಿಕೊಳ್ಳಲಾಗುವುದು. ಇದರಿಂದ ಅಲ್ಲಿನ ನಾಟಕ ಶೈಲಿ, ಆಯಾಮಗಳನ್ನು ಪರಿಚಯಿಸಿಕೊಳ್ಳಬೇಕಿದೆ. ಈ ಕುರಿತು ಗಡಿ ಅಭಿವೃದ್ಧಿ ಪ್ರಾಧಿಕಾರದ ಜತೆ ಚರ್ಚಿಸಲಾಗುವುದು ಎಂದರು.
ರಂಗಭೂಮಿಯಲ್ಲಿ ಪ್ರಸ್ತುತದಲ್ಲಿನ ವಾಸ್ತವತೆ, ಬೆಳವಣಿಗೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಬಳ್ಳಾರಿಯ ರಂಗಕಲಾವಿದರೊಂದಿಗೆ ಸಂವಾದ ನಡೆಸಿದರು. ಇದೇ ವೇಳೆ ರಂಗಕಲಾವಿದರಿಂದ ಸಲಹೆ ಪಡೆದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ ಹಾಗೂ ರಂಗಭೂಮಿಯ ಹಿರಿಯ ಕಲಾವಿದರು ಭಾಗವಹಿಸಿದ್ದರು.