ಕನ್ನಡಪ್ರಭ ವಾರ್ತೆ ತುರುವೇಕೆರೆ
ಶಾಂತಿ ಸಂದೇಶವನ್ನು ಪ್ರಪಂಚದಾದ್ಯಂತ ಸಾರುತ್ತಿರುವ ಭಾರತದ ವಿರುದ್ಧ ಯಾವಾಗಲೂ ಕತ್ತಿ ಮಸೆಯುತ್ತಿರುವ ಪಾಕಿಸ್ತಾನಕ್ಕೆ ತಕ್ಕ ಬುದ್ದಿ ಕಲಿಸಬೇಕೆಂದು ಪ್ರೊ.ಪುಟ್ಟರಂಗಪ್ಪ ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು. ಕಾಶ್ಮೀರದ ಪುಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ನಡೆಸಿದ ನರಮೇಧವನ್ನು ಖಂಡಿಸಿ ತಾಲೂಕು ನಾಗರೀಕ ವೇದಿಕೆ, ಕನ್ನಡ ಸಾಹಿತ್ಯ ಪರಿಷತ್, ತಾಲೂಕು ಒಕ್ಕಲಿಗರ ಸಂಘ, ತಾಲೂಕು ಬ್ರಾಹ್ಮಣ ಸೇವಾ ಸಮಾಜ, ತಾಲೂಕು ವೀರಶೈವ, ಲಿಂಗಾಯತ ಮಹಾ ಸಭಾ, ಮುಸ್ಲಿಂ ಸಮುದಾಯ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಪಟ್ಟಣದಲ್ಲಿ ನಡೆದ ಮಾನವ ಸರಪಳಿ ಪ್ರತಿಭಟನೆ ವೇಳೆ ಅವರು ಮಾತನಾಡುತ್ತಿದ್ದರು. ಭಾರತದ ತಾಳ್ಮೆಗೂ ಮಿತಿ ಇದೆ. ಕಾಶ್ಮೀರದಲ್ಲಿ ೩೦೭ ನೇ ವಿಧಿಯನ್ನು ರದ್ದುಗೊಳಿಸಿ ಕಾಶ್ಮೀರದಲ್ಲಿ ಶಾಂತಿ ನೆಲಸಲಾಗಿತ್ತು. ಕಾಶ್ಮೀರದ ಬಹುಪಾಲು ಮಂದಿ ಭಾರತದ ಆಡಳಿತವನ್ನು ಮೆಚ್ಚಿ ನೆಮ್ಮದಿಯ ಜೀವನ ಆರಂಭಿಸಿದ್ದರು. ಇದನ್ನು ಸಹಿಸದ ಪಾಕಿಸ್ತಾನ ವಿನಾಕಾರಣ ಕಾಲ್ಕೆರೆದುಕೊಂಡು ಜಗಳ ತೆಗೆಯುತ್ತಿದೆ. ಈಗ ಕಾಶ್ಮೀರ ಪ್ರವಾಸ ಮಾಡುತ್ತಿದ್ದ ಅಮಾಯಕ ಪ್ರವಾಸಿಗರನ್ನು ಗುಂಡಿಕ್ಕಿ ಕೊಂದಿದ್ದು ಖಂಡನೀಯ. ಇದರ ಸೇಡನ್ನು ಭಾರತ ತೀರಿಸೇ ತೀರಬೇಕು. ಭಯೋತ್ಪಾದಕರ ಆವಾಸ ಸ್ಥಾನವಾಗಿರುವ ಪಾಕಿಸ್ಥಾನಕ್ಕೆ ತಕ್ಕಪಾಠ ಕಲಿಸಬೇಕು ಎಂದು ಹೇಳಿದರು. ಡಾ. ಚೌದ್ರಿ ನಾಗೇಶ್ ಮಾತನಾಡಿ ಪಾಕಿಸ್ಥಾನದ ಉಗ್ರವಾದವನ್ನು ನಾವು ಖಂಡಿಸಬೇಕಿದೆ. ಪಾಕಿಸ್ತಾನ ನಮ್ಮ ದೇಶದ ಮೇಲೆ ದ್ವೇಷವನ್ನು ಬಿತ್ತುವಂತಹ ಕೆಲಸ ಮಾಡುತ್ತಿದೆ. ಕೇಂದ್ರ ಸರ್ಕಾರ ದಿಟ್ಟ ಕ್ರಮ ಕೈಗೊಂಡು ಉಗ್ರರನ್ನು ಬುಡ ಸಮೇತ ಕಿತ್ತು ಹಾಕಬೇಕು ಎಂದು ಒತ್ತಾಯಿಸಿದರು. ಪ್ರತಿಭಟನಕಾರರು ಪಟ್ಟಣದ ಸತ್ಯಗಣಪತಿ ಆಸ್ಥಾನ ಮಂಟಪದಿಂದ ಮೆರವಣಿಗೆ ಮೂಲಕ ಬಾಣಸಂದ್ರ ಸರ್ಕಲ್ ನಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲ ಕಾಲ ರಸ್ತೆ ತಡೆ ನಡೆಸಿ ಉಗ್ರರಿಗೆ ತಕ್ಕ ಶಿಕ್ಷೆಯಾಗಬೇಕು. ಉಗ್ರರಿಗೆ ಸಹಕಾರ ನೀಡುತ್ತಿರುವ ಪಾಕಿಸ್ತಾನದ ವಿರುದ್ದ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ನಂತರ ಗ್ರೇಡ್ ೨ ತಹಸೀಲ್ದಾರ್ ಸುಮತಿಯವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಹಾಗೂ ವಕೀಲ ಪಿ.ಎಚ್.ಧನಪಾಲ್, ಲಯನ್ಸ್ ಕ್ಲಬ್ ಅಧ್ಯಕ್ಷ ರಂಗನಾಥ್, ಕಸಾಪ ಅಧ್ಯಕ್ಷ ಡಿ.ಪಿ.ರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೊಳಾಲ ನಾಗರಾಜು, ದೇವರಾಜು, ಇನ್ನರ್ ವೀಲ್ ಅಧ್ಯಕ್ಷೆ ನೇತ್ರಾ ಸಿದ್ದಲಿಂಗಸ್ವಾಮಿ, ರೋಟರಿ ಕ್ಲಬ್ ಅಧ್ಯಕ್ಷ ಸಾ.ಶಿ.ದೇವರಾಜು, ಸಿಐಟಿಯು ಸತೀಶ್, ಬೀದಿಬದಿ ವ್ಯಾಪಾರಿ ಸಂಘ ಅಧ್ಯಕ್ಷ ಮಾರುತಿ, ಬ್ರಾಹ್ಮಣ ಸಮಾಜದ ಆರ್.ಸತ್ಯನಾರಾಯಣ್ ಮುಖಂಡರಾದ ಹಾವಾಳ ರಾಮೇಗೌಡ, ಸಿ.ಎಸ್.ಮೂರ್ತಿ, ನಯಾಜ್, ಶಿವರಾಜು, ಗಂಗಾಧರ್ ದೇವರ ಮನೆ, ಬಾಣಸಂದ್ರ ಕೃಷ್ಣಮೂರ್ತಿ, ಜಪ್ರುಲ್ಲಾ, ಚಂದ್ರಕಲಾ, ಉಷಾ ಶ್ರೀನಿವಾಸ್, ಇಂದಿರಮ್ಮ, ಗುತ್ತಿಗೆದಾರ ತ್ಯಾಗರಾಜ್, ತಾವರೇಕೆರೆ ಸುರೇಶ್, ಜಾಪರ್, ಜಫ್ರುಲ್ಲಾ, ಅಫ್ಜಲ್, ವೇಣುಗೋಪಾಲ್, ಕನ್ನಡಕಂದ ವೆಂಕಟೇಶ್ ಸೇರಿದಂತೆ ಸಂಘ ಸಂಸ್ಥೆ ಪದಾದಿಕಾರಿಗಳು ನಾಗರೀಕರು ಇತರರು ಇದ್ದರು.