ಹಿಂದೂಗಳಿಗೆ ಇರುವುದು ಇದೊಂದೇ ದೇಶ

KannadaprabhaNewsNetwork |  
Published : Apr 28, 2025, 11:47 PM IST
ಸೋಮವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.  | Kannada Prabha

ಸಾರಾಂಶ

ಹಿಂದೂಗಳ ನಂಬಿಕೆ ಆಚರಣೆ ಮೇಲಿನ ದಬ್ಬಾಳಿಕೆ, ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ನಡೆಸಿದ ಹಿಂದೂಗಳ ಹತ್ಯೆ ಖಂಡಿಸಿ ಹಿಂದೂ ರಕ್ಷಣಾ ಸಮಿತಿ ನೇತೃತ್ವದಲ್ಲಿ ವಿವಿಧ ಸಮಾಜಗಳ ಮುಖಂಡರು ಸೋಮವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ, ತುಮಕೂರು

ಹಿಂದೂಗಳ ನಂಬಿಕೆ ಆಚರಣೆ ಮೇಲಿನ ದಬ್ಬಾಳಿಕೆ, ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ನಡೆಸಿದ ಹಿಂದೂಗಳ ಹತ್ಯೆ ಖಂಡಿಸಿ ಹಿಂದೂ ರಕ್ಷಣಾ ಸಮಿತಿ ನೇತೃತ್ವದಲ್ಲಿ ವಿವಿಧ ಸಮಾಜಗಳ ಮುಖಂಡರು ಸೋಮವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಬಿಜಿಎಸ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪಾದಯಾತ್ರೆಯಲ್ಲಿ ಆಗಮಿಸಿ, ಡಿಸಿ ಕಚೇರಿ ಬಳಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹಿರೇಮಠದ ಅಧ್ಯಕ್ಷ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಧರ್ಮ ಕೇಳಿ ಹಿಂದೂಗಳನ್ನು ಹತ್ಯೆ ಮಾಡಿರುವುದು ಕ್ಷಮಿಸಲಾಗದ ಘೋರ ಅಪರಾಧ. ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಲೇಬೇಕು. ಈ ವಿಚಾರದಲ್ಲಿ ಭಾರತ ಸರ್ಕಾರ ತಕ್ಕ ಪ್ರತಿಕಾರ ತೀರಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.

ವಿವಿಧತೆಯಲ್ಲಿ ಏಕತೆಯಿಂದ ಬಾಳುತ್ತಿರುವ ಭಾರತೀಯರು ದಯವೇ ಧರ್ಮದ ಮೂಲವೆಂದು ಸಾರಿದವರು, ಕಳಬೇಡ ಕೊಲಬೇಡ ಎಂದು ಹೇಳುವವರು, ಮಾತೃಭೂಮಿಯನ್ನು ತಾಯಿಯೆಂದು ಗೌರವಿಸುವವರು. ಇಂತಹ ಹಿಂದೂಗಳನ್ನೇ ಗುರಿಯಾಗಿಸಿಕೊಂಡು ಕೊಲ್ಲುವುದನ್ನು ಯಾವ ಧರ್ಮವೂ ಸಹಿಸುವುದಿಲ್ಲ. ಭಾರತ ಸರ್ಕಾರ ಭಯೋತ್ಪಾದಕರನ್ನು ಮಟ್ಟ ಹಾಕಬೇಕು, ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ರಾಜಕಾರಣಿಗಳು ಜವಾಬ್ದಾರಿಯಿಂದ ವರ್ತಿಸಬೇಕು. ಚುನಾವಣೆ ಗೆದ್ದು ಜನರ ಪ್ರತಿನಿಧಿಯಾದವರು ಎಲ್ಲರನ್ನೂ ಒಂದೇ ಭಾವನೆಯಿಂದ ಕಾಣಬೇಕು, ಕೆಲ ಸಮುದಾಯವನ್ನು ಓಲೈಸುವುದು, ಕೆಲವರನ್ನು ಕಡೆಗಣಿಸುವುದನ್ನು ಮಾಡಕೂಡದು. ವಿಶೇಷವಾಗಿ ದೇಶದ ಭದ್ರತೆಗೆ ಸರ್ಕಾರ ಹಾಗೂ ಪ್ರತಿಯೊಬ್ಬರೂ ಬದ್ಧವಾಗಬೇಕು. ದೇಶ ರಕ್ಷಣೆ ಎಲ್ಲರ ಹೊಣೆ ಎಂದು ಸ್ವಾಮೀಜಿ ಹೇಳಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಪದೇಪದೆ ಹಿಂದೂಗಳ ಭಾವನೆ, ಆಚಾರಗಳಿಗೆ ಧಕ್ಕೆ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಇದನ್ನು ನಾವು ಸಹಿಸಲಾಗುವುದಿಲ್ಲ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೂ ಸಹಿಸುವುದಿಲ್ಲ. ಪಹಲ್ಗಾಮ್‌ನಲ್ಲಿ ಹಿಂದೂಗಳ ದಾರುಣ ಹತ್ಯೆಗೆ ಪ್ರತಿಕಾರ ಕಠಿಣವಾಗಿರುತ್ತದೆ. ಇಸ್ರೇಲ್ ಮಾದರಿಗಿಂತಲೂ ಕಠಿಣವಾಗಿರುತ್ತದೆ ಎಂದು ಭಾವಿಸಬೇಕಾಗುತ್ತದೆ ಎಂದು ಹೇಳಿದರು.

ಜಗತ್ತಿನಲ್ಲಿ ಹಿಂದೂಗಳಿಗೆ ಇರುವುದು ಭಾರತ ಒಂದೇ ದೇಶ. ಒಂದು ಕಡೆ ಬಂಗಾಳಕೊಲ್ಲಿ, ಇನ್ನೊಂದು ಕಡೆ ಅರಬ್ಬಿ ಸಮುದ್ರ, ನಾವು ಎಲ್ಲಿಗೆ ಹೋಗುವುದು? ನಾವು ಇಲ್ಲಿಯೇ ಉಳಿಯಬೇಕು, ಉಳಿಯಲು ದೇಶವನ್ನು ಉಳಿಸಿಕೊಳ್ಳಬೇಕು. ದೇಶದ ಸುಭದ್ರತೆ ಕಾಪಾಡಬೇಕು. ಹಿಂದೂಗಳ ರಕ್ಷಣೆಯನ್ನು ನಾವೇ ಮಾಡಬೇಕು. ಈ ವಿಚಾರದಲ್ಲಿ ಭಯೋತ್ಪಾದಕರಿಗೆ ಪ್ರತ್ಯುತ್ತರ ನೀಡಲು ಪ್ರಧಾನಿ ಮೋದಿಯವರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ನಾವೆಲ್ಲರೂ ಮೋದಿಯವರಿಗೆ ಕೈ ಜೋಡಿಸಬೇಕು ಎಂದು ಜ್ಯೋತಿಗಣೇಶ್ ತಿಳಿಸಿದರು.

ವಿವಿಧ ಸಮಾಜಗಳ ಮುಖಂಡರು ಮಾತನಾಡಿ, ಜಮ್ಮು ಮತ್ತು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಮಾಡಬೇಕು, ಕಾಶ್ಮೀರದ ಭಯೋತ್ಪಾದನಾ ಕೃತ್ಯ, ಪಶ್ಚಿಮ ಬಂಗಾಳದಲ್ಲಿ ಹಿಂದೂಗಳ ಮೇಲಿನ ಹಿಂಸಾಚಾರದ ತನಿಖೆ ನಡೆಸಬೇಕು. ಪಾಕಿಸ್ತಾನಿ, ಬಾಂಗ್ಲಾದೇಶಿ ಹಾಗೂ ರೊಹಿಂಗ್ಯಾ ಅಕ್ರಮ ವಲಸಿಗರನ್ನು ಗುರುತಿಸಿ ಅವರ ದೇಶಕ್ಕೆ ಹೊರದಬ್ಬಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ವಿಶ್ವ ಹಿಂದೂ ಪರಿಷತ್‌ನ ಜಿ.ಕೆ.ಶ್ರೀನಿವಾಸ್, ಜಿ.ಎಸ್.ಬಸವರಾಜು, ಆರ್‌ಎಸ್‌ಎಸ್‌ನ ನಾಗೇಂದ್ರಪ್ರಸಾದ್, ಜಿಲ್ಲಾ ಬ್ರಾಹ್ಮಣಾ ಸಭಾದ ಅಧ್ಯಕ್ಷ ಚಂದ್ರಶೇಖರ್, ರಾಜ್ಯ ಸಭಾದ ನಿರ್ದೇಶಕ ಹರೀಶ್, ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಬ್ಯಾಟರಂಗೇಗೌಡ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ನವಚೇತನ್, ನಗರ ಅಧ್ಯಕ್ಷ ಧನುಷ್, ವಿವಿಧ ಸಮಾಜಗಳ ಮುಖಂಡರಾದ ಆರ್.ಎಲ್.ರಮೇಶ್‌ಬಾಬು, ಶೀತಲ್ ಜೈನ್, ಲಕ್ಷ್ಮಣ್, ಸಿ.ಎನ್.ರಮೇಶ್, ಮಂಜುನಾಥ್, ಎಂ.ಕೆ.ನಾಗರಾಜರಾವ್, ಗುರುಪ್ರಸಾದ್ ಬಳ್ಳುಕರಾಯ, ಟಿ.ಜಿ.ವೇದಮೂರ್ತಿ, ರಾಜೇಶ್ವರಿ ರುದ್ರಪ್ಪ, ಸಿದ್ಧಲಿಂಗಪ್ಪ, ಸಿದ್ದರಾಮಯ್ಯ, ಪ್ರಸನ್ನಕುಮಾರ್ ಮೊದಲಾದವರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!