ಜಿಲ್ಲೆಯ ಹಳೆ ರೈಲ್ವೆ ಯೋಜನೆಗೆ ₹7800 ಕೋಟಿ: ಕೇಂದ್ರ ಸಚಿವ ವಿ.ಸೋಮಣ್ಣ

KannadaprabhaNewsNetwork |  
Published : Feb 27, 2026, 01:30 AM IST
26ಕೆಡಿವಿಜಿ2-ದಾವಣಗೆರೆ ತಾ. ಆನಗೋಡು ಗ್ರಾಮದ ನೂತನ ರೈಲ್ವೇ ನಿಲ್ದಾಣದಲ್ಲಿ ತೋಣಹುಣಸೆ-ಆನಗೋಡು ರೈಲ್ವೇ ಕಾಮಗಾರಿಯನ್ನು ಮೋಟಾರ್ ಟ್ರ್ಯಾಲಿಯಲ್ಲಿ ಸಂಚರಿಸಿ, ವೀಕ್ಷಿಸಿದ ನಂತರ ಕೇಂದ್ರ ಸಚಿವ ವಿ.ಸೋಮಣ್ಣ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಶಾಸಕ ಕೆ.ಎಸ್.ಬಸವಂತಪ್ಪ ಇತರರೊಂದಿಗೆ ಚರ್ಚಿಸುತ್ತಿರುವುದು. | Kannada Prabha

ಸಾರಾಂಶ

ರೈಲ್ವೆ ಯೋಜನೆಗಳಿಗೆ ಕೇಂದ್ರ ಸರ್ಕಾರ 58000 ಕೋಟಿ ರು. ನೀಡಿದ್ದು, ಬೆಂಗಳೂರು-ತುಮಕೂರು-ಚಿತ್ರದುರ್ಗ-ದಾವಣಗೆರೆ, ದಾವಣಗೆರೆ-ರಾಯದುರ್ಗ, ರಾಯದುರ್ಗ-ತುಮಕೂರು, ತಾಳಗುಪ್ಪ ರೈಲ್ವೆ ಮಾರ್ಗಗಗಳ ಅಭಿವೃದ್ದಿಗೆ 7800 ಕೋಟಿ ರು. ನೀಡಿರುವುದಾಗಿ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ರೈಲ್ವೆ ಯೋಜನೆಗಳಿಗೆ ಕೇಂದ್ರ ಸರ್ಕಾರ 58000 ಕೋಟಿ ರು. ನೀಡಿದ್ದು, ಬೆಂಗಳೂರು-ತುಮಕೂರು-ಚಿತ್ರದುರ್ಗ-ದಾವಣಗೆರೆ, ದಾವಣಗೆರೆ-ರಾಯದುರ್ಗ, ರಾಯದುರ್ಗ-ತುಮಕೂರು, ತಾಳಗುಪ್ಪ ರೈಲ್ವೆ ಮಾರ್ಗಗಗಳ ಅಭಿವೃದ್ದಿಗೆ 7800 ಕೋಟಿ ರು. ನೀಡಿರುವುದಾಗಿ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.

ತಾಲೂಕಿನ ತೋಳಹುಣಸೆ, ಅನಗೋಡು ಗ್ರಾಮಗಳಲ್ಲಿ ಗುರುವಾರ ದಾವಣಗೆರೆ-ತೋಣಹುಣಸೆ-ಆನಗೋಡು ರೈಲ್ವೇ ಮಾರ್ಗ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರ ಸರ್ಕಾರವು ರೈಲ್ವೇ ಇಲಾಖೆಯ ರಾಜ್ಯದ ಹಳೆಯ ಯೋಜನೆ, ಕಾಮಗಾರಿಗಳನ್ನು ಪೂರ್ಣಗೊಳಿಸಲು ಈಗಾಗಲೇ 52 ಸಾವಿರ ಕೋಟಿ ರು. ಅನುದಾನ ಒದಗಿಸಿದೆ ಎಂದರು.

ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲ್ವೆ ಮಾರ್ಗ, ಬೆಂಗಳೂರು-ತುಮಕೂರು ಮಾರ್ಗ, ರಾಯದುರ್ಗ-ತುಮಕೂರು ಮಾರ್ಗ, ತಾಳಗುಪ್ಪ ರೈಲ್ವೆ ಮಾರ್ಗಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದೇವೆ. ತುಮಕೂರು-ಚಿತ್ರದುರ್ಗ-ದಾವಣಗೆರೆ ರೈಲ್ವೇ ಮಾರ್ಗದಲ್ಲಿ 2 ಸಾವಿರ ಎಕರೆಗೂ ಅಧಿಕ ಜಾಗದಲ್ಲಿ 246 ಎಕರೆ ಹೊರತುಪಡಿಸಿದರೆ, ಉಳಿದಿದ್ದು ಸಮಸ್ಯೆ ಇಲ್ಲ. 211 ಎಕರೆ ಒಂದೇ ಕಡೆ ಇದ್ದು, 11 ಎಕರೆ ಚಿತ್ರದುರ್ಗದಲ್ಲಿ, ಉಳಿದ ಜಾಗ ಬೇರೆ ಬೇರೆ ಕಡೆ ಇದೆ. ಇನ್ನು 2-3 ತಿಂಗಳಲ್ಲೇ ಎಲ್ಲಾ ಪ್ರಕ್ರಿಯೆ ಮುಗಿಸುತ್ತೇವೆ ಎಂದು ಹೇಳಿದರು.

ಹಿಂದೆ ದಾವಣಗೆರೆ ಮಾಜಿ ಸಂಸದ ದಿವಂಗತ ಜಿ.ಮಲ್ಲಿಕಾರ್ಜುನಪ್ಪ, ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ ನೇರ ರೈಲ್ವೇ ಮಾರ್ಗದ ಯೋಜನೆ ರೂಪಿಸದಿದ್ದರೆ ಇಂತಹದ್ದೊಂದು ಮಹತ್ವದ ಯೋಜನೆ ಆಗುತ್ತಿತ್ತಾ? ಈ ಬಗ್ಗೆಯೂ ನಾವುಗಳು ಚಿಂತನೆ ಮಾಡಬೇಕು. ಯಾರ ಕಾಲದಲ್ಲಿ ಆಗಿದ್ದು ಎಂಬುದಕ್ಕಿಂತಲೂ ಯೋಜನೆ ಕಾರ್ಯ ರೂಪಕ್ಕೆ ಬರಬೇಕು. ಜನರಿಗೆ ಅನುಕೂಲವಾಗಬೇಕು ಎಂದರು.

ಜೆಜೆಎಂ ಯೋಜನೆಯನ್ನೇ ಕೈಬಿಡುವ ಆಲೋಚನೆ ಪ್ರಧಾನಿಯವರಲ್ಲಿತ್ತು. ಆದರೆ, ಯೋಜನೆಯ ಮೇಲ್ಮಟ್ಟದ ಅಧಿಕಾರಿಗಳನ್ನು ತೆಗೆದು ಹಾಕಿ, ಕೆಳ ಮಟ್ಟದ ಪಂಚಾಯಿತಿ, ನಗರಸಭೆ, ಪುರಸಭೆಗಳಿಗೆ ಜೆಜೆಎಂ ಜವಾಬ್ಧಾರಿ ನೀಡಿ, ನಿರ್ವಹಣೆಗೆ ಹೊಸ ಯೋಜನೆಯನ್ನು ಕೇಂದ್ರ ಸರ್ಕಾರ ರೂಪಿಸಿದೆ. ಬಜೆಟ್ ನಂತರ ರಾಜ್ಯದಲ್ಲಿ ಕೆಲಸಗಳನ್ನು ಆರಂಭಿಸುತ್ತೇವೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿ ರೈಲ್ವೇ ಮತ್ತು ಜಲಶಕ್ತಿ ಇಲಾಖೆಗಳಲ್ಲಿ ಮಹತ್ತರ ಯೋಜನೆಗಳು ಜಾರಿಗೊಳ್ಳುತ್ತಿವೆ. ದೇಶದ ಅಭಿವೃದ್ಧಿಯಾಗುವಾಗ ಕರ್ನಾಟಕವೂ ಅಭಿವೃದ್ಧಿಯಾಗಬೇಕು ಎಂದರು.

ವಿಕಸಿತ ಭಾರತ 2047ಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ 2026-27ನೇ ಸಾಲಿನ ದೇಶದ ಅಭಿವೃದ್ಧಿಗೆ ಮುನ್ಸೂಚನೆಯಾಗಿದೆ. ಪ್ರಧಾನಿ ಮೋದಿ ದೇಶದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ದಾಪುಗಾಲಿಡಲು ಎಲ್ಲಾ ಇಲಾಖೆ, ಕ್ಷೇತ್ರಗಳಲ್ಲೂ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ. ಈಗಾಗಲೇ ನಾಗಾಲೋಟದಲ್ಲಿ ಸರ್ಕಾರದ ಕಾರ್ಯಕ್ರಮಗಳೂ ನಡೆದಿವೆ. ರೈಲ್ವೇ, ಜಲಶಕ್ತಿ ಇಲಾಖೆಗಳು ನಮ್ಮ ವ್ಯವಸ್ಥೆಯಲ್ಲಿ ಬರುತ್ತಿದೆ. ದೇಶದಲ್ಲಿ ಅಭಿವೃದ್ಧಿಯಲ್ಲಿ ಮೊದಲ ಸ್ಥಾನದಲ್ಲಿರುವುದು ರೈಲ್ವೆ ಇಲಾಖೆ ಎಂದು ವಿವರಿಸಿದರು.

ಜಲಶಕ್ತಿ ಯೋಜನೆಯಡಿ ದೇಶಾದ್ಯಂತ ಶುದ್ಧ ನೀರೊದಗಿಸಲಾಗುತ್ತಿದೆ. ದೇಶದ ವಿವಿಧೆಡೆ ಸುಮಾರು 3 ಕೋಟಿ ಜನರು ಶುದ್ಧ ಕುಡಿಯುವ ನೀರು ಕುಡಿಯುತ್ತಿದ್ದಾರೆ. 15.67 ಕೋಟಿ ಮನೆಗಳಿಗೆ ಶುದ್ಧ ಕುಡಿಯುವ ನೀರಿಗಾಗಿ 5 ಲಕ್ಷ ಕೋಟಿ ಬಿಡುಗಡೆ ಮಾಡಲಾಗಿದೆ. ಅಧಿವೇಶನ ಮುಗಿದ ನಂತರ ಸಭೆ ಮಾಡಿ, ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಚಿವರ ಸಭೆ ಕರೆದು, ಶಾಶ್ವತ ಕುಡಿಯುವ ನೀರಿನ ಯೋಜನೆಗಳಿಗೆ ಏನು ಮಾಡಿದ್ದಾರೆಂಬುದನ್ನು ನೋಡಿ, ಕೇಂದ್ರದಿಂದ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ಯುವ ಮುಖಂಡ ಜಿ.ಎಸ್.ಅನಿತ್‌ಕುಮಾರ, ರೈಲ್ವೆ ಅಧಿಕಾರಿಗಳು, ಮುಖಂಡರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾಲು ಉತ್ಪಾದಕರ ಸಂಘದ ನೂತನ ಕಟ್ಟಡ ಕಾಮಗಾರಿಗೆ ಭೂಮಿಪೂಜೆ
ಜಿಲ್ಲೆಯ ರೈಲ್ವೆ, ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದ ವಿ,ಸೋಮಣ್ಣ