ಹೈನುಗಾರಿಕೆಯಿಂದ ಮಾಸಿಕ 77 ಸಾವಿರ ರು. ಆದಾಯ

KannadaprabhaNewsNetwork |  
Published : May 24, 2025, 12:40 AM ISTUpdated : May 24, 2025, 12:41 AM IST
10 | Kannada Prabha

ಸಾರಾಂಶ

ಮೈಸೂರು ತಾಲೂಕು ಮೇಗಳಾಪುರದ ರೈತ ಜಗದೀಶ್‌ ಅವರು ಸಮಗ್ರ ಕೃಷಿ ಅನುಸರಿಸುತ್ತಿದ್ದಾರೆ. ರೇಷ್ಮೆ, ಹೈನುಗಾರಿಕೆ, ಕುರಿ, ನಾಟಿ ಕೋಳಿ ಸಾಕಾಣಿಕೆ, ವಿವಿಧ ಜಾತಿಯ ಹಣ್ಣು ಬೆಳೆಯುತ್ತಾ ವಾರ್ಷಿಕ 10-12 ಲಕ್ಷ ರು. ಆದಾಯ ಗಳಿಸುತ್ತಿದ್ದಾರೆ.

ಅಂಶಿ ಪ್ರಸನ್ನಕುಮಾರ್‌

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ತಾಲೂಕು ಮೇಗಳಾಪುರದ ರೈತ ಜಗದೀಶ್‌ ಅವರು ಸಮಗ್ರ ಕೃಷಿ ಅನುಸರಿಸುತ್ತಿದ್ದಾರೆ. ರೇಷ್ಮೆ, ಹೈನುಗಾರಿಕೆ, ಕುರಿ, ನಾಟಿ ಕೋಳಿ ಸಾಕಾಣಿಕೆ, ವಿವಿಧ ಜಾತಿಯ ಹಣ್ಣು ಬೆಳೆಯುತ್ತಾ ವಾರ್ಷಿಕ 10-12 ಲಕ್ಷ ರು. ಆದಾಯ ಗಳಿಸುತ್ತಿದ್ದಾರೆ.

ಅವರಿಗೆ ನಾಲ್ಕು ಎಕರೆ ಜಮೀನಿದೆ. ಎರಡು ಕೊಳವೆ ಬಾವಿ ಕೊರೆಸಿದ್ದಾರೆ. ಒಂದೂವರೆ ಎಕರೆಯಲ್ಲಿ ಹಿಪ್ಪುನೇರಳೆ ಬೆಳೆದಿದ್ದು, ವಾರ್ಷಿಕ 10 ರೇಷ್ಮೆ ಬೆಳೆ ತೆಗೆಯುತ್ತಾರೆ. ರೇಷ್ಮೆಗೂಡನ್ನು ಮೈಸೂರಿನ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ. ಪ್ರತಿ ಬೆಳೆಗೆ 50-60 ಸಾವಿರ ರು. ಸಿಗುತ್ತದೆ. ಖರ್ಚು ಕಳೆದು 40 ಸಾವಿರ ರು.ವಾದರೂ ಸಿಗುತ್ತದೆ.

ತೆಂಗು-200, ಅಡಿಕೆ- 450 ಮರಗಳಿವೆ. ತೆಂಗಿನ ಕಾಯಿನ್ನು ಕೊಬ್ಬರಿ ಮಾಡಿ ಮಾರಾಟ ಮಾಡುವುದರಿಂದ ವಾರ್ಷಿಕ 2 ರಿಂದ 4 ಲಕ್ಷ ರು.ವರೆಗೂ ಆದಾಯವಿದೆ.ಅಡಕೆ ಫಸಲು ಈಗ ಬರುತ್ತಿದೆ ಕಳೆದ ಬಾರಿ 3 ಕ್ವಿಂಟಲ್‌ ಆಗಿತ್ತು. ಪ್ರತಿ ಕ್ವಿಂಟಲ್‌ 5,500 ರು.ಗೆ ಮಾರಾಟವಾಯಿತು. ಇದಲ್ಲದೇ ಬಟರ್‌ ಫ್ರೂಟ್‌- 100, ಮಾವು-2, ಹಲಸು-2, ಹಿರಳಿಕಾಯಿ- 3, ಮೊಸಂಬಿ-1, ಸಪೋಟ-2, ಸೀಬೆ-4 ಗಿಡಗಳಿವೆ. ಹಿಂದೆ ಏಲಕ್ಕಿ ಬಾಳೆ ಕೂಡ ಬೆಳೆಯುತ್ತಿದ್ದರು. ಕೊಬ್ಬರಿಯನ್ನು ನಾಗಮಂಗಲ, ಶ್ರೀರಂಗಪಟ್ಟಣಕ್ಕೆ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಿದ್ದರು. ಈಗ ಜಮೀನಿನ ಬಳಿಯೇ ಬಂದು ಖರೀದಿಸುತ್ತಾರೆ.

ಹೈನುಗಾರಿಕೆ ಇವರ ಮುಖ್ಯ ಉಪ ಕಸುಬು. 9 ಹಸುಗಳಿದ್ದು, ಪ್ರತಿನಿತ್ಯ ಡೇರಿಗೆ 65-70 ಲೀಟರ್‌ ಹಾಲು ಪೂರೈಸುತ್ತಾರೆ. ಹಾಲು ಪೂರೈಕೆಯಿಂದಲೇ ಮಾಸಿಕ 77 ಸಾವಿರ ರು. ಗಳಿಸುತ್ತಿದ್ದಾರೆ. 10 ಕುರಿಗಳಿವೆ. 150 ನಾಟಿ ಕೋಳಿಗಳಿವೆ. ಬಕ್ರೀದ್‌ ಹಬ್ಬದ ಸಂದರ್ಭದಲ್ಲಿ ಕುರಿಗಳನ್ನು ಮಾರಾಟ ಮಾಡಿ, ಉತ್ತಮ ಆದಾಯ ಗಳಿಸುತ್ತಾರೆ. ಜಾನುವಾರುಗಳಿಗೆ ಬೇಕಾದ ಫಾರಂ ಹುಲ್ಲನ್ನು ಅವರೇ ಬೆಳೆಯುತ್ತಾರೆ. ರೇಷ್ಮೆ ಇಲಾಖೆಯಿಂದ ಹನಿ ನೀರಾವರಿ, ಕೃಷಿ ಇಲಾಖೆಯಿಂದ ತುಂತುರು ನೀರಾವರಿ ಸೌಲಭ್ಯಕ್ಕೆ ಸಹಾಯಧನ ಪಡೆದಿದ್ದಾರೆ. ಮೈಸೂರಿನ ಬನ್ನಿಮಂಟಪದಲ್ಲಿರುವ ಒಡಿಪಿ ಸಂಸ್ಥೆಯಲ್ಲಿ ಮಣ್ಣು ಪರೀಕ್ಷೆ ಮಾಡಿಸುತ್ತಾರೆ. ರೇಷ್ಮೆ ಬೆಳೆ ಹೊರತುಪಡಿಸಿ ಉಳಿದೆಲ್ಲಾ ಬೆಳೆಗೆ ಕೊಟ್ಟಿಗೆ ಗೊಬ್ಬರ ಬಳಕೆ ಮಾಡುತ್ತಾರೆ.

ಒಟ್ಟಾರೆ ಎಲ್ಲಾ ಬೆಳೆಗಳಿಂದ ವಾರ್ಷಿಕ 10-12 ಲಕ್ಷ ರು.ವರೆಗೆ ಆದಾಯವಿದೆ.

ಜಗದೀಶ್‌ ಅವರಿಗೆ 2021 ರಲ್ಲಿ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ದೊರೆತಿದೆ.

ಪಶುಸಂಗೋಪನಾ ವಿಭಾಗದಲ್ಲಿ ಜಗದೀಶ್‌ ಅವರ ಸಾಧನೆಗಾಗಿ 2023ರ ರೈತ ದಸರಾದಲ್ಲಿ ಸನ್ಮಾನಿಸಲಾಗಿದೆ.2013-14ನೇ ಸಾಲಿನಲ್ಲಿ ಕೂಡ ಸನ್ಮಾನಿಸಲಾಗಿತ್ತು.

ಸಂಪರ್ಕ ವಿಳಾಸಃ

ಜಗದೀಶ್‌ ಬಿನ್‌ ಲೇಟ್‌ ಚಿಕ್ಕಯ್ಯ

ಮೇಗಳಾಪುರ

ವರುಣ ಹೋಬಳಿ

ಮೈಸೂರು ತಾಲೂಕು

ಮೈಸೂರು ಜಿಲ್ಲೆ

ಮೊ.92429 29101

ಕೃಷಿ ಕಷ್ಟ ಏನಿಲ್ಲ. ನಾವು ಕಷ್ಟಪಟ್ಟು ಮಾಡಬೇಕಷ್ಟೇ. ಆ ರೀತಿಯಾದಲ್ಲಿ ಆದಾಯ ಗಳಿಸಬಹುದು.

- ಜಗದೀಶ್‌, ಮೇಗಳಾಪುರ

PREV

Recommended Stories

ಬಿಆರ್‌ಎಲ್ ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಚಿರಕಾಲ ಉಳಿಯುವ ಆಪ್ತಭಾವದ ಕವಿ
ದಸರಾ ವೇಳೆ ಬಾನುರಿಂದ 2023ರ ಘಟನೆ ಮರುಕಳಿಸಬಾರ್ದು : ಯದುವೀರ್‌