ಎನ್.ಪಂಪನಗೌಡ ಬಾದನಹಟ್ಟಿ
ತಾಲೂಕಿನಲ್ಲಿ ಮುಂಗಾರು ಸಂಪೂರ್ಣ ಕೈಕೊಟ್ಟಿದ್ದು, ಶೇ. 81ರಷ್ಟು ಮಳೆ ಕೊರತೆಯಾಗಿದೆ. ಅದರಲ್ಲೂ ಜ. 1ರಿಂದ ಜುಲೈ 31ರ ತನಕ ಶೇ. 39 ಸೆಂ.ಮೀ. ಮಳೆ ಆಗಬೇಕಿತ್ತು. ಆದರೆ ಕೇವಲ 7.7 ಸೆಂ.ಮೀ. ಮಳೆಯಾಗಿದೆ. ನೀರಾವರಿ ಅಚ್ಚುಕಟ್ಟು ಪ್ರದೇಶದಲ್ಲಿ ಸುಮಾರು 18 ಸಾವಿರ ಹೆಕ್ಟೇರ್ ಭತ್ತ ನಾಟಿ ಆಗಬೇಕಾಗಿತ್ತು. ಆದರೆ, ಜಲಾಶಯದಲ್ಲಿ ನೀರಿನ ಕೊರತೆ ಹಿನ್ನೆಲೆ ಭೂಮಿ ಬರಡಾಗಿದೆ. ಇನ್ನು ಕೊಳವೆಬಾವಿ ಆಶ್ರಯಿಸಿ 355 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಿದೆ. ಆರಂಭದಲ್ಲಿ ಗೆಣಿಕೆಹಾಳ್, ಮುಷ್ಟಗಟ್ಟೆ, ಕ್ಯಾದಿಗೆಹಾಳ್, ಎಚ್.ವೀರಾಪುರ, ಸೋಮಲಾಪುರ, ಗುತ್ತಿಗೆನೂರು ಮಳೆಯಾಗಿದೆ. ನಂತರದಲ್ಲಿ ಕೈಕೊಟ್ಟಿದ್ದು ಬೆಳೆಗಳು ಒಣಗಿವೆ. ಜತೆಗೆ ಬೋರ್‌ವೆಲ್‌ಗಳಲ್ಲಿಯೂ ನೀರು ಕಡಿಮೆಯಾಗುತ್ತಿದೆ. ತುಂಗಭದ್ರಾ ಜಲಾಶಯಕ್ಕೆ ನೀರಿನ ಹರಿವು ಕಡಿಮೆಯಿದ್ದು ಅವಧಿ ಮೀರಿದರೂ ಜಲಾಶಯ ತುಂಬಿಲ್ಲ. ಇದರಿಂದ ಭತ್ತ ಮೆಣಸಿನಕಾಯಿ ಹತ್ತಿ ಮತ್ತು ಮೆಕ್ಕೆಜೋಳ ಬೆಳೆಯುವ ನೀರಾವರಿ ಜಮೀನಿನ ರೈತರಲ್ಲೂ ಆತಂಕ ಶುರುವಾಗಿದೆ.
ಭತ್ತ ಮತ್ತು ಮೆಣಸಿನಕಾಯಿ ಸಸಿ ಬೆಳೆಸಿ ಕಾಲುವಿಗೆ ನೀರಿಗಾಗಿ ಕಾಯುತ್ತಿದ್ದೇವೆ. ಸಸಿ ನಾಟಿ ಹಂತ ತಲುಪಿವೆ. ಅವಧಿ ಮೀರಿದರೆ ಏನು ಮಾಡುವುದು ಎನ್ನುವ ಚಿಂತೆಯಲ್ಲಿ ರೈತರ ದಿನ ದೂಡುವಂತಾಗಿದೆ.ಮಳೆ ಕೊರತೆ ಹಿನ್ನೆಲೆ ತಾಲೂಕಿನಲ್ಲಿ ಬಿತ್ತನೆ ಪ್ರಮಾಣ ಕುಸಿತವಾಗಿದೆ. ಜತೆಗೆ ಕೊಳವೆ ಬಾವಿ ಆಶ್ರಯಿಸಿ 355 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಆಗಿದೆ. ಹೀಗಾಗಿ, ರೈತರು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ವಿವಿಧ ಕೃಷಿ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಬೇಕು ಎಂದು ಕೃಷಿ ಇಲಾಖೆಯ ಉಪ ನಿರ್ದೇಶಕ ಮಂಜುನಾಥ ತಿಳಿಸಿದ್ದಾರೆ.
ಕಳೆದ ಹಂಗಾಮಿನಲ್ಲಿ ಕೂಲಿ ಕಾರ್ಮಿಕರಿಗೆ ಭಾರಿ ಬೇಡಿಕೆ ಇತ್ತು. ಆದರೆ, ಈ ಬಾರಿ ಮಳೆ ಇಲ್ಲದ ಪರಿಣಾಮ ಕೆಲಸಕ್ಕೆ ಕರೆಯೋರೆ ಇಲ್ಲ. ಹೀಗಾಗಿ, ಜೀವನ ನಿರ್ವಹಣೆ, ಮಕ್ಕಳ ಶಾಲೆ ಶುಲ್ಕ, ಔಷಧ ಖರೀದಿಗೂ ದುಸ್ತರವಾಗಿದೆ ಎಂದು ಅಳಲು ತೋಡಿಕೊಳ್ಳುತ್ತಾರೆ ಬಾದನಹಟ್ಟಿಯ ಕೂಲಿ ಕಾರ್ಮಿಕ ಪೂಜಾರಿ.