ಕನ್ನಡಪ್ರಭ ವಾರ್ತೆ ಮೂಡಲಗಿ
ಇಲ್ಲಿನ ನಾಗನೂರ ಪಟ್ಟಣದಲ್ಲಿ ಚೌಡಯ್ಯನವರ ವೃತ್ತದಿಂದ ಬಸವೇಶ್ವರ ವೃತ್ತದವರಿಗೆ ಪ್ರತಿಭಾಟನಾ ರ್‍ಯಾಲಿ ನಡೆಸಿದ ಪ್ರತಿಭಟನಾಕಾರರು, ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆದು, ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಮೂಡಲಗಿ ತಹಸೀಲ್ದಾರ್ ಶ್ರೀಶೈಲ್ ಗುಡಮೆ ಮುಖಾಂತರ ರಾಜ್ಯದ ಗೃಹ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.
12ನೇ ಶತಮಾನದ ಮಹಾಶರಣ, ಮಾನವತಾವಾದಿ ಮತ್ತು ತಳ ಸಮುದಾಯದ ಒಳಿತಿಗಾಗಿ ಶ್ರಮಿಸಿ ಮೇಲ್ವರ್ಗದವರ ದೌರ್ಜನ್ಯ ಮತ್ತು ದಬ್ಬಾಳಿಕೆಯನ್ನು ತನ್ನ ಹರಿತವಾದ ಮಾತಿನ ಮೂಲಕ ವಚನಗಳನ್ನು ರಚಿಸಿ, ಇಡೀ ಶೋಷಿತ ವರ್ಗದ ಪ್ರತಿನಿಧಿಯಂತೆ ಬದುಕಿದ್ದ ನಿಜಶರಣರ ಮೂರ್ತಿ ಭಗ್ನಗೊಳಿಸಿರುವುದು ಮನುಕುಲವೇ ತಲೆ ತಗ್ಗಿಸುವಂತ ದುರದುಷ್ಟಕರ ಸಂಗತಿ ಎಂದು ಕಿಡಿಕಾರಿದರು.ನಿಜಶರಣ ಅಂಬಿಗರ ಚೌಡಯ್ಯನವರು ಒಂದು ಜಾತಿಗೆ ಸೀಮಿತವಾಗಿರಲಿಲ್ಲ. ಬದಲಿಗೆ ಅವರು ಇಡೀ ಮನುಕುಲದ ಒಳಿತಿಗಾಗಿ ಶ್ರಮಿಸಿದ ಮಹಾನ್ ಶರಣರಾಗಿದ್ದು, ಅವರ ಪುತ್ಥಳಿಯನ್ನು ಕಿಡಿಗೇಡಿಗಳು ವಿರೂಪಗೊಳಿಸಿ ತಮ್ಮ ವಿಕೃತಿ ಮೆರೆದಿರುವುದು ಇಡೀ ಮನುಕುಲವೇ ತಲೆ ತಗ್ಗಿಸುವಂತೆ ಮಾಡಿದೆ ಮತ್ತು ನಿಜಶರಣ ಅಂಬಿಗರ ಚೌಡಯ್ಯನವರ ಅನುಯಾಯಿಗಳ ಮನಸ್ಸಿಗೆ ಘಾಸಿಯುಂಟಾಗಿದೆ. ಇದು ಕೇವಲ ಅವರ ಪುತ್ಥಳಿ ಮೇಲೆ ಮಾಡಿದ ದಾಳಿಯಲ್ಲ ಬದಲಿಗೆ ಅವರ ತತ್ವ, ಸಿದ್ಧಾಂತಗಳ ಮೇಲೆ ಮಾಡಿದ ದಾಳಿಯಾಗಿದೆ. ಇಂತಹ ಘಟನೆಯಿಂದ ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಮತ್ತು ಸಮುದಾಯದವರ ಆತ್ಮಸ್ಥೈರ್ಯ ಕುಗ್ಗಿಸುವಂತಹ ಕೃತ್ಯ ಮಾಡಿರುವ ವಿಕೃತ ಮನಸ್ಸಿನ ಕಿಡಿಗೇಡಿಗಳನ್ನು ಮತ್ತು ಕಂಟಕರನ್ನು ಕೂಡಲೇ ಬಂಧಿಸಿ ಅವರಿಗೆ ಉಗ್ರ ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ವೆಂಕಪ್ಪ ಪೂಜಾರಿ, ಬಸವರಾಜ್ ಪೂಜಾರಿ, ಶಂಕರ್ ಪೂಜಾರಿ, ಮಾಂತೇಶ್ ಪೂಜಾರಿ, ದುಂಡಪ್ಪ ನಂದಗಾವ್, ರಾಜು ತಳವಾರ್, ಮಲ್ಲಿಕಾರ್ಜುನ ದಿನ್ನಿಮನಿ, ಜಗ್ಗು ಜಗದ್ಮನಿ, ಮುತ್ತೆಪ್ಪ ಪೂಜಾರಿ, ತುಕಾರಾಮ ಪೂಜಾರಿ, ಸತ್ತೆಪ್ಪ ಪೂಜಾರಿ, ಲಕ್ಷ್ಮಣ್ ಪೂಜಾರಿ, ಕಲ್ಲಪ್ಪ ಪೂಜಾರಿ, ಬರಮಪ್ಪ ಪೂಜಾರಿ, ಯಲ್ಲಪ್ಪ ಸುಣಗಾರ, ಓಂಕಾರ್ ಸುಣಗಾರ್, ಅಡಿಗಪ್ಪ ಪೂಜಾರಿ ಮತ್ತು ಸಮಾಜದ ಮುಂಖಂಡರು ಮತ್ತಿತರರು ಭಾಗವಹಿಸಿದ್ದರು.